ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನದ ಮಹಿಮೆ, ಐತಿಹ್ಯ ತಿಳಿದುಕೊಳ್ಳಬೇಕು

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 7 ಮಾರ್ಚ್ 2024, 5:47 IST
Last Updated 7 ಮಾರ್ಚ್ 2024, 5:47 IST
ಅಕ್ಷರ ಗಾತ್ರ

ಮೈಸೂರು: ‘ನಮ್ಮ ಸುತ್ತಮುತ್ತಲಿನ ಹಾಗೂ ಭೇಟಿ ನೀಡುವ ದೇವಸ್ಥಾನಗಳ ಮಹಿಮೆ ಮತ್ತು ಇತಿಹಾಸವನ್ನು ತಿಳಿದುಕೊಳ್ಳಬೇಕು’ ಎಂದು ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಲಹೆ ನೀಡಿದರು.

ಇಲ್ಲಿನ ಊಟಿ ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶ್ರಮದ ನಾದಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇತಿಹಾಸಕಾರ ವಿಕ್ರಂ ಸಂಪತ್‌ ಅವರ ‘ವೇಟಿಂಗ್‌ ಫಾರ್ ಶಿವ’– ಇಂಗ್ಲಿಷ್‌ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಎಲ್ಲರೂ ದೇವಸ್ಥಾನಗಳಿಗೆ ಹೋಗುತ್ತೇವೆ. ಆ ನೆಪದಲ್ಲಿ ಪ್ರವಾಸ ಮಾಡುತ್ತಿದ್ದೇವಷ್ಟೆ. ಅಲ್ಲಿನ ವಿಶೇಷ ಊಟ ಮಾಡುತ್ತೇವೆ. ವಾಪಸಾಗುತ್ತೇವೆ. ದೇವಸ್ಥಾನದ ವಿಶೇಷದ ಬಗ್ಗೆ ತಿಳಿದುಕೊಳ್ಳುವುದಿಲ್ಲ. ಇದು ಸರಿಯಲ್ಲ. ಭಕ್ತಿಯೂ ಅಲ್ಲ. ಆಗ ಯಾತ್ರೆ ಅರ್ಥಪೂರ್ಣವಾದಂತೆ ಆಗುವುದೂ ಇಲ್ಲ. ನಮ್ಮ ಶ್ರದ್ಧಾಕೇಂದ್ರಗಳ ಬಗ್ಗೆ ನಮಗೇ ಅರಿವಿಲ್ಲ ಎಂದರೆ ಹೇಗೆ?’ ಎಂದರು.

‘ಅಯೋಧ್ಯೆ ಹಾಗೂ ಕಾಶಿ ಎರಡೂ ಒಂದೇ. ಅಯೋಧ್ಯೆಯನ್ನು ಕೆಲವರು ಹಿಂದೆ ನಮ್ಮದು‌ ನಮ್ಮದು ಎನ್ನುತ್ತಿದ್ದರು. ಈಗ, ಅದು ನಮ್ಮದಾಗಿದೆ’ ಎಂದು ಹೇಳಿದರು.

‘ದೇವರಿಗೆ ಭದ್ರತೆ ಬೇಕಿಲ್ಲ.‌ ಆತನ ಆಭರಣಗಳಿಗಷ್ಟೆ ಭದ್ರತೆ ಬೇಕು. ಶಿವನಿಗೆ ಆಭರಣಗಳು ಕೂಡ ಇರುವುದಿಲ್ಲ. ದೇವರು ಎಲ್ಲ ಕಡೆಯೂ ಇರುತ್ತಾನೆ. ನಾವೆಲ್ಲರೂ ದೇವರನ್ನು ‍ಪ್ರಾರ್ಥಿಸುವುದು ಜ್ಞಾನ ಕೊಡು ಎಂದೇ ಎಲ್ಲವೇ?’ ಎಂದರು.

‘ದೇಗುಲಗಳಿಗೆ ಯಾತ್ರೆ ಹೋಗುವುದು ಫ್ಯಾಷನ್ ಆಗಬಾರದು. ಭಕ್ತಿಪೂರ್ಣವಾಗಿರಬೇಕು’ ಎಂದು ತಿಳಿಸಿದರು.

‘ದೇವರುಗಳು ನಮಗೆ ಬೇಕೇ ಬೇಕು. ಯುವಕರಾಗಿದ್ದಾಗಲೇ ಜ್ಞಾನವನ್ನು ಪಡೆದುಕೊಳ್ಳಬೇಕು. ದೇವರಿಗೆ ಸಲ್ಲಿಸುವ ಆತ್ಮ ನಮಸ್ಕಾರ ಶುದ್ಧವಾಗಿರಬೇಕು’ ಎಂದರು.

‘ವಿಕ್ರಂ ಅವರು ದತ್ತನ ಬಗ್ಗೆಯೂ ಗ್ರಂಥ ರಚಿಸಲಿ’ ಎಂದು ಸಲಹೆ ನೀಡಿದರು.

ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಮಾತನಾಡಿ, ‘ದೇವರ ಬಗ್ಗೆ ಹೀಗೆ ಪುಸ್ತಕಗಳಲ್ಲಿ ಸಂಶೋಧನಾಪೂರ್ಣ ಬರಹಗಳನ್ನು ಪ್ರಕಟಿಸುವುದು ಶಾಶ್ವತವಾಗಿ ಉಳಿಯುತ್ತದೆ. ಇಂತಹ ಕೃತಿಗಳನ್ನು ಓದಬೇಕು. ಭಾರತಾಂಬೆಗೆ ನಮ್ಮ ಜೀವನವನ್ನು ಧಾರೆ ಎರೆಯಬೇಕು’ ಎಂದರು.

ಕೃತಿಕಾರ ವಿಕ್ರಂ ಸಂಪತ್ ಮಾತನಾಡಿ, ‘ಕಾಶಿ ಮೇಲೆ ಹಲವು ಬಾರಿ ದಾಳಿಗಳು ನಡೆದಿದ್ದರೂ ಇಂದಿಗೂ ಕಾಶಿ ವಿಶ್ವನಾಥ ದೇವಸ್ಥಾನ ತನ್ನ ಅಸ್ಮಿತೆ ಹಾಗೂ ಪಾವಿತ್ರ‍್ಯತೆ ಉಳಿಸಿಕೊಂಡಿದೆ’ ಎಂದು ಹೇಳಿದರು.

ಪತ್ರಿಕೋದ್ಯಮಿ ಕೆ.ಬಿ. ಗಣಪತಿ ಮತ್ತು ಲೇಖಕ ವಿಕ್ರಂ ಸಂಪತ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT