ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಸೇವಿಸಿ ವಾಹನ ಚಾಲನೆ: ಪಿಪಿಇ ಧರಿಸಿ ತಪಾಸಣೆ ನಡೆಸಲು ನಿರ್ಧಾರ

10 ದಿನಗಳಲ್ಲಿ ಆರು ಯುವಕರ ಸಾವು
Last Updated 5 ನವೆಂಬರ್ 2020, 2:16 IST
ಅಕ್ಷರ ಗಾತ್ರ

ಮೈಸೂರು: ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರನ್ನು ‘ಪಿಪಿಇ’ ಕಿಟ್ ಧರಿಸಿ, ತಪಾಸಣೆ ನಡೆಸಲು ನಗರ ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ. ಇದು ರಾಜ್ಯದಲ್ಲೇ ಮೊದಲ ಯತ್ನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಳೆದ 10 ದಿನಗಳಲ್ಲಿ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿದ ಒಟ್ಟು ಆರು ಮಂದಿ ನಗರದಲ್ಲಿ ಮೃತಪಟ್ಟಿದ್ದಾರೆ. ಎಲ್ಲ ಅಪಘಾತಗಳೂ ಅತಿ ಭೀಕರವಾಗಿದ್ದು, ಮೃತಪಟ್ಟವರ ದೇಹಗಳು ಛಿದ್ರಛಿದ್ರವಾಗಿದ್ದವು.

ಈ ಎಲ್ಲ ಅಪಘಾತಗಳಿಗೂ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ್ದು ಹಾಗೂ ‘ಜಾಲಿ ರೈಡ್’ ಪ್ರಮುಖ ಕಾರಣ ಎಂದು ಪ್ರಾಥಮಿಕ ವರದಿಗಳು ಹೇಳುತ್ತವೆ.

ವಿಜಯನಗರದ ನಾಲ್ಕನೇ ಹಂತದಲ್ಲಿ ಬೈಕ್‌ನಲ್ಲಿ ಇಬ್ಬರು, ಕುಕ್ಕರಹಳ್ಳಿ ಕೆರೆಯ ಸಮೀಪ ಬೋಗಾದಿ ರಸ್ತೆಯಲ್ಲಿ ಅ. 29ರ ನಸುಕಿನಲ್ಲಿ ಮರಕ್ಕೆ ಕಾರು ಗುದ್ದಿ ಇಬ್ಬರು ಹಾಗೂ ರಿಂಗ್‌ರಸ್ತೆಯ ಸಾತಗಳ್ಳಿ ಬಡಾವಣೆ ಸಮೀಪ ಭಾನುವಾರ ನಸುಕಿನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಮೊಗಚಿಕೊಂಡು ಇಬ್ಬರು ಮೃತಪಟ್ಟಿದ್ದರು.

ಕೊರೊನಾ ಸೋಂಕು ಬಂದ ನಂತರ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರನ್ನು ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆಲ್ಕೋಮೀಟರ್‌ನಿಂದ ತಪಾಸಣೆ ನಡೆಸುವ ಪೊಲೀಸರಿಗೆ ಕೊರೊನಾ ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಇದರ ಬಳಕೆಯನ್ನು ನಿಲ್ಲಿಸಲಾಗಿತ್ತು. ಇದು ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರಿಗೆ ಅವಕಾಶ ಕಲ್ಪಿಸಿಕೊಟ್ಟಂತಾಗಿತ್ತು.

ದಿನೇ ದಿನೇ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದರಿಂದ ಉಂಟಾಗುತ್ತಿರುವ ಅಪಘಾತಗಳನ್ನು ಗಂಭೀರವಾಗಿ ಪರಿಗಣಿಸಿರುವ ನಗರದ ಸಂಚಾರ ಪೊಲೀಸರು ಪಿಪಿಇ ಕಿಟ್ ಹಾಗೂ ಉದ್ದದ ಸ್ಟ್ರಾ ಬಳಸುವ ಮೂಲಕ, ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವವರನ್ನು ಆಲ್ಕೋಮೀಟರ್‌ನಿಂದ ತಪಾಸಣೆ ಮಾಡಲು ನಿರ್ಧರಿಸಿದ್ದಾರೆ.

ತಪಾಸಣೆ ನಡೆಯುತ್ತಿದೆ

ಮದ್ಯ ಸೇವನೆ ಮಾಡಿ ಚಾಲನೆ ಮಾಡುವವರನ್ನು ಆಲ್ಕೋಮೀಟರ್ ಇಲ್ಲದೆಯೂ ವೈದ್ಯಕೀಯ ಪರೀಕ್ಷೆ ಮೂಲಕ ತಪಾಸಣೆ ಮಾಡಲಾಗುತ್ತಿದೆ ಎಂದು ಎಸಿಪಿ ಸಂದೇಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶೇಷವಾಗಿ ರಾತ್ರಿ ವೇಳೆ ಹೆಚ್ಚಿನ ತಪಾಸಣೆ ನಡೆಸಲಾಗುವುದು. ಮದ್ಯ ಸೇವಿಸಿದ ಕುರಿತು ಸ್ವಲ್ಪ ಅನುಮಾನ ಬಂದರೂ, ಅವರನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಗುವುದು. ಮದ್ಯ ಸೇವಿಸಿದ್ದು ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಪೋಷಕರು ಎಚ್ಚರ ವಹಿಸಲಿ’

ಸಂಚಾರ ಹಾಗೂ ಅಪರಾಧ ವಿಭಾಗದ ಡಿಸಿಪಿ ಗೀತಾ ಪ್ರತಿಕ್ರಿಯಿಸಿ, ‘ಇತ್ತೀಚೆಗೆ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟವರು ಯುವಕರು. ಇದಕ್ಕೆ ಬಹುತೇಕರು ರಾತ್ರಿ ವೇಳೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ್ದೇ ಕಾರಣವಾಗಿದೆ. ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕಿದೆ. ಸಂಜೆ ನಂತರ ಹೊರ ಹೋದಾಗ ಏತಕ್ಕೆ ಹೋಗುತ್ತಿರುವುದು ಎಂದು ವಿಚಾರಿಸಲೇಬೇಕು. ರಾತ್ರಿ ಬಂದ ನಂತರ ಸೂಕ್ಷ್ಮವಾಗಿ ಪರಿಶೀಲಿಸಿ, ಮದ್ಯ ಸೇವಿಸಿದ್ದು ಕಂಡು ಬಂದರೆ ಸೂಕ್ತ ಚಿಕಿತ್ಸೆ ಕೊಡಿಸಿ ಮದ್ಯ ಸೇವನೆ ಚಟವನ್ನು ಬಿಡಿಸಬೇಕು. ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಪೋಷಕರೂ ಈ ಬಗ್ಗೆ ನಿಗಾವಹಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT