ಶುಕ್ರವಾರ, ನವೆಂಬರ್ 22, 2019
23 °C
ಉತ್ತಮ ದರ ಕೊಡಿಸುವಂತೆ ಆಗ್ರಹ, ರೈತ ಮುಖಂಡರ ಸಭೆ ನಡೆಸಿದ ಮಾರುಕಟ್ಟೆ ಅಧಿಕಾರಿ

ಹರಾಜು ಪ್ರಕ್ರಿಯೆ ಬಹಿಷ್ಕರಿಸಿದ ತಂಬಾಕು ಬೆಳೆಗಾರರು

Published:
Updated:
Prajavani

ಹುಣಸೂರು: ತಂಬಾಕಿಗೆ ಉತ್ತಮ ದರ ಕೊಡಿಸಬೇಕು ಎಂದು ಒತ್ತಾಯಿಸಿ ತಂಬಾಕು ಬೆಳೆಗಾರರು, ತಾಲ್ಲೂಕಿನ ಕಟ್ಟೆಮಳಲವಾಡಿ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಬಹಿಷ್ಕರಿಸಿ ಪ್ರತಿಭಟಿಸಿದರು.

ರೈತ ಮುಖಂಡ ನಿಲುವಾಗಿಲು ಪ್ರಭಾಕರ್ ಮಾತನಾಡಿ, ‘ಮಾರುಕಟ್ಟೆ ಆರಂಭವಾಗಿ 34 ದಿನಗಳು ಕಳೆದಿದ್ದು, ಲೋಗ್ರೇಡ್ ತಂಬಾಕನ್ನು ಕೇಳುವವರಿಲ್ಲ. ಎರಡು ಮತ್ತು ಮೂರನೇ ದರ್ಜೆ ತಂಬಾಕಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿಲ್ಲ. ಕೆಲವು ಕಂಪನಿಗಳು ‘ಎ ಗ್ರೇಡ್’ ತಂಬಾಕು ಖರೀದಿಗೆ ಸೀಮಿತವಾಗಿದ್ದು, ರೈತರಿಗೆ ನಷ್ಟ ಉಂಟಾಗುತ್ತಿದೆ’ ಎಂದು ದೂರಿದರು.

ತಂಬಾಕು ಬೆಳೆಗಾರ ಮೂರ್ತಿ ಮಾತನಾಡಿ, ‘ಆರಂಭದಲ್ಲಿ ಮಧ್ಯಮ ಗುಣಮಟ್ಟದ ತಂಬಾಕಿಗೆ ₹140ರಿಂದ ₹145 ಸಿಗುತ್ತಿತ್ತು. ಈಗ ಅದೇ ತಂಬಾಕಿಗೆ ₹105 ನೀಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಈ ಗುಣಮಟ್ಟದ ತಂಬಾಕಿಗೆ ₹150ರಿಂದ ₹160 ನೀಡಲಾಗಿತ್ತು’ ಎಂದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಾಮೇಗೌಡ ಮಾತನಾಡಿ, ‘ರೈತ ಬೆಳೆಯುವ ತಂಬಾಕಿಗೆ ವಾರ್ಷಿಕ ₹2 ಹೆಚ್ಚಿಸಲಾಗುತ್ತಿದೆ. ಆದರೆ, ಉತ್ಪಾದನಾ ವೆಚ್ಚ ಹತ್ತುಪಟ್ಟು ಹೆಚ್ಚಾಗುತ್ತಿದೆ. ಈ ಬಗ್ಗೆ ಮಂಡಳಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ದೂರಿದರು.

ತಂಬಾಕು ಹರಾಜು ಮಾರುಕಟ್ಟೆಯ ಪ್ರಾದೇಶಿಕ ವ್ಯವಸ್ಥಾಪಕ ಪಾಟೀಲ ಮಾತನಾಡಿ, ‘ಮಾರುಕಟ್ಟೆ ದರ ಏರಿಳಿತಕ್ಕೆ ಸಂಬಂಧಿಸಿದಂತೆ ಮಂಡಳಿ ಅಧ್ಯಕ್ಷರೊಂದಿಗೆ ಚರ್ಚಿಸಿದ್ದು, ನ.15 ಅಥವಾ 16ರಂದು ಮೈಸೂರು ಕಚೇರಿಯಲ್ಲಿ ಸಭೆ ನಡೆಸಲು ಸಮ್ಮತಿಸಿದ್ದಾರೆ. ರೈತರು ಮತ್ತು ಕಂಪನಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು’ ಎಂದರು.

ಈ ಸಾಲಿನಲ್ಲಿ ಹರಾಜು ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಕಂಪನಿಗಳು ಭಾಗವಹಿಸಿದ್ದು, ರೈತರಿಗೆ ಉತ್ತಮ ದರ ಕೊಡಿಸಲು ನಿರೀಕ್ಷೆಯಲ್ಲಿ ಮಂಡಳಿ ಇತ್ತು. ಆಂಧ್ರಪ್ರದೇಶಕ್ಕೆ ಅಂತರರಾಷ್ಟ್ರೀಯ ತಂಬಾಕು ಕಂಪನಿಗಳು ಬಂದಿದ್ದು, ಗುಣಮಟ್ಟ ಪರಿಶೀಲಿಸಿ ಬೇಡಿಕೆ ಸಲ್ಲಿಸಿದ ಬಳಿಕ ರಾಜ್ಯದ ತಂಬಾಕಿಗೆ ಉತ್ತಮ ದರ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

40 ಲಕ್ಷ ಕೆ.ಜಿ. ಹೆಚ್ಚಿನ ಉತ್ಪಾದನೆ

ರಾಜ್ಯದಲ್ಲಿ ಈ ಸಾಲಿನಲ್ಲಿ ಹೆಚ್ಚಿನ ಮಳೆಯಾಗಿದ್ದು, ತಂಬಾಕು ಗುಣಮಟ್ಟ ಕಳೆದುಕೊಂಡು 40 ಲಕ್ಷ ಕೆ.ಜಿ. ಕಳೆದ ಸಾಲಿಗಿಂತಲೂ ಹೆಚ್ಚಿಗೆ ಉತ್ಪಾದನೆಯಾಗಿದೆ. ಇದೇ ಪರಿಸ್ಥಿತಿ ಆಂಧ್ರದಲ್ಲೂ ಎದುರಾಗಿದ್ದು, ಅಲ್ಲಿ ಖರೀದಿಸಿದ 2 ಕೋಟಿ ಕೆ.ಜಿ. ಲೋಗ್ರೇಡ್ ತಂಬಾಕು ಗೋದಾಮಿನಲ್ಲಿ ಉಳಿದಿದೆ. ಅದರ ಪರಿಣಾಮ ರಾಜ್ಯದ ರೈತನಿಗೆ ದರ ಸಮರ ಎದುರಾಗಿದೆ ಎಂದು ತಂಬಾಕು ಹರಾಜು ಮಾರುಕಟ್ಟೆಯ ಪ್ರಾದೇಶಿಕ ವ್ಯವಸ್ಥಾಪಕ ಪಾಟೀಲ ತಿಳಿಸಿದರು.

ಪ್ರತಿಕ್ರಿಯಿಸಿ (+)