ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಯೋಗ ದಿನ | ಸಂಭ್ರಮದಲ್ಲಿ ಮಿಂದೆದ್ದ ಸಾಂಸ್ಕೃತಿಕ ನಗರಿ

ರೇಸ್‌ ಕೋರ್ಸ್‌ನಲ್ಲಿ ಸಾವಿರಾರು ಮಂದಿಯಿಂದ ಯೋಗಾಭ್ಯಾಸ
Last Updated 21 ಜೂನ್ 2019, 19:45 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿಬೆಟ್ಟದ ತಪ್ಪಲಲ್ಲಿ ವಿಶಾಲವಾಗಿ ಹರಡಿಕೊಂಡಿರುವ ರೇಸ್‌ ಕೋರ್ಸ್‌ ಮೈದಾನದಲ್ಲಿ ಶುಕ್ರವಾರ ಮುಂಜಾನೆ ಯೋಗಾಸಕ್ತರ ಕಲರವ. ಹಿತವಾಗಿ ಬೀಸುತ್ತಿದ್ದ ಗಾಳಿ, ಆಗ ತಾನೆ ಮೂಡುತ್ತಿದ್ದ ಸೂರ್ಯನ ಕಿರಣಗಳಿಗೆ ಮೈಯೊಡ್ಡಿದ ಸಾವಿರಾರು ಮಂದಿ ಸಾಮೂಹಿಕ ಯೋಗಾಭ್ಯಾಸದ ಸಂಭ್ರಮದಲ್ಲಿ ಮಿಂದೆದ್ದರು.

ಐದನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಯಾಗಿ ಆಯೋಜಿಸಿದ ಮೈಸೂರು ನಗರವು ದೇಶದ ‘ಯೋಗ ರಾಜಧಾನಿ’ ಎಂಬ ಗೌರವಕ್ಕೆ ತಾನು ಅರ್ಹ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು. ವಯಸ್ಸು, ಜಾತಿ, ಧರ್ಮದ ಭೇದವಿಲ್ಲದೆ ಸಾವಿರಾರು ಮಂದಿ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡು ಏಕತೆಯ ಸಂದೇಶ ಸಾರಿದರು.

ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯು ಮಹಾನಗರ ಪಾಲಿಕೆ, ಮುಡಾ, ಯೋಗ ಫೆಡರೇಷನ್‌ ಆಫ್‌ ಮೈಸೂರು ಹಾಗೂ ನಗರದ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.

ಯೋಗದಲ್ಲಿ ಪಾಲ್ಗೊಳ್ಳಲು ಯೋಗಾಸಕ್ತರು ಬೆಳಿಗ್ಗೆ 5.30 ರಿಂದಲೇ ರೇಸ್‌ಕೋರ್ಸ್‌ಗೆ ಬರಲಾರಂಭಿಸಿದರು. ಯೋಗ ಪ್ರದರ್ಶನ ಶುರುವಾಗುವ 7 ಗಂಟೆಯ ವೇಳೆಗೆ ಜನಸಾಗರವೇ ಅಲ್ಲಿ ನೆರೆದಿತ್ತು. ಎಲ್ಲರೂ ಯೋಗ ಮ್ಯಾಟ್‌ ಹಾಸಿಕೊಂಡು ಯೋಗಕ್ಕೆ ಸಜ್ಜಾದರು. ಯೋಗಾಭ್ಯಾಸ ಶುರುವಾದ ಬಳಿಕವೂ ಜನರು ಬರುತ್ತಲೇ ಇದ್ದರು.

ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಡೊಳ್ಳು ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಡಗೀತೆಯ ಬಳಿಕ ಮೂರು ಸಲ ಶಂಖ ನಾದ ಮೊಳಗಿತು.

ಯೋಗ ಪ್ರಾರ್ಥನೆಯ ಬಳಿಕ ವಿವಿಧ ಆಸನಗಳನ್ನು ಪ್ರದರ್ಶಿಸಲಾಯಿತು. ಆರಂಭದ ಐದು ನಿಮಿಷ ದೇಹದ ಸ್ನಾಯುಗಳನ್ನು ಸಡಿಲಗೊಳಿಸಲು ವ್ಯಾಯಾಮ ನಡೆಯಿತು. ಅನಂತರ ತಾಡಾಸನ, ವೃಕ್ಷಾಸನ, ಎರಡು ಬಗೆಯ ಪಾದ ಹಸ್ತಾಸನ, ಅರ್ಧ ಚಕ್ರಾಸನ, ಸಮದಂಡಾಸನ, ಭದ್ರಾಸನ ಒಳಗೊಂಡಂತೆ 19 ವಿಧದ ಆಸನಗಳನ್ನು ಪ್ರದರ್ಶಿಸಲಾಯಿತು.

ಯೋಗದಲ್ಲಿ ಪರಿಣತಿ ಹೊಂದಿದವರು ಅಚ್ಚುಕಟ್ಟಾಗಿ ಆಸನಗಳನ್ನು ಪ್ರದರ್ಶಿಸಿದರೆ, ಇತರರು ಕೆಲವೊಂದು ಆಸನಗಳನ್ನು ಪ್ರದರ್ಶಿಸಲು ಶ್ರಮಪಟ್ಟರು. ಅಕ್ಕಪಕ್ಕದವರನ್ನು ನೋಡಿಕೊಂಡು ಆಸನಗಳನ್ನು ಮಾಡಿದರು. ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಯೋಗ ಗುರುಗಳು ಮಾರ್ಗದರ್ಶನ ನೀಡಿದರು.

ಯೋಗಾಸನದ ಬಳಿಕ ಸುಮಾರು 15 ನಿಮಿಷ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ ನಡೆಯಿತು. ಕಪಾಲಭಾತಿ, ನಾಡಿಶೋಧನ, ಶೀತಲಿ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ, ಧ್ಯಾನ ನಡೆಸಿದರು.

‘ಮಾತಿನಿಂದ ಅಥವಾ ಕೃತಿಯಿಂದಾಗಲೀ ಇತರರಿಗೆ ನೋವನ್ನುಂಟು ಮಾಡದೆ ಸಮಾಜದಲ್ಲಿ ಶಾಂತಿ ಬಯಸುತ್ತೇವೆ. ನಾನು ಪ್ರತ್ಯೇಕವೆಂದು ತಿಳಿಯದೆ ಸಮಗ್ರ ವಿಶ್ವವೇ ನನ್ನೊಂದಿಗಿದೆ ಎಂದು ಬಯಸುತ್ತೇನೆ. ಸಮಾಜದ ಹಿತವೇ ನನ್ನ ಹಿತವೆಂದು ಭಾವಿಸುತ್ತೇನೆ’ ಎಂದು ಎಲ್ಲರೂ ಒಕ್ಕೊರಲಿನಿಂದ ಹೇಳಿದರು.

ಆ ಬಳಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆಬಿತ್ತು. ಯೋಗಾಸಕ್ತರು ಅಲ್ಲಲ್ಲಿ ಫೋಟೊ, ಸೆಲ್ಫಿ ಕ್ಲಿಕ್ಕಿಸಿ ಯೋಗ ದಿನಾಚರಣೆ ನೆನಪನ್ನು ಮನಸ್ಸು ಹಾಗೂ ಮೊಬೈಲ್‌ಗಳಲ್ಲಿ ಭದ್ರವಾಗಿ ಸಿಕೊಂಡು ಮನೆಯತ್ತ ಹೆಜ್ಜೆಯಿಟ್ಟರು.

ಸರ್ವಧರ್ಮ ಸಮನ್ವಯ: ಈ ಬಾರಿಯ ಯೋಗ ದಿನಾಚರಣೆ ಯಂದು ಸರ್ವಧರ್ಮ ಸಮನ್ವಯ ಸಂದೇಶ ಸಾರಲಾಯಿತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ, ಸೋಮನಾಥಾನಂದ ಸ್ವಾಮೀಜಿ, ಸರ್ಖಾಜಿ ಮೊಹಮ್ಮದ್‌ ಉಸ್ಮಾನ್‌ ಷರೀಫ್ ಅವರು ಅತಿಥಿಗಳಾಗಿ ಪಾಲ್ಗೊಂಡರು.

ಪುಟ್ಟ ಮಕ್ಕಳಿಂದ ಹಿಡಿದು 70 ರಿಂದ 80 ವರ್ಷ ವಯಸ್ಸಿನವರೂ ಯೋಗ ಪ್ರದರ್ಶಿಸಿದರು. ವಿವಿಧ ಭಾಗಗಳಿಂದ ಜನರನ್ನು ಕರೆತರಲು ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸರ್ಕಾರಿ ನೌಕರರು, ಅಧಿಕಾರಿಗಳು, ಖಾಸಗಿ ಸಂಸ್ಥೆಗಳ ಉದ್ಯೋಗಿಗಳು, ಸಂಘ ಸಂಸ್ಥೆಗಳ ಸದಸ್ಯರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಸ್ವಯಂ ಸೇವಕರು, ತರಬೇತುದಾರರು ಮಾರ್ಗದರ್ಶನ ಹಾಗೂ ನೆರವು ನೀಡಿದರು. ಪ್ರದರ್ಶನದಲ್ಲಿ ಪಾಲ್ಗೊಂಡ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಬಂದೋಬಸ್ತ್‌ಗೆ 600ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಲಾಗಿತ್ತು. ಪ್ಲಾಸ್ಟಿಕ್‌ ಬಳಕೆಯ ಮೇಲೆ ಕಡಿವಾಣ ಹೇರಲಾಗಿತ್ತು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌, ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ, ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್, ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್‌ ಶಫಿ ಅಹಮದ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್, ತಾಲ್ಲೂ ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಅಂತರರಾಷ್ಟ್ರೀಯ ಯೋಗಪಟು ವಿ.ಖುಷಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT