ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ರಂಗಾಯಣದಲ್ಲಿ ಮೂಡಿಬಂದ ‘ಅನುಭವ ಮಂಟಪ’

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಸಂಭ್ರಮದ ಚಾಲನೆ
Published 8 ಮಾರ್ಚ್ 2024, 6:30 IST
Last Updated 8 ಮಾರ್ಚ್ 2024, 6:30 IST
ಅಕ್ಷರ ಗಾತ್ರ

ಮೈಸೂರು: ‘ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ’ ಎನ್ನುತ್ತ ಮಹಾಮನೆಯಿಂದ ಕೆಳಗಿಳಿದ ‘ಬಸವಣ್ಣ’ ನೆರೆದ ಮಂದಿಗೆಲ್ಲ ವಚನಗಳ ಸಂದೇಶವನ್ನು ಹಂಚುವುದರೊಂದಿಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಗುರುವಾರ ಸಂಜೆ ಅರ್ಥಪೂರ್ಣ ಚಾಲನೆ ದೊರೆಯಿತು.

‘ಇವ ನಮ್ಮವ, ಇವ ನಮ್ಮವ’ ಎಂಬ ಆಶಯದೊಂದಿಗೆ ಇಲ್ಲಿನ ರಂಗಾಯಣವು 24ನೇ ವರ್ಷದ ನಾಟಕೋತ್ಸವವನ್ನು ಹಮ್ಮಿಕೊಂಡಿದ್ದು, ಉದ್ಘಾಟನೆ ಕಾರ್ಯಕ್ರಮ ನಡೆದ ವನರಂಗದ ವೇದಿಕೆಯ ಹಿಂಭಾಗದಲ್ಲಿ ಅನುಭವ ಮಂಟಪದ ಮಾದರಿಯನ್ನು ನಿರ್ಮಿಸಲಾಗಿತ್ತು. ಸಾಹಿತಿ ಜಯಂತ ಕಾಯ್ಕಿಣಿ ‘ಮಹಾಮನೆ’ಯ ಪರದೆಯನ್ನು ಸರಿಸುವ ಮೂಲಕ ನಾಟಕೋತ್ಸವಕ್ಕೆ ಚಾಲನೆ ನೀಡಿದರು.

ನಂತರ ಅಲ್ಲಿಂದ ಹೊರಬಂದ ಶರಣ ವೇಷಧಾರಿ ಕಲಾವಿದರು ದೀಪಗಳನ್ನು ಬೆಳಗುತ್ತ ಸಮಾಜದ ಅಂಧಕಾರವನ್ನು ತೊಡೆದು ಹಾಕುವ ಸಂದೇಶ ಸಾರಿದರು. ಹಿನ್ನೆಲೆಯಲ್ಲಿ ಮೂಡಿಬಂದ ‘ಸಕಲ ಜೀವಾತ್ಮರಿಗೆ ಲೇಸನೇ ಬಯಸುವ’ ವಚನ ಗಾಯನವು ಕಾರ್ಯಕ್ರಮದ ಉದ್ದೇಶವನ್ನು ಸಾರಿತ್ತು.

ನಂತರ ಮಾತನಾಡಿದ ಜಯಂತ ಕಾಯ್ಕಿಣಿ, ‘ಮನುಷ್ಯನಿಗೆ ಮನುಷ್ಯನೇ ಬೇಕಾಗದ ಪರಿಸ್ಥಿತಿಯಲ್ಲಿ ಇದ್ದೇವೆ. ಇಂತಹ ಹೊತ್ತಿನಲ್ಲಿ ಜನಮಾನಸದೊಂದಿಗೆ ಒಂದಾಗಲು ಕಲೆಯ ಜವಾಬ್ದಾರಿ‌ ಹೆಚ್ಚಿದೆ’ ಎಂದರು.

‘ನಮ್ಮ ವಿಕಾಸ ಪಥವು ಹಾವು-ಏಣಿಯಿಂದ ತುಂಬಿದೆ. ಒಳ್ಳೆಯ ಚಿಂತಕರು, ದಾರ್ಶನಿಕರು ನಮ್ಮನ್ನು ಏಣಿಯಂತೆ ಮೇಲೇರಿಸಿದ್ದಾರೆ. ನಡುವೆ ದೊಡ್ಡ ಸರ್ಪ ನಮ್ಮನ್ನು ಕೆಳಗೆ ತಳ್ಳಲು ಕುಳಿತಿದೆ. ಹೀಗಾಗಿ ಎಚ್ಚರಿಕೆಯ ನಡೆ ಅಗತ್ಯ’ ಎಂದರು.

‘ಕಲೆ, ಸಾಹಿತ್ಯ ಸಮಾಜದ ಇಸಿಜಿ ಇದ್ದ ಹಾಗೇ. ಇದು ನಮ್ಮ ಆತ್ಮಸಾಕ್ಷಿಯನ್ನು ಆಗಾಗ್ಗೆ ಪರೀಕ್ಷಿಸುತ್ತಿರುತ್ತದೆ. ಆತ್ಮ ಎಂದರೆ ಎಲ್ಲರಲ್ಲಿ ಹಂಚಿಹೋಗಿರುವ ‘ಕಲೆಕ್ಟಿವ್ ಸೋಲ್’. ಕಲೆಯಷ್ಟೇ ನಮ್ಮನ್ನೆಲ್ಲಾ ಒಟ್ಟಾಗಿ ಕರೆದುಕೊಂಡು ಹೋಗುವ ಮಾಧ್ಯಮ’ ಎಂದು ತಿಳಿಸಿದರು.

ಬಹುರೂಪಿ ಸಂಚಾಲಕ ಪ್ರೊ. ಎಚ್.ಎಸ್.ಉಮೇಶ್ ‘ಎಲ್ಲಿಯವರೆಗೆ ಪ್ರೇಕ್ಷಕರನ್ನು ಒಳಗೊಳ್ಳುವುದಿಲ್ಲವೋ ಅಲ್ಲಿಗೆ ರಂಗಭೂಮಿಗೆ ಉಳಿಗಾಲ ಇಲ್ಲ. ಇವ ನಮ್ಮವ ಎನ್ನುವುದೂ ಅದೇ ಆಶಯ. ರಂಗಭೂಮಿಯಲ್ಲಿ ಎಲ್ಲರೂ ನಮ್ಮವರು. ನಾಟಕ ಎಂದರೆ ಸಮಷ್ಟಿ ಸೃಷ್ಟಿ’ ಎಂದು ಆಶಿಸಿದರು.

ಶಾಸಕ ಹರೀಶ್ ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ವೇದಿಕೆಯಲ್ಲಿದ್ದರು.

ನಾಟಕೋತ್ಸವದ ಉದ್ಘಾಟನೆಗೆ ಹಿರಿಯರ ಜೊತೆಗೆ ಕಿರಿಯರೂ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದು, ರಂಗ ಸಂಭ್ರಮದಲ್ಲಿ ಭಾಗಿಯಾದರು.

ಮೈಸೂರಿನ ರಂಗಾಯಣದ ವನರಂಗ ವೇದಿಕೆಯಲ್ಲಿ ಗುರುವಾರ ಸಂಜೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆ ಸಂದರ್ಭ ‘ಅನುಭವ ಮಂಟಪ’ದಿಂದ ಹೊರಬಂದ ಬಸವಣ್ಣ ವೇಷಧಾರಿಗೆ ಶಾಸಕ ಕೆ. ಹರೀಶ್‌ ಗೌಡ ಕೈ ಮುಗಿದರು. ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜು ನಿರ್ಮಲಾ ಮಠಪತಿ ಸಾಹಿತಿ ಜಯಂತ ಕಾಯ್ಕಿಣಿ ಹಾಗೂ ಎಚ್‌.ಎಸ್. ಉಮೇಶ್‌ ಪಾಲ್ಗೊಂಡರು –ಪ್ರಜಾವಾಣಿ ಚಿತ್ರ
ಮೈಸೂರಿನ ರಂಗಾಯಣದ ವನರಂಗ ವೇದಿಕೆಯಲ್ಲಿ ಗುರುವಾರ ಸಂಜೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆ ಸಂದರ್ಭ ‘ಅನುಭವ ಮಂಟಪ’ದಿಂದ ಹೊರಬಂದ ಬಸವಣ್ಣ ವೇಷಧಾರಿಗೆ ಶಾಸಕ ಕೆ. ಹರೀಶ್‌ ಗೌಡ ಕೈ ಮುಗಿದರು. ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜು ನಿರ್ಮಲಾ ಮಠಪತಿ ಸಾಹಿತಿ ಜಯಂತ ಕಾಯ್ಕಿಣಿ ಹಾಗೂ ಎಚ್‌.ಎಸ್. ಉಮೇಶ್‌ ಪಾಲ್ಗೊಂಡರು –ಪ್ರಜಾವಾಣಿ ಚಿತ್ರ

ಚಲನಚಿತ್ರೋತ್ಸವ, ಕರಕುಶಲ ವಸ್ತುಗಳ ಪ್ರದರ್ಶನ, ಚಾರಿತ್ರಿಕ ದಾಖಲೆಗಳ ಪ್ರದರ್ಶನ, ಆಹಾರ ಮೇಳಗಳು ಜನರನ್ನು ಆಕರ್ಷಿಸಿದ್ದು, ಶ್ರಮ ಸಂಸ್ಕೃತಿಯನ್ನು ಬಿಂಬಿಸುವ ವಸ್ತುಪ್ರದರ್ಶನಗಳೂ ಗಮನ ಸೆಳೆಯುತ್ತಿವೆ.

ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಮಾರ್ಚ್‌ 9 ಹಾಗೂ 10ರಂದು ವಚನ ಸಾಹಿತ್ಯದ ಪ್ರಸ್ತುತತೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿರುವುದು ಈ ಬಾರಿಯ ವಿಶೇಷ.

ನಾಟಕೋತ್ಸವ ಅಂಗವಾಗಿ ಕಿರುರಂಗ ಮಂದಿರದಲ್ಲಿ ರಂಗಸಂಪದ (ಬೆಂಗಳೂರು) ಕಲಾವಿದರು ಬಿ. ಸುರೇಶ್ ನಿರ್ದೇಶನದಲ್ಲಿ ‘ಲೋಕದ ಒಳಹೊರಗೆ’ ನಾಟಕ ಪ್ರದರ್ಶಿಸಿದರು
ನಾಟಕೋತ್ಸವ ಅಂಗವಾಗಿ ಕಿರುರಂಗ ಮಂದಿರದಲ್ಲಿ ರಂಗಸಂಪದ (ಬೆಂಗಳೂರು) ಕಲಾವಿದರು ಬಿ. ಸುರೇಶ್ ನಿರ್ದೇಶನದಲ್ಲಿ ‘ಲೋಕದ ಒಳಹೊರಗೆ’ ನಾಟಕ ಪ್ರದರ್ಶಿಸಿದರು

ಜನಮನ ಸೆಳೆದ ನಾಟಕಗಳು

ಮೊದಲ ದಿನ ಕಿರು ರಂಗಮಂದಿರದಲ್ಲಿ ಬೆಂಗಳೂರಿನ ರಂಗಸಂಪದ ತಂಡದ ‘ಲೋಕದ ಒಳಹೊರಗೆ’ (ಕನ್ನಡ) ಭೂಮಿಗೀತದಲ್ಲಿ ರಂಗಾಯಣ ಕಲಾವಿದರಿಂದ ‘ಮುಟ್ಟಿಸಿಕೊಂಡವರು’ ಹಾಗೂ ಕಲಾಮಂದಿರದಲ್ಲಿ ದಾವಣಗೆರೆಯ ಚಿಂದೋಡಿ ಲೀಲಾರವರ ಕೆ.ಬಿ.ಆರ್. ಡ್ರಾಮಾ ಕಂಪನಿ ತಂಡವು ಶಿಶುನಾಳ ಶರೀಫ’ (ಕನ್ನಡ) ನಾಟಕ ಪ್ರದರ್ಶನಗೊಂಡವು. ಬಹುತೇಕ ನಾಟಕಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಯುವಜನರೂ ನಾಟಕಗಳತ್ತ ಹೆಜ್ಜೆ ಇಟ್ಟರು. ಮಾರ್ಚ್‌ 11ರವರೆಗೆ ನಾಟಕೋತ್ಸವ ನಡೆಯಲಿದ್ದು ಕನ್ನಡದ ವಿವಿಧ ಭಾಷೆಗಳ 17 ನಾಟಕಗಳು ಪ್ರೇಕ್ಷಕರನ್ನು ರಂಜಿಸಲಿವೆ. ಉತ್ಸವದ ಆಶಯಕ್ಕೆ ತಕ್ಕಂತೆ ನಾಟಕಗಳನ್ನು ಆಯ್ಕೆ ಮಾಡಲಾಗಿದೆ.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಗೆ ಬಂದ ಆಸಕ್ತರು –ಪ್ರಜಾವಾಣಿ ಚಿತ್ರ
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಗೆ ಬಂದ ಆಸಕ್ತರು –ಪ್ರಜಾವಾಣಿ ಚಿತ್ರ

ಜನಪದ ಸಂಭ್ರಮ

ಉದ್ಘಾಟನೆಗೆ ಮುನ್ನ ಹಾಗೂ ನಂತರದಲ್ಲಿ ರಂಗಾಯಣದ ಹೊರ ಆವರಣದಲ್ಲಿ ಕಲಾ ತಂಡಗಳಿಂದ ಪ್ರದರ್ಶನ ನಡೆಯಿತು. ಮಹಾರಾಷ್ಟ್ರದ ಸಾಂಗ್ಲಿಯ ಸ್ಯಾಪ ಬಂದ್ಗರ್ ಮತ್ತು ತಂಡದ ‘ಧಂಗರಿ ಗಜ’ ಮಧ್ಯಪ್ರದೇಶದ ಮಾಯಾರಾಂ ದುರ್ವೆ ಮತ್ತು ತಂಡದ ‘ಗುಡುಂ ಬಾಜ’ ಮೈಸೂರಿನ ಗುರು ಮತ್ತು ತಂಡದ ‘ಚಂಡೆ ವಾದನ’ ಚಾಮರಾಜನಗರದ ನಾಗರಾಜು ಮತ್ತು ತಂಡದ ‘ಕಂಸಾಳೆ’ ಚನ್ನರಾಯಪಟ್ಟಣದ ರಾಧಮ್ಮ ಮತ್ತು ತಂಡದ ‘ನಾದಸ್ವರ’ ಅರಸೀಕೆರೆಯ ಜಯರಾಂ ಮತ್ತು ತಂಡದ ‘ಗಾರುಡಿ ಗೊಂಬೆ’ ನೃತ್ಯ ಪ್ರದರ್ಶನಗಳು ಕಲಾಸಕ್ತರನ್ನು ಸೆಳೆದವು.

ನಾಟಕೋತ್ಸವ ಅಂಗವಾಗಿ ಆಯೋಜಿಸಿರುವ ಕರಕುಶಲ ಮೇಳದಲ್ಲಿ ಗುರುವಾರ ಮಹಿಳೆಯರು ಖರೀದಿ ನಡೆಸಿದರು
ಪ್ರಜಾವಾಣಿ ಚಿತ್ರ
ನಾಟಕೋತ್ಸವ ಅಂಗವಾಗಿ ಆಯೋಜಿಸಿರುವ ಕರಕುಶಲ ಮೇಳದಲ್ಲಿ ಗುರುವಾರ ಮಹಿಳೆಯರು ಖರೀದಿ ನಡೆಸಿದರು ಪ್ರಜಾವಾಣಿ ಚಿತ್ರ

ಪುಸ್ತಕ ಖರೀದಿಗೆ ನಿರಾಸಕ್ತಿ

ನಾಟಕೋತ್ಸವ ಅಂಗವಾಗಿ ನಡೆದಿರುವ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಗುರುವಾರ ತಕ್ಕ ಸಂಖ್ಯೆಯಲ್ಲಿ ಜನರು ಭೇಟಿ ಕೊಟ್ಟರು. ಬಟ್ಟೆ ಹಾಗೂ ಆಹಾರ ಉತ್ಪನ್ನಗಳ ಖರೀದಿಯತ್ತ ಜನರ ಚಿತ್ತ ಹರಿಯಿತು. ಆದರೆ ಪುಸ್ತಕ ಮಳಿಗೆಗಳತ್ತ ಜನ ಸುಳಿಯಲಿಲ್ಲ. ನವ ಕರ್ನಾಟಕ ಅಭಿರುಚಿ ಸ್ನೇಹ ಸಪ್ನಾ ಮೈಸೂರು ವಿ.ವಿ. ಪ್ರಸಾರಾಂಗ ಹಾಗೂ ಕ್ರಿಯಾ ಮಾಧ್ಯಮ ಪ್ರಕಾಶನಗಳು ಬಹುರೂಪಿಯಲ್ಲಿ ಮಳಿಗೆ ತೆರೆದಿವೆ. ನೂರಾರು ಪುಸ್ತಕಗಳನ್ನು ಮಾರಾಟಕ್ಕೆ ಇಟ್ಟಿದ್ದು ಪ್ರಸಾರಾಂಗವು ರಿಯಾಯಿತಿಯನ್ನೂ ನೀಡುತ್ತಿದೆ. ಆದಾಗ್ಯೂ ಪುಸ್ತಕ ಪ್ರಿಯರು ಖರೀದಿಗೆ ಮನಸ್ಸು ಮಾಡಿಲ್ಲ. ಈ ಬಾರಿಯ ಬಹುರೂಪಿಯಲ್ಲಿ ವಿಶೇಷವಾಗಿ ಕಲೆ ರಂಗಭೂಮಿ ಸಂಬಂಧಿಸಿದ ಚಾರಿತ್ರಿಕ ದಾಖಲೆಗಳ ಪ್ರದರ್ಶನ ಆಯೋಜಿಸಲಾಗಿದೆ. ರಂಗಭೂಮಿ ಹಾಗೂ ಕಲಾವಿದರಿಗೆ ಸಂಬಂಧಿಸಿದಂತೆ ಮಹಾರಾಜ ಬರೆದಿರುವ ಪತ್ರಗಳ ಪತ್ರಿಗಳನ್ನು ಪ್ರದರ್ಶನ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT