ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಪರ ಕೋರ್ಸ್‌ ‘ಬಿಎಸ್‌ಡಬ್ಲ್ಯು ಆನರ್ಸ್‌’ ಆರಂಭ

ಮೈಸೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗದಿಂದ ಕೋರ್ಸ್‌; ಎನ್‌ಇಪಿ ಪಠ್ಯಕ್ರಮ
Last Updated 24 ಆಗಸ್ಟ್ 2022, 2:36 IST
ಅಕ್ಷರ ಗಾತ್ರ

ಮೈಸೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಸಾರ ಇದೇ ಮೊದಲ ಬಾರಿಗೆ ಮೈಸೂರು ವಿ.ವಿ.ಯ ಸಮಾಜಕಾರ್ಯ ಅಧ್ಯಯನ ವಿಭಾಗವು 4 ವರ್ಷಗಳ ‘ಬಿಎಸ್‌ಡಬ್ಲ್ಯು ಆನರ್ಸ್‌’ (ಸಮಾಜ ಕಾರ್ಯ ಪದವಿ) ಕೋರ್ಸ್‌ ಅನ್ನು 2022–23ನೇ ಸಾಲಿನಲ್ಲಿ ಆರಂಭಿಸುತ್ತಿದೆ.

ಸಮಾಜ ಕಾರ್ಯ ಪದವಿ (ಬಿಎಸ್‌ಡಬ್ಲ್ಯು) ಕೋರ್ಸ್‌ ಮೈಸೂರಿನ ಸೇಂಟ್‌ ಫಿಲೋಮಿನಾ ಕಾಲೇಜು ಹಾಗೂ ಕೆ.ಆರ್‌.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿದೆ. ಆದರೆ, ‘ಆನರ್ಸ್‌’ ಕೋರ್ಸ್‌ ಅನ್ನು ಮಾನಸ ಗಂಗೋತ್ರಿಯ ಕ್ಯಾಂಪಸ್‌ನ ಅಧ್ಯಯನ ವಿಭಾಗದಲ್ಲಿ ಮಾತ್ರ ಪರಿಚಯಿಸುತ್ತಿದ್ದು, ದಾಖಲಾತಿ ಪ್ರಾರಂಭಗೊಂಡಿದೆ.

ಸಮಾಜ ಕಾರ್ಯ ಪದವಿಯು ವೃತ್ತಿಪರ ಕೋರ್ಸ್‌ ಆಗಿರುವುದರಿಂದ ಬೇಡಿಕೆ ಹೆಚ್ಚು. ಉದ್ಯೋಗಾವಕಾಶ ಹೇರಳವಾಗಿವೆ. ರಾಜ್ಯದಲ್ಲಿ ಎನ್‌ಇಪಿ ಪದ್ಧತಿ ಅಳವಡಿಸಿಕೊಂಡಿರುವುದರಿಂದ ಮೈಸೂರು ವಿಶ್ವವಿದ್ಯಾಲಯವು ‘ಆನರ್ಸ್‌ ಕೋರ್ಸ್‌’ ಪ್ರಾರಂಭಿಸುತ್ತಿದೆ. ಮೊದಲ ವರ್ಷ ಪೂರೈಸಿ ಶಿಕ್ಷಣವನ್ನು ಮೊಟಕುಗೊಳಿಸಿದವರಿಗೆ ಸರ್ಟಿಫಿಕೇಟ್‌ ಕೋರ್ಸ್‌ ಸಿಗುತ್ತದೆ. 2ನೇ ವರ್ಷಕ್ಕೆ ಮೊಟಕುಗೊಳಿಸಿದರೆ ‘ಡಿಪ್ಲೊಮಾ ಇನ್‌ ಸೋಷಿಯಲ್‌ ವರ್ಕ್‌’ ಪ್ರಮಾಣಪತ್ರ ನೀಡಲಾಗುತ್ತದೆ. 3 ವರ್ಷ ಪೂರೈಸಿದರೆ ಪದವಿ, ನಾಲ್ಕನೇ ವರ್ಷಕ್ಕೆ ಆನರ್ಸ್‌ ಪದವಿ ನೀಡಲಾಗುತ್ತದೆ. ಮೂರು ವರ್ಷ ಪೂರೈಸಿದವರು ನೇರವಾಗಿ ಪಿಎಚ್‌ಡಿ ಪದವಿಗೂ ಸೇರಿಕೊಳ್ಳಬಹುದು. ಆನರ್ಸ್‌ ಕೋರ್ಸ್‌ನ ವಿದ್ಯಾರ್ಥಿಗಳು ಸ್ನಾತ ಕೋತ್ತರ ಪದವಿ ಪಡೆಯಲು ಒಂದು ವರ್ಷ ಓದಿದರೆ ಸಾಕು.

‘ಈ ಕೋರ್ಸ್‌ ಅನ್ನು ಕನ್ನಡ–ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸ ಲಾಗುತ್ತದೆ. ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬಹುದು. ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು, ಕೈಗಾರಿಕೆ, ವೈದ್ಯಕೀಯ ಮತ್ತು ಮಾನಸಿಕ ಆರೋಗ್ಯ ವಲಯ, ಸಾಮಾಜಿಕ ಉದ್ಯಮ, ಆಪ್ತ ಸಮಾಲೋಚನಾ ಕೇಂದ್ರಗಳಲ್ಲಿ ಉದ್ಯೋಗಾವಕಾಶ ದೊರೆಯಲಿವೆ’ ಎಂದು ಸಮಾಜ ಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಎಚ್‌.ಪಿ.ಜ್ಯೋತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮೀಣ ವಿದ್ಯಾರ್ಥಿಗಳ ಅನು ಕೂಲಕ್ಕಾಗಿ ಮಾನಸ ಗಂಗೋತ್ರಿಯ ಕ್ಯಾಂಪಸ್‌ನಲ್ಲೇ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸು ವಂತೆ ಕುಲಪತಿಯನ್ನು ಕೋರಲಿದ್ದೇವೆ. ಅವರು ಸ್ಪಂದಿಸುವ ವಿಶ್ವಾಸವಿದೆ’ ಎಂದರು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?

ಪಿಯುಸಿ ಉತ್ತೀರ್ಣರಾದ ವರು ‘ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ’ (ಯುಯುಸಿಎಂಎಸ್‌) ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು. ಸೆ.15 ಕೊನೆ ದಿನ. 9480363407, 9880007174, 8548004509 ಸಂಪರ್ಕಿಸಿ.

ಶುಲ್ಕ ಎಷ್ಟು?

ಬಿಎಸ್‌ಡಬ್ಲ್ಯು ಆನರ್ಸ್‌ ಕೋರ್ಸ್‌ನಲ್ಲಿ 50 ಸೀಟುಗಳಿದ್ದು, ಮೆರಿಟ್‌ ಕೋಟಾದಡಿ 35 ಹಾಗೂ ಹಣಕಾಸು ಕೋಟಾದಡಿ 15 ಸೀಟುಗಳನ್ನು ನಿಗದಿಪಡಿಸಲಾಗಿದೆ. ಮೆರಿಟ್‌ ವಿದ್ಯಾರ್ಥಿಗಳು ₹ 15 ಸಾವಿರ ಹಾಗೂ ಹಣಕಾಸು ಕೋಟಾದ ವಿದ್ಯಾರ್ಥಿಗಳು ₹ 30 ಸಾವಿರ ಶುಲ್ಕ ಪಾವತಿಸಬೇಕು.

***

ಕೊಡಗಿನ ಬುಡಕಟ್ಟು ಸಮುದಾಯದವರೂ ಸೇರಿ ಇದುವರೆಗೆ ಇಪ್ಪತ್ತು ವಿದ್ಯಾರ್ಥಿಗಳು ಅರ್ಜಿ ಹಾಕಿದ್ದಾರೆ

–ಡಾ.ಎಚ್‌.ಪಿ.ಜ್ಯೋತಿ, ಮುಖ್ಯಸ್ಥೆ, ಸಮಾಜ ಕಾರ್ಯ ಅಧ್ಯಯನ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT