ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ.ಕೆ.ಬಿ.ಪ್ರಭುಪ್ರಸಾದ್‌ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಿ: ಎಸ್‌.ಶಿವಾಜಿ ಮನವಿ

ಪ್ರೊ.ಕೆ.ಬಿ.ಪ್ರಭುಪ್ರಸಾದ್‌ ಅವರಿಗೆ ಅಭಿನಂದನೆ ಹಾಗೂ ‘ಪ್ರಶಾಂತ’ ಅಭಿನಂದನಾ ಗ್ರಂಥ ಬಿಡುಗಡೆ
Last Updated 31 ಅಕ್ಟೋಬರ್ 2021, 8:40 IST
ಅಕ್ಷರ ಗಾತ್ರ

ಮೈಸೂರು: ‘ಲೇಖಕ, ಅನುವಾದ, ಸಂಗೀತಗಾರ ಹೀಗೆ ಬಹುಮುಖ ಪ್ರತಿಭೆಯುಳ್ಳ ಪ್ರೊ.ಕೆ.ಬಿ. ಪ್ರಭುಪ್ರಸಾದ್‌ ಅವರ ಸಾಧನೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು’ ಎಂದು ಡಿ.ಬನುಮಯ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಸ್‌.ಶಿವಾಜಿ ಜೋಯಿಸ್‌ ಮನವಿ ಮಾಡಿದರು.

ಪ್ರೊ.ಕೆ.ಬಿ.ಪ್ರಭುಪ್ರಸಾದ್‌ ಅಭಿನಂದನಾ ಸಮಿತಿ, ಸತ್ಯಸಾಯಿ ಬಾಬಾ ಶಾಲೆ ಮತ್ತು ಪಿಯು ಕಾಲೇಜು, ಸಪ್ತಸ್ವರ ಬಳಗ ಟ್ರಸ್ಟ್‌ ಹಾಗೂ ಸಂವಹನ ಪ್ರಕಾಶನ ವತಿಯಿಂದ ಜಯಲಕ್ಷ್ಮೀಪುರಂನ ಸತ್ಯಸಾಯಿ ಬಾಬಾ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಪ್ರೊ.ಕೆ.ಬಿ.ಪ್ರಭುಪ್ರಸಾದ್‌ ಅವರಿಗೆ ಅಭಿನಂದನೆ ಹಾಗೂ ‘ಪ್ರಶಾಂತ’ ಅಭಿನಂದನಾ ಗ್ರಂಥ ಬಿಡುಗಡೆ’ ಸಮಾರಂಭದಲ್ಲಿ ಗ್ರಂಥದ ಕುರಿತು ಮಾತನಾಡಿದರು.

‘ಪ್ರಭುಪ್ರಸಾದ್‌ ಅವರಿಗೆ ಅನೇಕ ಪ್ರಶಸ್ತಿಗಳು ಸಂದಿದ್ದರೂ ರಾಜ್ಯೋತ್ಸವ ಪ್ರಶಸ್ತಿ ದೊರೆತಿಲ್ಲ. ಅವರು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಸ್ವಭಾವದವರೂ ಅಲ್ಲ. ಅವರ ಸಾಧನೆಯನ್ನು ಗಮನಿಸಿ ಸರ್ಕಾರವೇ 2021–22ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು’ ಎಂದು ಕೋರಿದರು.

‘ಪ್ರಭುಪ್ರಸಾದ್‌ ಅವರು ಆತ್ಮಕಥೆ ಬರೆಯಬೇಕು. ಕೃತಿಗಳ ಸಮಗ್ರ ಸಂಪುಟಗಳನ್ನು ಹೊರತರಬೇಕು’ ಎಂದು ಮನವಿ ಮಾಡಿದರು.

‘ಪ್ರಶಾಂತ’ ಅಭಿನಂದನಾ ಗ್ರಂಥವು 492 ಪುಟಗಳಿದ್ದು, ಪ್ರಭುಪ್ರಸಾದ್‌ ಅವರ ಜೀವನ ಸಾಧನೆ, ಸಾಹಿತ್ಯ ರಚನೆ ಕುರಿತು ಅನೇಕ ವಿದ್ವಾಂಸರು ಲೇಖನಗಳನ್ನು ಬರೆದಿದ್ದಾರೆ. ಅವರ ಸಮಗ್ರ ಜೀವನವನ್ನು ಪರಿಚಯಿಸುತ್ತದೆ’ ಎಂದು ಹೇಳಿದರು.

ಕೆ.ಬಿ.ಪ್ರಭುಪ್ರಸಾದ್‌ ಮಾತನಾಡಿ, ‘ನಾನು ಸಾಮಾನ್ಯ ವ್ಯಕ್ತಿ; ಅಸಾಧಾರಣ ಸಾಧನೆಯೇನೂ ಮಾಡಿಲ್ಲ. ನನಗೆ ‘ಪ್ರಶಾಂತ’ ಎಂಬ ಅಭಿನಂದನಾ ಗ್ರಂಥ ಅರ್ಪಿಸಿದ್ದಾರೆ. ಸ್ನೇಹಿತರು, ಬಂಧುಗಳು, ವಿದ್ವಾಂಸರು, ವಿಮರ್ಶಕರು ನನ್ನೊಂದಿಗಿನ ಒಡನಾಟ, ಸಾಹಿತ್ಯ ಕೃತಿಗಳ ಬಗ್ಗೆ ಅವಲೋಕನ ಮಾಡಿದ್ದಾರೆ. ನನ್ನಲ್ಲಿನ ಅವಗುಣಗಳನ್ನು ಬಿಟ್ಟು, ಗುಣಗಳನ್ನು ಮಾತ್ರ ತಮ್ಮ ಲೇಖನಗಳಲ್ಲಿ ಬರೆದಿದ್ದಾರೆ’ ಎಂದು ತಿಳಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಸರ್ವದಯಾನಂದ ಮಹಾರಾಜ್‌ ಸಾನ್ನಿಧ್ಯ ವಹಿಸಿದ್ದರು. ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ, ಪ್ರಭುಪ್ರಸಾದ್‌ ಅವರ ಪತ್ನಿ ಭಾರತಿ ಪ್ರಸಾದ್‌ ಇದ್ದರು.

‘ಬಹುಮುಖ ಪ್ರತಿಭೆ ಪ್ರಭುಪ್ರಸಾದ್‌’

ಅಭಿನಂದನಾ ಭಾಷಣ ಮಾಡಿದ ನಾರಾಯಣಾಮೃತ ಫೌಂಡೇಷನ್‌ ಸಂಸ್ಥಾಪಕ ಎನ್‌.ಆರ್‌.ರಾವ್‌, ‘ಪ್ರಭುಪ್ರಸಾದ್‌ ಅವರು ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ಸಮಾಜ ಸೇವೆ, ಅಧ್ಯಾಪನ ಹೀಗೆ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕನ್ನಡ– ಇಂಗ್ಲಿಷ್‌ ಭಾಷೆಯಲ್ಲಿ ಪ್ರೌಢಿಮೆ ಹೊಂದಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದ್ಧಾರೆ. ಕೊಳಲು ವಾದನವನ್ನೂ ಮಾಡುವ ಅವರು 33 ಭಾವಗೀತೆಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ನಾಟಕಗಳನ್ನೂ ನಿರ್ದೇಶನ ಮಾಡಿದ್ದಾರೆ’ ಎಂದು ವಿವರಿಸಿದರು.

***

ಪ್ರೊ.ಕೆ.ಬಿ. ಪ್ರಭುಪ್ರಸಾದ್‌ ಅವರು ಯಶಸ್ವಿ ಬದುಕು ನಡೆಸಿದ್ದಾರೆ. ಅವರ ಪ್ರಭಾವ ನನ್ನ ಮೇಲೂ ಬೀರಿದೆ.

– ಡಾ.ಡಿ.ಬಿ. ನಟೇಶ್‌, ಮುಡಾ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT