ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಂಟೈನ್‌ ನಿರಾಕರಿಸಿದರೆ ಬರ್ತಾರೆ ಪೊಲೀಸರು!

ಪ್ರತಿ ಹೋಬಳಿಗೊಂದು ಕೋವಿಡ್‌ ಕೇರ್‌ ಸೆಂಟರ್‌ ಆರಂಭಕ್ಕೆ ಜಿಲ್ಲಾಡಳಿತದ ಯೋಜನೆ
Last Updated 20 ಮೇ 2021, 4:03 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಕೋವಿಡ್‌ ದೃಢ ಪ್ರಮಾಣ ಏರುಗತಿಯಲ್ಲಿದೆ. ಸೋಂಕಿನ ಸರಪಣಿಯನ್ನು ಮೂಲದಲ್ಲೇ ತುಂಡರಿಸಲು ಜಿಲ್ಲಾಡಳಿತ, ಇದೀಗ ಪರಿಣಾಮಕಾರಿ ಕ್ರಮ ಕೈಗೊಳ್ಳುವತ್ತ ತನ್ನ ಚಿತ್ತ ಹರಿಸಿದೆ.

ಸೋಂಕಿತರಾದವರು ಕ್ವಾರಂಟೈನ್‌ ನಿಯಮಾವಳಿ ಪಾಲಿಸುತ್ತಿಲ್ಲ. ಎಂದಿನಂತೆಯೇ ಎಲ್ಲೆಡೆಯೂ ಸುತ್ತಾಡುತ್ತಿದ್ದಾರೆ. ಸೋಂಕು ವಾಹಕರಾಗಿದ್ದಾರೆ. ಇದರ ಜೊತೆಗೆ ಅಸಂಖ್ಯಾತರಿಗೆ ಹೋಂ ಐಸೋಲೇಷನ್‌ ಸೌಲಭ್ಯವೂ ಇಲ್ಲದಾಗಿದೆ. ಆದರೂ ಬಹುತೇಕರು ಕೋವಿಡ್‌ ಆರೈಕೆ ಕೇಂದ್ರಕ್ಕೂ ದಾಖಲಾಗುತ್ತಿಲ್ಲ. ಇದು ಜಿಲ್ಲೆಯಲ್ಲಿ ನಿತ್ಯವೂ ಸೋಂಕು ದೃಢ ಪ್ರಮಾಣ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಯಲ್ಲಿದ್ದರೂ, ಇದರಿಂದಾಗಿಯೇ ದಿನವೂ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿಲ್ಲ. ಇದರಿಂದ ಕಂಗಾಲಾಗಿರುವ ಜಿಲ್ಲಾಡಳಿತ, ಇದೀಗ ಪೊಲೀಸ್‌ ಬಲ ಪ್ರಯೋಗಕ್ಕೂ ಸಜ್ಜಾಗಿದೆ. ಇದರ ಪರಿಣಾಮ ಕೋವಿಡ್‌ ಮಾರ್ಗಸೂಚಿ ಪಾಲಿಸದ ಪೀಡಿತರಿಗೆ ಇನ್ಮುಂದೆ ಪೊಲೀಸರೇ ತಕ್ಕ ಪಾಠ ಕಲಿಸಲಿದ್ದಾರೆ.

14 ಕೋವಿಡ್‌ ಆರೈಕೆ ಕೇಂದ್ರ: ಕೆ.ಆರ್‌.ನಗರ ಶಾಸಕ ಸಾ.ರಾ.ಮಹೇಶ್‌ ಆರಂಭಿಸಿರುವ ಕೋವಿಡ್‌ ಆರೈಕೆ ಕೇಂದ್ರವೂ ಸೇರಿದಂತೆ (ಮೈಸೂರು ನಗರ ಹೊರತುಪಡಿಸಿ) ಜಿಲ್ಲೆಯಲ್ಲಿ ಒಟ್ಟು 14 ಕೋವಿಡ್‌ ಆರೈಕೆ ಕೇಂದ್ರಗಳು ಇದೀಗ ಕಾರ್ಯ ನಿರ್ವಹಿಸುತ್ತಿವೆ.

ಸೋಂಕಿನ ತೀವ್ರತೆ ತಗ್ಗಿಸಲು ಗ್ರಾಮೀಣ ಪ್ರದೇಶದಲ್ಲಿ ಮತ್ತಷ್ಟು ಕೋವಿಡ್‌ ಆರೈಕೆ ಕೇಂದ್ರ ಆರಂಭಕ್ಕೆ ಜಿಲ್ಲಾ ಪಂಚಾಯಿತಿ ಆಡಳಿತ ಮುಂದಾಗಿದೆ. ಕನಿಷ್ಠ ಪಕ್ಷ ಹೋಬಳಿ ಗೊಂದರಂತೆ ಆರೈಕೆ ಕೇಂದ್ರ ತೆರೆಯಲು ಸಿದ್ಧತೆ ನಡೆಸಿಕೊಂಡಿದೆ. ಸರ್ಕಾರಿ ಹಾಸ್ಟೆಲ್‌ಗ
ಳನ್ನು ಇದಕ್ಕಾಗಿ ಬಳಸಲು ಚಿಂತಿಸಿದೆ. ಹಾಸಿಗೆ, ಮಂಚ ಸೇರಿದಂತೆ ಇನ್ನಿತರೆ ಸೌಲಭ್ಯ ಒದಗಿಸಲಿಕ್ಕಾಗಿ ವಿವಿಧ ಕಂಪನಿ
ಗಳ ಸಿಎಸ್‌ಆರ್‌ ದೇಣಿಗೆ ಕೋರಿದೆ ಎಂಬುದು ಮೂಲಗಳಿಂದ ಗೊತ್ತಾಗಿದೆ.

‘ಗ್ರಾಮೀಣ ಪ್ರದೇಶದ ಸೋಂಕಿತ ರನ್ನು ಕಡ್ಡಾಯವಾಗಿ ಕ್ವಾರಂಟೈನ್‌ ಗೊಳಪಡಿಸಲು ನಿರ್ಧರಿಸಲಾಗಿದೆ. ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 10 ದಿನ ಚಿಕಿತ್ಸೆ ಕೊಡಲಾಗುವುದು. ಪ್ರತಿಯೊಬ್ಬ ಸೋಂಕಿತರನ್ನು ಆರೈಕೆ ಕೇಂದ್ರಕ್ಕೆ ಕರೆ ತರಲು ಮನವೊಲಿಸಲಾಗುವುದು. ಒಪ್ಪದಿದ್ದರೇ ಪೊಲೀಸ್‌ ಸಹಾಯ ಬಳಸಿಕೊಳ್ಳಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಎಂ.ಯೋಗೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಶಾ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ಆರಂಭಿಸಿದ್ದಾರೆ. ಹೋಂ ಐಸೋಲೇಷನ್‌ಗೆ ಅವಕಾಶ ಇದೆಯಾ? ಎಂಬುದನ್ನು ನಮೂದಿಸಲಿದ್ದಾರೆ. ಯಾರ ಮನೆಯಲ್ಲಿ ಸೂಕ್ತ ಸೌಲಭ್ಯ ಇಲ್ಲ ಅಂತಹವರು ಸೋಂಕಿತರಾದರೆ, ಅವರನ್ನು ಕಡ್ಡಾಯವಾಗಿ ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗುವುದು. ಪ್ರತಿ ಗ್ರಾಮದ ನಿಖರ ಮಾಹಿತಿಯನ್ನು ಸಂಗ್ರಹಿಸುವಂತೆ ಆಯಾ ಗ್ರಾಮ ಪಂಚಾಯಿತಿಯ ಪಿಡಿಒಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಿಗೆ ಎಸ್‌ಪಿ ಸೂಚನೆ

‘ತಹಶೀಲ್ದಾರ್‌, ತಾಲ್ಲೂಕು ಆರೋಗ್ಯಾಧಿಕಾರಿ ನೇತೃತ್ವದ ತಂಡಗಳು ಸೋಂಕಿತರನ್ನು ಕೋವಿಡ್‌ ಆರೈಕೆ ಕೇಂದ್ರಗಳಿಗೆ ಕರೆತರಲು ಆರಂಭದಲ್ಲಿ ಮನವೊಲಿಸಲಿವೆ. ಈ ತಂಡದ ಮನವಿಗೆ ಸ್ಪಂದಿಸಿದರೆ ಸಮಸ್ಯೆಯಿಲ್ಲ. ಯಾರಾದರೂ ಪ್ರತಿರೋಧ ತೋರಿದರೆ, ತಪ್ಪಿಸಿಕೊಳ್ಳಲು ಮುಂದಾದರೆ ಪೊಲೀಸರೇ ಅವರನ್ನು ಕೇಂದ್ರಕ್ಕೆ ಕರೆದೊಯ್ಯಲಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ತಿಳಿಸಿದರು.

‘ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮಂಗಳವಾರ ಈ ಕುರಿತಂತೆ ಸಭೆ ನಡೆದಿದೆ. ತಹಶೀಲ್ದಾರ್, ತಾಲ್ಲೂಕು ಆರೋಗ್ಯಾಧಿಕಾರಿ, ಪೊಲೀಸ್‌ ಇನ್ಸ್‌ಪೆಕ್ಟರ್‌ ನೇತೃತ್ವದಲ್ಲಿ ಪ್ರತಿ ತಾಲ್ಲೂಕಿನಲ್ಲೂ ತಂಡ ರಚಿಸಲಾಗಿದೆ. ತಹಶೀಲ್ದಾರ್‌, ತಾಲ್ಲೂಕು ಆರೋಗ್ಯಾಧಿಕಾರಿ ನೆರವು ಕೋರುತ್ತಿದ್ದಂತೆ, ಪೊಲೀಸರು ಸೋಂಕಿತರನ್ನು ಆರೈಕೆ ಕೇಂದ್ರಕ್ಕೆ ಕರೆತರಲು ಸಹಾಯ ಮಾಡಲಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಆರೈಕೆ ಕೇಂದ್ರಕ್ಕೆ ಆಮ್ಲಜನಕ ಕಾನ್ಸನ್‌ಟ್ರೇಟರ್‌

‘ಇದೀಗ ಕಾರ್ಯ ನಿರ್ವಹಿಸುತ್ತಿರುವ ಪ್ರತಿ ಕೋವಿಡ್‌ ಆರೈಕೆ ಕೇಂದ್ರದಲ್ಲೂ ತಲಾ 5 ರಿಂದ 10 ಆಮ್ಲಜನಕ ಸಾಂದ್ರಕ (ಕಾನ್ಸನ್‌ಟ್ರೇಟರ್‌)ಗಳಿವೆ. ಆಮ್ಲಜನಕದ ಅವಶ್ಯವಿರುವ ಸೋಂಕಿ ತರಿಗೆ ಇವುಗಳನ್ನು ಒದಗಿಸಲಾಗುತ್ತಿದೆ’ ಎಂದು ಜಿ.ಪಂ.ಸಿಇಒ ಎ.ಎಂ.ಯೋಗೇಶ್‌ ತಿಳಿಸಿದರು.

‘ಆಮ್ಲಜನಕದ ಕಾನ್ಸನ್‌ಟ್ರೇಟರ್‌ನಲ್ಲೇ ಸೋಂಕಿತನ ಆಮ್ಲಜನಕ ಪ್ರಮಾಣ ಹೆಚ್ಚಿದರೆ ಆರೈಕೆ ಕೇಂದ್ರದಲ್ಲೇ ಚಿಕಿತ್ಸೆ ಮುಂದುವರಿಸಲಾ
ಗುತ್ತಿದೆ. ಸ್ವಲ್ಪ ಆಚೀಚೆಯಾದರೆ ತಾಲ್ಲೂಕು ಕೇಂದ್ರ ಗಳಲ್ಲಿರುವ ಕೋವಿಡ್‌ ಆಸ್ಪತ್ರೆಗೆ ಆಂಬುಲೆನ್ಸ್‌ ಮೂಲಕ ಕಳುಹಿಸಿಕೊಡಲಾಗುತ್ತಿದೆ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT