ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 ಮರೆಯುವ ಮುನ್ನ | ಮೈಸೂರು: ಸಂಸತ್ತಿನವರೆಗೂ ಹಬ್ಬಿದ ‘ಅಪರಾಧ–ಅಪಖ್ಯಾತಿ’

ಸಂಸತ್‌ಗೆ ನುಗ್ಗಿದ ಪ್ರಕರಣದಿಂದ ತಲ್ಲಣ, ಲೋಕಾಯುಕ್ತ ದಾಳಿಗೆ ಕಂಗಾಲಾದ ಕೋಟ್ಯಧೀಶರು
ಶಿವಪ್ರಸಾದ್ ರೈ
Published 27 ಡಿಸೆಂಬರ್ 2023, 7:57 IST
Last Updated 27 ಡಿಸೆಂಬರ್ 2023, 7:57 IST
ಅಕ್ಷರ ಗಾತ್ರ

ಮೈಸೂರು: ಈ ವರ್ಷ(2023) ಭಿನ್ನ ಅಪರಾಧ ಪ್ರಕರಣಗಳಿಗೆ ಜಿಲ್ಲೆ ಸಾಕ್ಷಿಯಾಯಿತು. ವರ್ಷಾಂತ್ಯದಲ್ಲಿ ಸಂಸತ್ತಿನ ಭದ್ರತಾ ಲೋಪ ಪ್ರಕರಣದಲ್ಲಿ ಮೈಸೂರು ಹೆಸರು ರಾಷ್ಟ್ರಮಟ್ಟದಲ್ಲಿ ಚರ್ಚೆಗೀಡಾಯಿತು. ಕೊಲೆ, ಭೀಕರ ಅಪಘಾತ, ಭ್ರಷ್ಟಾಚಾರ, ಸಾವು–ನೋವುಗಳ ಜೊತೆಗೆ, ಹೆಣ್ಣು ಭ್ರೂಣ ಪತ್ತೆ–ಹತ್ಯೆ ಪ್ರಕರಣದಲ್ಲೂ ಜಿಲ್ಲೆಗೆ ಅಪಕೀರ್ತಿ ಒದಗಿತು.

ಲೋಕಸಭೆಯಲ್ಲಿ ಡಿ.14ರ ಮಧ್ಯಾಹ್ನ ಕಲಾಪ ನಡೆಯುತ್ತಿರುವಾಗಲೇ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ ‘ಸ್ಮೋಕ್‌ ಕ್ಯಾನ್‌’ (ಹಳದಿ ಬಣ್ಣದ ಹೊಗೆ ಉಗುಳುವ ಕ್ಯಾನ್‌) ಹಾರಿಸಿ ದಾಂದಲೆ ಎಬ್ಬಿಸಿದ್ದರು. ಪ್ರಕರಣದಲ್ಲಿ ವಿಜಯನಗರ ನಿವಾಸಿಯಾಗಿರುವ ಎಂಜಿನಿಯರಿಂಗ್ ಪದವೀಧರ ಮನೋರಂಜನ್‌ ಡಿ. ಹಾಗೂ ಲಖನೌದ ಸಾಗರ್‌ ಶರ್ಮಾ, ಸಂಸತ್‌ನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಹರಿಯಾಣದ ಹಿಸಾರ್‌ನ ನೀಲಂ ಮತ್ತು ಮಹಾರಾಷ್ಟ್ರದ ಲಾತೂರ್‌ನ ಅಮೋಲ್ ಶಿಂದೆ ಅವರನ್ನು ಬಂಧಿಸಿದ್ದರು.

ಆರೋಪಿಗಳಿಗೆ ಸಂಸದ ಪ್ರತಾಪ ಸಿಂಹ ಕಚೇರಿಯಿಂದ ಸಂಸತ್‌ ಪ್ರವೇಶದ ಪಾಸ್‌ ನೀಡಲಾಗಿದೆ ಎಂಬ ಸುದ್ದಿ ರಾಷ್ಟ್ರವ್ಯಾಪಿ ಹಬ್ಬಿತು. ಈ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಾಪ ಸಿಂಹ ಅವರಿಂದ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಲಿಖಿತ ಸ್ಪಷ್ಟನೆ ಪಡೆದುಕೊಂಡರು. ನಗರದಲ್ಲಿ ದೆಹಲಿ ಪೊಲಿಸರು ಮೊಕ್ಕಾಂ ಹೂಡಿ ಆರೋಪಿಯ ಪೋಷಕರು ಹಾಗೂ ಸ್ನೇಹಿತರ ವಿಚಾರಣೆ ನಡೆಸುತ್ತಿದ್ದಾರೆ.

ಟಿವಿ ಸಂದರ್ಶನವೊಂದರಲ್ಲಿ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಹೆಬ್ಬಾತು ಸಾಕಿದ ಬಗ್ಗೆ ನಟ ಹೇಳಿಕೊಂಡಿದ್ದರು. ಈ ಬಗ್ಗೆ ದರ್ಶನ್‌ ಪತ್ನಿ ಹೆಸರಿನಲ್ಲಿರುವ ಫಾರ್ಮ್‌ ಹೌಸ್‌ಗೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡರು.

ವಿಧಾನಸಭಾ ಚುನಾವಣೆ ಸಮಯದಲ್ಲಿ ನಗರದ ರೈ ಎಸ್ಟೇಟ್‌ ಮಾಲಕ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ರೈ ಸೋದರ ಸುಬ್ರಹ್ಮಣ್ಯ ರೈ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಮರದಲ್ಲಿ ಮಾವಿನ ಹಣ್ಣಿನ ಬುಟ್ಟಿಯಲ್ಲಿ ಕೋಟ್ಯಾಂತರ ರೂಪಾಯಿ ಸಿಕ್ಕಿದ್ದು, ಸುದ್ದಿಯಾಗಿತ್ತು. ಲೋಕಾಯುಕ್ತ ದಾಳಿಗೆ ಕೋಟ್ಯಾಧಿಪತಿ ಅಧಿಕಾರಿಗಳು ‍ಪತರುಗುಟ್ಟಿದರು.

ಕಾವೇರಿಗಾಗಿ ಸಾಲು, ಸಾಲು ಪ್ರತಿಭಟನೆಗಳು ನಡೆದವು. ತಾಯ್ನೆಲದ ಕುರಿತ ಹೋರಾಟಕ್ಕೆ ಅಮೋಘ ಬೆಂಬಲ ದೊರೆಯಿತು. ಸಂರಕ್ಷಣಾ ಕಾಯ್ದೆ ಜಾರಿಗೊಳಿಸಬೇಕೆಂಬ ವಕೀಲರ ಹೋರಾಟದ ಒತ್ತಾಯಕ್ಕೆ ಮಣಿದ ಸರ್ಕಾರ ಅವರ ಬೇಡಿಕೆ ಈಡೇರಿಸಿತು. ಎನ್‌ಟಿಎಂ ಶಾಲೆ ಸ್ಥಳಾಂತರ ಹೋರಾಟವು ಸ್ಥಗಿತಗೊಂಡಿತು. ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲೂ ಮೈಸೂರಿನ ಹೆಸರು ಕೇಳಿಬಂತು. ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಬೆಂಗಳೂರು ಪೊಲೀಸರು ಬಂಧಿಸಿದರು.

ಗೃಹಲಕ್ಷ್ಮಿ ಯೋಜನೆಯ ನಕಲಿ ಮಂಜೂರಾತಿ ಪತ್ರ ಸಿದ್ದಪಡಿಸಿಕೊಡುತ್ತಿದ್ದ ಪ್ರಕರಣ ಪತ್ತೆಯಾಗಿತ್ತು. ದುಬಾರಿ ಕಾರು ಹಾಗೂ ಚಕ್ರದ ಸರಣಿ ಕಳ್ಳತನವು ಜನರಲ್ಲಿ ಆತಂಕ ಸೃಷ್ಟಿಸಿತ್ತು. ವರ್ಷವಿಡೀ ಭಿನ್ನ ರೀತಿಯ ಪ್ರಕರಣಗಳಿಗೆ ಮೈಸೂರು ಸಾಕ್ಷಿಯಾಯಿತು.

ಮನೋರಂಜನ್‌
ಮನೋರಂಜನ್‌
ಕಬ್ಬಿನ ಬಾಕಿ ಹಣ ಹಾಗೂ ಹೆಚ್ಚುವರಿ ದರ ನಿಗದಿಗೆ ಆಗ್ರಹಿಸಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತ ಮುಖಂಡರನ್ನು ಪೊಲೀಸರು ಬಂಧಿಸಿದರು
ಕಬ್ಬಿನ ಬಾಕಿ ಹಣ ಹಾಗೂ ಹೆಚ್ಚುವರಿ ದರ ನಿಗದಿಗೆ ಆಗ್ರಹಿಸಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತ ಮುಖಂಡರನ್ನು ಪೊಲೀಸರು ಬಂಧಿಸಿದರು
ತಿ.ನರಸೀಪುರದ ಕುರುಬೂರು ಬಳಿ ನಡೆದ ಭೀಕರ ಅಪಘಾತದಲ್ಲಿ ಜಖಂಗೊಂಡ ಇನ್ನೋವಾ ಕಾರು
ತಿ.ನರಸೀಪುರದ ಕುರುಬೂರು ಬಳಿ ನಡೆದ ಭೀಕರ ಅಪಘಾತದಲ್ಲಿ ಜಖಂಗೊಂಡ ಇನ್ನೋವಾ ಕಾರು
ಮೈಸೂರಿನ ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆಯ ಸಮೀಪ ಕಬ್ಬು ದರ ನಿಗದಿಯಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ರೈತರು ರಸ್ತೆಯಲ್ಲಿ ಉರುಳು ಸೇವೆ ಮಾಡಿದ್ದರು
ಮೈಸೂರಿನ ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆಯ ಸಮೀಪ ಕಬ್ಬು ದರ ನಿಗದಿಯಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ರೈತರು ರಸ್ತೆಯಲ್ಲಿ ಉರುಳು ಸೇವೆ ಮಾಡಿದ್ದರು

ಕಮಿಷನರೇಟ್‌ ವ್ಯಾಪ್ತಿ ವಿಸ್ತಾರದ ಪ್ರಸ್ತಾಪ ಮೈಸೂರು ನಗರ ಕಮಿಷನರೇಟ್‌ ವ್ಯಾಪ್ತಿ ವಿಸ್ತರಿಸುವ ಬಗ್ಗೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್‌ ಗೃಹ ಇಲಾಖೆಗೆ ಪ್ರಸ್ತಾಪ ಸಲ್ಲಿಸಿದರು. ನಗರದ ಪೊಲೀಸ್‌ ಸಿಬ್ಬಂದಿ ಹಾಗೂ ವ್ಯವಸ್ಥೆಗಳನ್ನು ಬಳಸಿಕೊಂಡು ವೇಗವಾಗಿ ಬೆಳವಣಿಗೆಯಾಗುತ್ತಿರುವ ಹೊರವಲಯದ ಪ್ರದೇಶಗಳನ್ನು ಸೇರಿಸಿಕೊಳ್ಳುವ ಉದ್ದೇಶವನ್ನು ಇಲಾಖೆ ಹೊಂದಿದೆ. ಇದರಿಂದ ನಗರ ವ್ಯಾಪ್ತಿಯಲ್ಲಿ ನಡೆಯುವ ಪ್ರಕರಣಗಳ ಕುರಿತ ಹಿಡಿತ ಸಾಧಿಸಲು ಸಾಧ್ಯವಾಗುವುದರೊಂದಿಗೆ ಜಿಲ್ಲಾ ಪೊಲೀಸ್‌ ಒತ್ತಡವೂ ಕಡಿಮೆಯಾಗಲಿದೆ.

ವರ್ಷಾರಂಭದಲ್ಲೇ ಗಮನ ಸೆಳೆದಿದ್ದ ಸ್ಯಾಂಟ್ರೋ ರವಿ ಪರಿಶಿಷ್ಟ ಸಮುದಾಯದ ಮಹಿಳೆಯನ್ನು ವಂಚಿಸಿ ಮದುವೆಯಾಗಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ವರದಕ್ಷಿಣೆ ಕಿರುಕುಳ ನೀಡಿ ಸುಳ್ಳು ಪ್ರಕರಣ ದಾಖಲಿಸಿದ ಆರೋಪದ ಮೇರೆಗೆ ಕೆ.ಎಸ್‌.ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೋ ರವಿ ವಿರುದ್ಧ ಇಲ್ಲಿನ ವಿಜಯನಗರ ಠಾಣೆಯಲ್ಲಿ ಜ.2ರಂದು ಎಫ್‌ಐಆರ್‌ ದಾಖಲಾಗಿತ್ತು. ಈ ಪ್ರಕರಣವು ರಾಜ್ಯದಾದ್ಯಂತ ಗಮನ ಸೆಳೆದಿತ್ತು. ಕುಮಾರಕೃಪಾ ಅತಿಥಿಗೃಹದಲ್ಲಿ ಸ್ಯಾಂಟ್ರೋ ರವಿ ವಾಸ್ತವ್ಯ ಹೂಡಿದ್ದ ಎಂಬ ಕಾರಣಕ್ಕೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರುಗಳು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಎಫ್‌ಐಆರ್‌ ದಾಖಲಾದ 10 ದಿನಗಳ ನಂತರ ಗುಜರಾತ್‌ನಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು.

ಮಾರಣಾಂತಿಕ ರಸ್ತೆ ಅಪಘಾತ ಕುರುಬೂರು ಸಮೀಪದ ಪಿಂಜರಾ‍ಪೋಲ್‌ ಬಳಿ ಮೈಸೂರು–ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನೋವಾ ಕಾರು ಮತ್ತು ಖಾಸಗಿ ಬಸ್ ನಡುವೆ ಮೇ.29 ರಂದು ಭೀಕರ ಅಪಘಾತ ಸಂಭವಿಸಿ ಮೂವರು ಮಕ್ಕಳು ಮೂವರು ಮಹಿಳೆಯರು ಸೇರಿ 11 ಮಂದಿ ದಾರುಣವಾಗಿ ಸಾವಿಗೀಡಾದರು. ಮೂವರು ತೀವ್ರವಾಗಿ ಗಾಯಗೊಂಡರು.

ಕೊಲೆಗಳ ಸರಣಿ ಇಡೀ ವರ್ಷ ಕೊಲೆಗಳ ಸರಣಿಗೂ ಸಾಕ್ಷಿಯಾಯಿತು. ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರದ ಬಳಿ ಹಣದ ವಿಚಾರವಾಗಿ ನಡೆದ ಜಗಳದಲ್ಲಿ ಅಂಗನವಾಡಿ ಕಾರ್ಯಕರ್ತೆ ಮಮತಾ ಅವರನ್ನು ಮೋಹನ್‌ ಕುಮಾರ್‌ ಎಂಬಾತ ಮೇ.13 ರಂದು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ. ಹಳೆಯ ದ್ವೇಷದಿಂದ ಒಂಟಿಕೊಪ್ಪಲ್ ನಿವಾಸಿ ರೌಡಿಶೀಟರ್‌ ಕುಂಡ ಚಂದ್ರು ಅಲಿಯಾಸ್ ಚಂದ್ರಶೇಖರ್‌ (42) ಮೇಲೆ ದುಷ್ಕರ್ಮಿಗಳು ಮೇ.18ರಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದರು. ಪ್ರಕರಣದಲ್ಲಿ ಪಡುವಾರಹಳ್ಳಿಯ ವರುಣ್ ದರ್ಶನ್ ಕುವೆಂಪುನಗರದ ಅನಿಲ್ ಸಚಿನ್ ಮತ್ತು ವೆಂಕಟೇಶ್‌ ಅವರನ್ನು ಬಂಧಿಸಲಾಯಿತು. ತಿ.ನರಸೀಪುರ ಪಟ್ಟಣದಲ್ಲಿ ಹನುಮ ಜಯಂತಿ ಆಚರಣೆ ವೇಳೆ ನಡೆದ ಜಗಳವು ವಿಕೋಪಕ್ಕೆ ತಿರುಗಿ ದುಷ್ಕರ್ಮಿಗಳು ಶ್ರೀರಾಂಪುರ ಕಾಲೊನಿ ನಿವಾಸಿ ‘ಯುವ ಬ್ರಿಗೇಡ್‌’ ಸಂಚಾಲಕ ವೇಣುಗೋಪಾಲ್‌ ಅವರನ್ನು ಜು.10 ರಂದು ಕೊಲೆ ಮಾಡಿದರು. ನಂತರದ ಕೆಲವು ದಿನ ಈ ಪ್ರಕರಣ ರಾಜಕೀಯ ಮೇಲಾಟಗಳಿಗೆ ಕಾರಣವಾಯಿತು. ಗಾಯತ್ರಿಪುರಂ ನಿವಾಸಿ ಸುಪ್ರೀತ್‌ ಮೇ.31ರಂದು ತನ್ನ ಅಜ್ಜಿಯನ್ನು ಕೊಂದು ಹೊಸಕೋಟೆ ಬಳಿ ಕೆಆರ್‌ಎಸ್‌ ಹಿನ್ನೀರು ಪ್ರದೇಶದಲ್ಲಿ ಸುಟ್ಟು ಹಾಕಿದ್ದು ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪತ್ನಿಯ ನಡತೆ ಬಗ್ಗೆ ಅನುಮಾನಗೊಂಡು ಕೆಎಸ್‌ಆರ್‌ಟಿ ಬಡಾವಣೆ ನಿವಾಸಿ ಲೋಕೇಶ್ ಆರಾಧ್ಯ ಪತ್ನಿ ಪಲ್ಲವಿ ಅವರನ್ನು ಜೂ.15ರಂದು ಕೊಲೆ ಮಾಡಿ ಆಲಮಹಳ್ಳಿ ಠಾಣೆಗೆ ಬಂದು ಶರಣಾಗಿದ್ದ. ಹುಣಸೂರಿನ ವಿಶ್ವೇಶ್ವರಯ್ಯ ವೃತ್ತಕ್ಕೆ ಹೊಂದಿಕೊಂಡಿರುವ ಪರಸಯ್ಯನ ಕಲ್ಯಾಣ ಮಂಟಪದ ಹಿಂಭಾಗದ ಸಾಮಿಲ್‌ನಲ್ಲಿ ಜೂ.22ರ ರಾತ್ರಿ ಕಾವಲು ಕಾಯುತ್ತಿದ್ದ ವೆಂಕಟೇಶ್ ಮತ್ತು ಷಣ್ಮುಗಂ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು.

ಕೋಟ್ಯಧೀಶ ಪ್ರಾಧ್ಯಾಪಕ! ಇದುವರೆಗೆ ಅಧಿಕಾರಿಗಳಷ್ಟೇ ಲೋಕಾಯುಕ್ತ ದಾಳಿಗಳಲ್ಲಿ ಸಿಲುಕಿ ಅವರ ಕೋಟ್ಯಂತರ ಆಸ್ತಿ ಬೆಳಕಿಗೆ ಬರುತ್ತಿತ್ತು. ಆದರೆ ಡಿ.5ರಂದು ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮಹದೇವ ಸ್ವಾಮಿ ಹಾಗೂ ಅವರ ಕುಟುಂಬದಲ್ಲಿರುವ 12 ಸಂಸ್ಥೆಗಳಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು ಶೈಕ್ಷಣಿಕ ವಲಯದಲ್ಲಿ ಸಂಚಲನ ಮೂಡಿಸಿತ್ತು. ₹ 8 ಕೋಟಿಗೂ ಹೆಚ್ಚು ಆಸ್ತಿ ಪತ್ತೆಯಾಯಿತು. ಮೇ.31: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಲೆಕ್ಕಾಧಿಕಾರಿ ಮುತ್ತು ಪ್ರಾಧಿಕಾರದ ಎಂಜಿನಿಯರ್‌ ನಾಗೇಶ್‌ ನಂಜನಗೂಡಿನ ಹಿರಿಯ ಸಬ್‌ ರಿಜಿಸ್ಟ್ರಾರ್‌ ಶಿವಶಂಕರ ಮೂರ್ತಿಗೆ ಸೇರಿದ ಆಸ್ತಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಕೋಟ್ಯಾಂತರ ಮೌಲ್ಯದ ಆಸ್ತಿ ಪತ್ತೆಯಾಗಿದ್ದು ಸಾರ್ವಜನಿಕರನ್ನು ದಿಗ್ಭ್ರಮೆಗೊಳಿಸಿತು.

ಪ್ರಮುಖ ಘಟನೆಗಳು ಜ.21: ವನ್ಯಜೀವಿ ಸಂರಕ್ಷಣ ಕಾಯ್ದೆಯಡಿ ಸಂರಕ್ಷಿತವೆಂದು ಗುರುತಿಸಲಾದ ಪಟ್ಟೆ‌ತಲೆ ಹೆಬ್ಬಾತುಗಳನ್ನು (ಬಾರ್‌ ಹೆಡೆಡ್‌ ಗೂಸ್‌) ಕೂಡಿ ಹಾಕಿ ಸಾಕಿದ ಆರೋಪದ ಮೇರೆಗೆ ನಟ ದರ್ಶನ್‌ ಫಾರ್ಮ್‌ ಹೌಸ್‌ ಒಡತಿ ಪತ್ನಿ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್‌ ನಾಗರಾಜ್‌ ವಿರುದ್ಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಎ.19: ಹೆಬ್ಬಾಳು ಕೈಗಾರಿಕಾ ಪ್ರದೇಶದ ಬೊಮ್ಮನಳ್ಳಿ ಕೆರೆದಂಡೆಯಲ್ಲಿರುವ ಸುಡುಮದ್ದು ದಾಸ್ತಾನು ಗೋದಾಮು ಸೇರಿದಂತಿರುವ ಪಟಾಕಿ ಅಂಗಡಿಗೆ ಬೆಂಕಿ ತಗುಲಿ ಭಾರಿ ಸ್ಫೋಟ ಸಂಭವಿಸಿತು. ಸುಮಾರು ₹2 ಕೋಟಿಯಷ್ಟು ಪಟಾಕಿ ಸಾಮಗ್ರಿ ಆಸ್ತಿ ಹಾನಿಯಾಗಿತ್ತು. ಎ.23: ಸುಡಾನ್‌ನಲ್ಲಿ ಅಧಿಕಾರಕ್ಕಾಗಿ ಸೇನೆ ಹಾಗೂ ಅರೆಸೇನಾ ಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ ಎಚ್‌.ಡಿ ಕೋಟೆಯ ಟೈಗರ್ ಬ್ಲಾಕ್‌ ಹಾಡಿಯ 60ಕ್ಕೂ ಹೆಚ್ಚು ಜನ ಸಿಲುಕಿಕೊಂಡಿರುವುದು ಆತಂಕ ಸೃಷ್ಟಿಸಿತ್ತು. ಸರ್ಕಾರವು ‘ಆಪರೇಷನ್‌ ಕಾವೇರಿ’ ಮೂಲಕ ಅವರನ್ನು ತಾಯ್ನಾಡಿಗೆ ಕರೆತಂದಿತು. ಮೇ.20: ಕೇರಳದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 18 ಕೋಟಿ ಮೌಲ್ಯದ 8.12 ಕೆ.ಜಿ ತಿಮಿಂಗಲ ವಾಂತಿಯನ್ನು ಎಚ್‌.ಡಿ ಕೋಟೆ ತಾಲ್ಲೂಕಿನ ಹ್ಯಾಂಡ್‌ ಪೋಸ್ಟ್‌ ಗ್ರಾಮದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದರು.‌ ಜೂ.7: ವಿಜಯನಗರ 3ನೇ ಹಂತದಲ್ಲಿರುವ ಮಾಜಿ ಸಚಿವ ಕೋಟೆ ಶಿವಣ್ಣ ಅವರ ಮನೆಯ ಆವರಣದಲ್ಲಿದ್ದ ಇನ್ನೋವಾ ಕಾರನ್ನು ಮಂಗಳವಾರ ರಾತ್ರಿ ಮೂವರು ಮುಸುಕುಧಾರಿಗಳು ಕಳವು ಮಾಡಿದ್ದರು. ಜೂನ್‌ ತಿಂಗಳಲ್ಲಿ ಇದೇ ರೀತಿಯ 3 ಪ್ರಕರಣ ದಾಖಲಾಗಿತ್ತು. ಜೂ.8: ಊಟಿಯ ಗೂಡ್ಲೂರಿನ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಿಜೆಪಿಯ ನರಸಿಂಹರಾಜ ಕ್ಷೇತ್ರ ಘಟಕದ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ಮೃತಪಟ್ಟರು. ಜೂ.12: ಕೆಆರ್‌ಎಸ್‌ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನ ಸುನೀಲ್‌ ಹಾಗೂ ಚಿರಂತ್‌ ನೀರಿನಲ್ಲಿ ಮುಳುಗಿ ಮೃತಪಟ್ಟರು. ಜೂ.15: ತನ್ನ ಪ್ರೀತಿಗೆ ಅಡ್ಡಬಂದನೆಂಬ ಕಾರಣಕ್ಕೆ ಪ್ರಿಯತಮೆಯ ಅಣ್ಣ ಹೇಮಂತ್‌ ಅಲಿಯಾಸ್ ಸ್ವಾಮಿ(23)ಯನ್ನು ಸಾಗರ್‌ ತನ್ನ ಸಂಬಂಧಿಕರಾದ ಮಂಜ ಅಲಿಯಾಸ್‌ ಕಪ್ಪೆ ಮಂಜ ಹಾಗೂ ಪ್ರತಾಪ ಜೊತೆ ಸೇರಿ ಬೆಳವಾಡಿ ಹಾಗೂ ಗದ್ದಿಗೆ ಮುಖ್ಯರಸ್ತೆಯ ಬಸವನಹಳ್ಳಿ ಎಂಬಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದರು. ಅವರನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹಳ್ಳಿಯೊಂದರಲ್ಲಿ ಪೊಲೀಸರು ಬಂಧಿಸಿದ್ದರು. ಜೂ.20: ಎಚ್.ಡಿ.ಕೋಟೆ ತಾಲ್ಲೂಕಿನ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯು ಆರೋಗ್ಯ ತಪಾಸಣೆಯ ವರದಿಗಾಗಿ ತೆರಳಿದಾಗ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಇದನ್ನು ಖಂಡಿಸಿ ಆರೋಗ್ಯ ಅಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪ್ರತಿಭಟಿಸಿತ್ತು. ಜೂ.21: ಹೂಟಗಳ್ಳಿ ನಗರ ಸಭೆಯ ಕಂದಾಯ ನಿರೀಕ್ಷಕ ಮಂಜುನಾಥ್‌ ಇ–ಸ್ವತ್ತು ನೀಡಲು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದರು. ಜೂ.26: ನಗರದ ಹೊರವಲಯದಲ್ಲಿ ದುಬಾರಿ ಕಾರುಗಳು ಚಕ್ರಗಳ ಸರಣಿ ಕಳ್ಳತನ ನಡೆಯಿತು. ಜು.15: ಮೀನಾಕ್ಷಿಪುರದ ಬಳಿ ಕಾವೇರಿ ಹಿನ್ನೀರಿನಲ್ಲಿ ಈಜಲು ಹೋಗಿದ್ದ ವಿದ್ಯಾಶ್ರಮ ಕಾಲೇಜಿನ ವಿದ್ಯಾರ್ಥಿಗಳಾದ ಭರತ್ ಪ್ರವೀಣ್ ಮೊಯಿಲ್ ವರುಣ್ ನೀರಿನಲ್ಲಿ ಮುಳುಗಿ ಮೃತಪಟ್ಟರು. ಜು.28: ಮಾನಂದವಾಡಿ ರಸ್ತೆಯ ರೈಲ್ವೆ ವರ್ಕ್‌ ಶಾಪ್‌ ಬಳಿ ವಿದ್ಯುತ್ ಕಂಬ ಹಾಗೂ ತಡೆಗೋಡೆಯ ನಡುವೆ ಸಿಲುಕಿದ್ದ ಕಾರನ್ನು ಹೊರತೆಗೆಯಲು ಯತ್ನಿಸಿದ ಅಶೋಕಪುರಂ ನಿವಾಸಿಗಳಾದ ಕಿರಣ್ ಹಾಗೂ ರವಿಕುಮಾರ್ ವಿದ್ಯುತ್‌ ಪ್ರವಹಿಸಿ ಮೃತಪಟ್ಟರು. ಜು.28: ಮೇಟಗಳ್ಳಿಯ ‘ನಕುಲ್ ನೆಟ್ ವರ್ಲ್ಡ್’ ಸೈಬರ್ ಕೇಂದ್ರದಲ್ಲಿ ಗೃಹಲಕ್ಷ್ಮಿ ಯೋಜನೆಯ ನಕಲಿ ಮಂಜೂರಾತಿ ಪತ್ರ ಸಿದ್ದಪಡಿಸಿಕೊಡುತ್ತಿದ್ದ ಸುರೇಶ್ ಕುಮಾರ್‌ನ್ನು ಪೊಲೀಸರು ಬಂಧಿಸಿದ್ದರು. ಸೆ.15: ಆಹಾರ ಸುರಕ್ಷತಾ ಅಧಿಕಾರಿ ಲೋಕೇಶ್‌ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಬಂಧಿಸಿದರು. ಸೆ.29: ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ‘ಕರ್ನಾಟಕ ಬಂದ್‌’ಗೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯ ಸಾರಿಗೆ–ಖಾಸಗಿ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡಿದರು. ಮುಖ್ಯ ರಸ್ತೆ ವೃತ್ತಗಳು ಬಸ್‌ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಸಿಬ್ಬಂದಿ ಸ್ವಚ್ಛತಾ ಕೆಲಸ ನಡೆಸಿದರು. ಹೀಗಾಗಿ ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ಜನದಟ್ಟಣೆ ಕಂಡುಬಂತು. ಮಾರುಕಟ್ಟೆಗಳಲ್ಲಿ ವ್ಯಾಪಾರ– ವಹಿವಾಟು ನಡೆಯಲಿಲ್ಲ. ನಗರದ ರಸ್ತೆಗಳು ಸಂಜೆವರೆಗೂ ಬಿಕೋ ಎನ್ನುತ್ತಿದ್ದವು. ಕಾವೇರಿ ಉಳಿಸುವಂತೆ ಇಡೀ ಜಿಲ್ಲೆ ಸಂದೇಶ ರವಾನಿಸಿತ್ತು. ಅ.10: ಟಿ.ಕೆ.ಬಡಾವಣೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮೇಲೆ ಕಲ್ಲು ಎಸೆದ ಎಂ.ಶಿವಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಅ.14: ಮಹಿಷಾ ದಸರದಲ್ಲಿ ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಒಕ್ಕಲಿಗ ಸಂಘದ ಸದಸ್ಯರು ಲೇಖಕ ಪ್ರೊ.ಭಗವಾನ್ ನಿವಾಸಕ್ಕೆ ಮುತ್ತಿಗೆ‌ ಹಾಕಲು ಯತ್ನಿಸಿದ್ದರು. ಅ.14: ಖ್ಯಾತ ಸರೋದ್ ವಾದಕ ಪಂಡಿತ್‌ ರಾಜೀವ್‌ ತಾರನಾಥ್‌ ಅವರಿಗೆ ದೂರವಾಣಿ ಕರೆ ಮಾಡಿ ದಸರಾ ಕಾರ್ಯಕ್ರಮದಲ್ಲಿ ದೊರೆಯುವ ಸಂಭಾವನೆಯಲ್ಲಿ ಕಮಿಷನ್‌ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ‘ಅನಾಮಧೇಯ ವ್ಯಕ್ತಿ’ಯ ವಿರುದ್ಧ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಯಿತು. ನ.30: ಭ್ರೂಣಹತ್ಯೆ ಪ್ರಕರಣದಲ್ಲಿ ಮೈಸೂರು ತಾಲ್ಲೂಕು ವೈದ್ಯಾಧಿಕಾರಿ ರಾಜೇಶ್ವರಿ ಹಾಗೂ ಈ ಹಿಂದೆ ಕುಟುಂಬ ಕಲ್ಯಾಣ ಅಧಿಕಾರಿಯಾಗಿದ್ದ ರವಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಆಯುಕ್ತರಿಗೆ ಸೂಚಿಸಿದರು. ಮಾತಾ ಆಸ್ಪತ್ರೆ ಮಾಲೀಕ ಚಂದನ್ ಬಲ್ಲಾಳ್ ಮುಂತಾದವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT