ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೋಚನೆಗೆ ಸ್ಪಂದಿಸದ ಕಾಂಗ್ರೆಸ್‌: ಶುಶ್ರುತ್‌ಗೌಡ

Published 24 ಏಪ್ರಿಲ್ 2024, 16:19 IST
Last Updated 24 ಏಪ್ರಿಲ್ 2024, 16:19 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ನನಗೆ ಅವಕಾಶ ಸಿಗಲಿಲ್ಲ. ನನ್ನ ಆಲೋಚನೆಗಳಿಗೆ ಪಕ್ಷ ಸ್ಪಂದಿಸಲಿಲ್ಲ. ಮೋದಿ ಅವರ ಒಳ್ಳೆಯ ಕಾರ್ಯ ಮೆಚ್ಚಿ ಬಿಜೆಪಿ ಸೇರಿರುವೆ’ ಎಂದು ಡಾ.ಶುಶ್ರುತ್ ಗೌಡ ಹೇಳಿದರು. 

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಯಾವುದೇ ಷರತ್ತಿಲ್ಲದೇ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿದ್ದು, ಅಭ್ಯರ್ಥಿ ಯದುವೀರ್ ಗೆಲ್ಲಿಸಲು ಶ್ರಮಿಸುವೆ’ ಎಂದರು.

‘ಅಮೆರಿಕದಲ್ಲಿ ವೈದ್ಯನಾಗಿದ್ದೆ. 2019ರಲ್ಲಿ ಭಾರತಕ್ಕೆ ಮರಳಿ ಗ್ರಾಮೀಣರ ಆರೋಗ್ಯ ಸಮಸ್ಯೆ ಬಗೆಹರಿಸಲು ದುಡಿದಿರುವೆ. ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಮನೆ ಬಾಗಿಲಿಗೆ ಸೇವೆ ಒದಗಿಸಿದೆ’ ಎಂದು ಹೇಳಿದರು. 

‘ಭಾರತ್‌ ಜೋಡೋ ಯಾತ್ರೆಯಲ್ಲಿ 5.5 ತಿಂಗಳು ರಾಹುಲ್‌ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದೆ. ಆಗ ಯಾವುದೇ ಪಕ್ಷದ ಪ್ರತಿನಿಧಿಯಾಗಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಮನ್ನಣೆ ಸಿಗಲಿಲ್ಲ. ಅವಕಾಶ ಕೊಡದಿದ್ದರೆ ಮನೆಯಲ್ಲಿ ಇರಲಾಗುತ್ತದೆಯೇ’ ಎಂದು ಪ್ರಶ್ನಿಸಿದರು. 

‘ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕರೆ ಮಾಡಿದ್ದರೂ ಸ್ವೀಕರಿಸಲಿಲ್ಲ. ಎರಡು ಸಂದೇಶವನ್ನೂ ಕಳುಹಿಸಿದ್ದಾರೆ. ಒಂದಕ್ಕೆ ಉತ್ತರಿಸಿರುವೆ. ಬಿಜೆಪಿ ಸೇರ್ಪಡೆ ಬಗ್ಗೆ ಅವರಿಗೆ ಮನವರಿಕೆ ಮಾಡುವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್‌.ನಾಗೇಂದ್ರ, ಮುಖಂಡರಾದ ಗಿರೀಶ್‌ ಪ್ರಸಾದ್‌, ಮಹೇಶ್‌ ರಾಜೇ ಅರಸ್‌, ಮೋಹನ್‌, ದಯಾನಂದ್‌ ಇದ್ದರು.

‘ಪರಿಣಾಮ ಬೀರದು’

‘ಕಾಂಗ್ರೆಸ್‌ ಅಭ್ಯರ್ಥಿಯಾಗಲು ಪ್ರಯತ್ನಿಸಿದ್ದ ಶುಶ್ರುತ್ ಗೌಡ ಪಕ್ಷದ ಸಂಘಟನೆಯಲ್ಲಿ ಗುರುತಿಸಿಕೊಂಡಿರಲಿಲ್ಲ. ಅವರ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್‌ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರದು’ ಎಂದು ಕೆಪಿಸಿಸಿ ವಕ್ತಾರ ಎಚ್‌.ಎ.ವೆಂಕಟೇಶ್‌ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT