ವೈದ್ಯರ ಮುಷ್ಕರಕ್ಕೆ ಹೈರಣಾದ ರೋಗಿಗಳು; ಖಾಸಗಿ ಆಸ್ಪತ್ರೆಗಳಿಗೆ ಬಂದವರು ಬಸವಳಿದರು

ಶನಿವಾರ, ಜೂಲೈ 20, 2019
25 °C

ವೈದ್ಯರ ಮುಷ್ಕರಕ್ಕೆ ಹೈರಣಾದ ರೋಗಿಗಳು; ಖಾಸಗಿ ಆಸ್ಪತ್ರೆಗಳಿಗೆ ಬಂದವರು ಬಸವಳಿದರು

Published:
Updated:
Prajavani

ಮೈಸೂರು: ಪಶ್ಚಿಮ ಬಂಗಾಳದಲ್ಲಿ ಈಚೆಗೆ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ನಗರದಲ್ಲಿ ಸೋಮವಾರ ನಡೆದ ಮುಷ್ಕರಕ್ಕೆ ವೈದ್ಯರಿಂದ ಭರಪೂರ ಪ್ರತಿಕ್ರಿಯೆ ವ್ಯಕ್ತವಾಯಿತು.

ಜೆಎಸ್‌ಎಸ್‌, ಅಪೊಲೊ, ವಾತ್ಸಲ್ಯ, ಕೊಲಂಬಿಯಾ ಏಷಿಯಾ, ಅನಘ ಸೇರಿದಂತೆ ಬಹುತೇಕ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸೇವೆ ಇರಲಿಲ್ಲ. ಇದರಿಂದ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಿಗೆ ಬಂದ ರೋಗಿಗಳು ಅಕ್ಷರಶಃ ಪರದಾಡಿದರು. 

ಮುಷ್ಕರದ ಸುದ್ದಿ ತಿಳಿಯದೇ ಜ್ವರದಿಂದ ಬಳಲುತ್ತಿದ್ದ ತನ್ನ ಮೂರು ವರ್ಷದ ಮಗುವನ್ನು ಚಿಕಿತ್ಸೆಗಾಗಿ ಕರೆ ತಂದ ಚಾಮರಾಜನಗರದ ಮುತ್ತಮ್ಮ ಚಿಕಿತ್ಸೆಗಾಗಿ ಪರದಾಡಿದರು. ಮಳವಳ್ಳಿಯಿಂದ ಬಂದ ವೃದ್ಧ ರಾಮಪ್ಪ ಸಹ ಚಿಕಿತ್ಸೆಗೆ ಬೇರೆಲ್ಲಿ ಹೋಗುವುದು ಎಂದು ಕೇಳುತ್ತಿದ್ದ ದೃಶ್ಯಗಳು ಖಾಸಗಿ ಆಸ್ಪತ್ರೆಯೊಂದರ ಆವರಣದಲ್ಲಿ ಕಂಡು ಬಂದವು.

ಆಗ ಆಸ್ಪತ್ರೆ ಸಿಬ್ಬಂದಿ ಕೆ.ಆರ್.ಆಸ್ಪತ್ರೆಯಲ್ಲಿ ‘ಓಪಿಡಿ’ ಇದೆ ಎಂದು ಹೇಳಿ ಕಳುಹಿಸಿದರು. ತೀರಾ ತುರ್ತು ಚಿಕಿತ್ಸೆಗೆ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಅವಕಾಶ ಇತ್ತು. ಹೀಗಾಗಿ, ದಣಿದ ರೋಗಿಗಳನ್ನು ಸಿಬ್ಬಂದಿ ತುರ್ತು ಚಿಕಿತ್ಸಾ ಘಟಕಕ್ಕೆ ಕರೆದೊಯ್ಯುತ್ತಿದ್ದರು.

ಇತ್ತ ಕೆ.ಆರ್.ಆಸ್ಪತ್ರೆಯಲ್ಲಿ ಹೊರರೋಗಿ ಸೇವೆ ಎಂದಿನಂತೆ ನಡೆಯಿತು. ಇಲ್ಲಿಗೆ ಸೋಮವಾರ ಸಂಜೆ ಹೊತ್ತಿಗೆ 1,693  ಮಂದಿ ರೋಗಿಗಳು ಚಿಕಿತ್ಸೆಗೆ ಬಂದಿದ್ದರು. 118 ಮಂದಿ ಒಳರೋಗಿಗಳಾಗಿ ದಾಖಲಾದರು. ಕಳೆದ ಸೋಮವಾರ 1,900 ಮಂದಿ ಚಿಕಿತ್ಸೆಗೆ ಬಂದಿದ್ದರು.

ವಾರದ ಇತರ ದಿನಗಳಲ್ಲಿಯೂ ಕಾರ್ಯನಿರ್ವಹಿಸುವ ವೈದ್ಯರನ್ನು ಸೇವೆಗೆ ನಿಯೋಜಿಸಲಾಗಿತ್ತು. ಇವರೆಲ್ಲ ಕಪ್ಪುಪಟ್ಟಿ ಧರಿಸಿ ಚಿಕಿತ್ಸೆ ನೀಡಿದರು. ಇದರಿಂದ ಸೇವೆಯಲ್ಲಿ ವ್ಯತ್ಯಯವಾಗುವುದು ತಪ್ಪಿತು. ಉಳಿದಂತೆ, ಬಹುತೇಕ ಪ್ರಾಥಮಿಕ ಆರೋಗ್ಯ ಘಟಕಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಇಷ್ಟಾದರೂ ಕಿರಿಯ ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಮುಷ್ಕರ ನಿರತರಾದ್ದರಿಂದ ಸೇವೆ ಮಂದಗತಿಯಲ್ಲಿ ಸಾಗಿತು. ವಿವಿಧ ವಿಭಾಗಗಳಲ್ಲಿ ಉದ್ದನೆಯ ಸಾಲುಗಳು ಕಂಡು ಬಂದವು. ನಿಲ್ಲಲು ಆಗದ ರೋಗಿಗಳು ಅಲ್ಲಿಯೇ ಕುಳಿತುಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !