ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ನಿವೇಶನ ರಹಿತರಿಗೆ ಮನೆ ಮಂಜೂರು ಮಾಡಿ’

ವಸತಿ ಮತ್ತು ನಿವೇಶನ ರಹಿತರ ಹೋರಾಟ ಸಮಿತಿ ಆಗ್ರಹ
Published 7 ಮಾರ್ಚ್ 2024, 5:51 IST
Last Updated 7 ಮಾರ್ಚ್ 2024, 5:51 IST
ಅಕ್ಷರ ಗಾತ್ರ

ಮೈಸೂರು: ‘ನಗರದ ವಸತಿ ಮತ್ತು ನಿವೇಶನ ರಹಿತರಿಗೆ ಮನೆ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿ ವಸತಿ ಮತ್ತು ನಿವೇಶನ ರಹಿತರ ಹೋರಾಟ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟಿಸಿದರು.

‘ರಾಜೀವ್‌ ಗಾಂಧಿ ವಸತಿ ನಿಗಮದ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 27 ಲಕ್ಷಕ್ಕೂ ಅಧಿಕ ವಸತಿ ರಹಿತ ಕುಟುಂಬಗಳಿವೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಬಹುತೇಕ ಕುಟುಂಬಗಳು ಕೂಲಿ ಕೆಲಸ ಮಾಡಿಕೊಂಡು ಬದುಕುವವರಾಗಿದ್ದು, ಅಲ್ಪಸಂಖ್ಯಾತ ಕುಟುಂಬಗಳಾಗಿವೆ. ಇವರು ನಿವೇಶನ ಹೊಂದಿರದೆ ಇರುವುದರಿಂದ ವಸತಿ ಯೋಜನೆಯಲ್ಲಿ ಮನೆ ಮಂಜೂರು ಸಾಧ್ಯವಾಗುತ್ತಿಲ್ಲ. ಈ ಕುಟುಂಬಗಳಿಗೆ ನಿವೇಶನ ಒದಗಿಸಿ ಬಳಿಕ ವಸತಿ ಹಕ್ಕು ನೀಡುವ ಕೆಲಸ ಸರ್ಕಾರ ಮಾಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ವಸತಿಗಾಗಿ ಸಲ್ಲಿಸಿರುವ ಅರ್ಜಿಗಳು ದಶಕಗಳಿಂದ ಬಾಕಿ ಇವೆ. ಸರ್ಕಾರದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಗಳಲ್ಲಿ ವಸತಿ ಸಮಸ್ಯೆ ಪರಿಹಾರಕ್ಕೆ ಭೂಮಿ ಲಭ್ಯತೆ ತೊಡಕಾಗಿದೆ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಇದರ ಅಧ್ಯಯನಕ್ಕೆ ಕಂದಾಯ, ವಸತಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಉನ್ನತ ಮಟ್ಟದ ಸಭೆ ನಡೆಯಲಿ’ ಎಂದು ಆಗ್ರಹಿಸಿದರು.

‘2024– 25ರ ಬಜೆಟ್‌ನಲ್ಲಿ ಘೋಷಿಸಿರುವ ವಸತಿರಹಿತರ ಸಮೀಕ್ಷೆ ಕಾರ್ಯವನ್ನು ಸ್ವಾಗತಿಸುತ್ತೇವೆ. ರಾಜ್ಯದಾದ್ಯಂತ ನಿವೇಶನ ಹಾಗೂ ವಸತಿಗಾಗಿ ಅರ್ಜಿ ಸಲ್ಲಿಕೆಯಾಗುತ್ತಿದೆ. ಆದರೆ ಸಂಬಂಧಪಟ್ಟ ಸ್ಥಳೀಯಾಡಳಿತವು ಅವನ್ನು ಸ್ವೀಕರಿಸುತ್ತಿಲ್ಲ. ಸ್ವೀಕರಿಸಿದರೂ ರಾಜೀವ್‌ ಗಾಂಧಿ ವಸತಿ ನಿಗಮದ ವೆಬ್‌ ಸೈಟ್‌ಗೆ ಅಪ್‌ಲೋಡ್‌ ಆಗುತ್ತಿಲ್ಲ ಈ ಸಮಸ್ಯೆಯನ್ನು ಪರಿಹರಿಸಬೇಕು’ ಎಂದರು.

‘ವಸತಿ ಯೋಜನೆಯ ಸಹಾಯಧನ ಮೊತ್ತವನ್ನು ಕನಿಷ್ಟ ₹5 ಲಕ್ಷಕ್ಕೆ ಏರಿಸಬೇಕು. ಯೋಜನೆಗೆ ಅಗತ್ಯವಿರುವ ಸರ್ಕಾರಿ ಭೂಮಿಯನ್ನು ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗುರುತಿಸಿ ಆಶ್ರಯ ನಿವೇಶನಕ್ಕೆ ಕಾಯ್ದಿರಿಸಲು ಸ್ಥಳೀಯ ಸಂಸ್ಥೆಗಳು ಸಾಮಾನ್ಯ ಸಭೆಗಳಲ್ಲಿ ನಿರ್ಣಯ ಕೈಗೊಂಡು ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಹಾಗೂ ಪೌರಾಡಳಿತಕ್ಕೆ ಸುತ್ತೋಲೆ ಹೊರಡಿಸಿ ಲಭ್ಯ ಭೂಮಿಯನ್ನು ಕಾಯ್ದಿರಿಸಬೇಕು’ ಎಂದು ಒತ್ತಾಯಿಸಿದರು.

ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಎನ್‌.ಕೆ.ದೇವದಾಸ್‌, ಜಿಲ್ಲಾ ಅಧ್ಯಕ್ಷ ಎಚ್‌.ಬಿ.ರಾಮಕೃಷ್ಣ, ಮುಖಂಡರಾದ ಸೋಮರಾಜೇ ಅರಸ್‌, ಲಕ್ಷ್ಮಿ, ಶಿವಮಾದು, ಮುಜಾಹಿದ್‌ ಪಾಷಾ, ನಂಜನಾಯಕ, ಹೊನ್ನೇಶ್‌, ಚನ್ನಪ್ಪ ನಾಯಕ, ಶಿವಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT