ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸಂಸ್ಕೃತಿ ಇಲಾಖೆ ಪುಸ್ತಕ ಮಳಿಗೆ ಬಂದ್

ಹಲವು ತಿಂಗಳಿಂದ ಬೀಗ; ಮಳಿಗೆಯ ಮುಂಭಾಗದಲ್ಲೇ ಸಂಚಾರ ನಿಯಂತ್ರಣದ ಬ್ಯಾರಿಕೇಡ್‌
Published 20 ಜನವರಿ 2024, 5:48 IST
Last Updated 20 ಜನವರಿ 2024, 5:48 IST
ಅಕ್ಷರ ಗಾತ್ರ

ಮೈಸೂರು: ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಅದರ ಅಡಿಯಲ್ಲಿರುವ ಪ್ರಾಧಿಕಾರಗಳ ಪ್ರಕಟಣೆಗಳು ಹಲವು ತಿಂಗಳಿಂದ ಓದುಗರಿಗೆ ಲಭ್ಯವಿಲ್ಲ. ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಸ್ಥಗಿತಗೊಂಡಿದೆ.

ಇಲಾಖೆಯ ಆಡಳಿತ ಕಚೇರಿ ಇರುವ ಇಲ್ಲಿನ ಕಲಾಮಂದಿರದ ಆವರಣದ ಪುಸ್ತಕ ಮಳಿಗೆಗೆ ಸಿಬ್ಬಂದಿ ಇಲ್ಲವೆಂಬ ಕಾರಣಕ್ಕೆ ಹಲವು ತಿಂಗಳಿಂದ ಬೀಗ ಹಾಕಲಾಗಿದೆ. ಪುಸ್ತಕ ಕೊಳ್ಳಲು ಸಹಾಯಕ ನಿರ್ದೇಶಕರ ಕಚೇರಿಗೆ ಹೋಗಬೇಕು. ಮುಚ್ಚಿದ ಮಳಿಗೆಯ ಬಾಗಿಲ ಮೇಲೆ ಸಮಯ ಮತ್ತು ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಮಳಿಗೆಯ ಮುಂಭಾಗದಲ್ಲೇ ಸಂಚಾರ ನಿಯಂತ್ರಣದ ಬ್ಯಾರಿಕೇಡ್‌ಗಳನ್ನೂ ನಿಲ್ಲಿಸಲಾಗಿದೆ.

ಇಲಾಖೆಯ ಅಧೀನದಲ್ಲಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ನಾಟಕ ಅಕಾಡೆಮಿ, ಸಂಗೀತ ಮತ್ತು ನೃತ್ಯ ಅಕಾಡೆಮಿ, ಲಲಿತಕಲಾ ಅಕಾಡೆಮಿ, ರಾಷ್ಟ್ರೀಯ ಸಂತಕವಿ ಕನಕದಾಸ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ಇತ್ತೀಚಿನ ಮಹತ್ವದ ಪ್ರಕಟಣೆಗಳು ಯಾವುವೂ ಲಭ್ಯವಿಲ್ಲ.

‘ಸಾಂಸ್ಕೃತಿಕ ನಗರಿಯಲ್ಲಿ ಸಾಹಿತ್ಯ ಹಾಗೂ ರಂಗಾಸಕ್ತರ ಆಸಕ್ತ ತಾಣವಾದ ಕಲಾಮಂದಿರ, ರಂಗಾಯಣ, ಸುಚಿತ್ರಾ ಕಲಾಗ್ಯಾಲರಿ, ಕಿರುರಂಗಮಂದಿರ ಒಂದೇ ಆವರಣದಲ್ಲಿವೆ. ದೇಶ–ವಿದೇಶದ ಕಾರ್ಯಕ್ರಮಗಳು, ನಾಟಕಗಳು, ಸಾಂಸ್ಕೃತಿಕ ಉತ್ಸವಗಳು ನಡೆಯುವ ಜಾಗದಲ್ಲಿ ‍ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟವು ಹಲವು ವರ್ಷಗಳಿಂದ ಸಮರ್ಪಕವಾಗಿ ನಡೆಯುತ್ತಿಲ್ಲ’ ಎನ್ನುತ್ತಾರೆ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ.

ಸಿಬ್ಬಂದಿ ಕೊರತೆ: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ‘ಕಚೇರಿಯಲ್ಲಿ ಸಹಾಯಕ ನಿರ್ದೇಶಕ, ಎಸ್‌ಡಿಎ ಹಾಗೂ ದಲಾಯತ್ ಹುದ್ದೆ ಬಿಟ್ಟರೇ ಮಂಜೂರಾದ ಬೇರೆ ಹುದ್ದೆಯಿಲ್ಲ. ಧ್ವನಿ ಬೆಳಕು ನಿರ್ವಹಣೆ, ಸ್ವಚ್ಛತೆ ಕೆಲಸ ಮಾಡುವ ಹೊರಗುತ್ತಿಗೆ ಸಿಬ್ಬಂದಿಯೇ ಪುಸ್ತಕ ಮಳಿಗೆಯನ್ನೂ ನಿರ್ವಹಿಸುವ ಪರಿಸ್ಥಿತಿ ಇದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಪ್ರಕಟಣೆಗಳು ಕಡಿಮೆಯಾಗಿದ್ದರಿಂದ ಮಳಿಗೆಯಲ್ಲಿ ಪುಸ್ತಕಗಳು ಕಡಿಮೆಯಾಗಿವೆ. ‌ಅಂಬೇಡ್ಕರ್ ಬದುಕು, ಬರಹ– ಭಾಷಣ ಪುಸ್ತಕಕ್ಕೆ ಬೇಡಿಕೆ ಇದೆ. ಜನವರಿ ಮೊದಲ ವಾರದಲ್ಲಿ ಬಂದ ದಿನವೇ ಖಾಲಿಯಾಯಿತು. ಎಲ್ಲ ಪುಸ್ತಕಗಳ ಖರೀದಿಯ ಬಿಲ್ಲಿಂಗ್‌ ಅನ್ನು ಆಯಾ ದಿನವೇ ಆನ್‌ಲೈನ್‌ನಲ್ಲಿ ದಾಖಲಿಸಲಾಗುತ್ತಿದೆ’
ಎಂದರು.

ಪುಸ್ತಕಗಳ ಲಭ್ಯತೆಯೂ ಕಡಿಮೆ ಪ್ರದರ್ಶನದಲ್ಲಿ ಇಲ್ಲ ಅಚ್ಚುಕಟ್ಟು ಕಾಯಂ ನಿರ್ವಾಹಕರ ನಿಯೋಜನೆಗೆ ಒತ್ತಾಯ

ಸರ್ಕಾರ ಕೋಟಿಗಟ್ಟಲೇ ಖರ್ಚು ಮಾಡಿ ಮುದ್ರಿಸಿದ ಪುಸ್ತಕಗಳನ್ನು ಗ್ರಾಹಕರಿಗೆ ಸುಲಭವಾಗಿ ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕು

-ಸ.ರ.ಸುದರ್ಶನ ಪ್ರಧಾನ ಕಾರ್ಯದರ್ಶಿ ಕನ್ನಡ ಕ್ರಿಯಾ ಸಮಿತಿ

ಪುಸ್ತಕ ಕೊಳ್ಳಲು ಹೋದಾಗೆಲ್ಲಾ ಮಳಿಗೆಯ ಬಾಗಿಲು ಮುಚ್ಚೇ ಇರುತ್ತದೆ. ಕನ್ನಡ ಪುಸ್ತಕಗಳಿಗಾಗಿ ಸರ್ಕಾರಿ ಕಚೇರಿಗೆ ಅಲೆಯುವಂತಾಗಿರುವುದು ಬೇಸರ ತರಿಸಿದೆ

ಅಪುರಾ ಮೈಸೂರು

ಜನ ಬಂದರಷ್ಟೇ ಬಾಗಿಲು ತೆಗೀತೀವಿ!

‘ಜನ ಬಂದರೆ ಮಾತ್ರ ಮಳಿಗೆ ತೆರೆಯುತ್ತೇವೆ. ಪುಸ್ತಕ ಕೇಳಿ ಕಚೇರಿಗೆ ಬಂದ ಯಾರಿಗೂ ಸೇವೆ ತಪ್ಪಿಸಿಲ್ಲ. ಹುದ್ದೆ ನಿಯೋಜನೆಯಾದರೆ ಎಲ್ಲ ವೇಳೆಯಲ್ಲೂ ತೆರೆಯುವ ವ್ಯವಸ್ಥೆ ಮಾಡಲಾಗುವುದು’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ತಿಳಿಸಿದರು. ‘ಇತರೆ ಜಿಲ್ಲೆಗಳ ಕಲಾ ಮಂದಿರಗಳಲ್ಲಿ ಧ್ವನಿ–ಬೆಳಕು ನಿರ್ವಾಹಕ ಹುದ್ದೆ ಇದೆ. ದೊಡ್ಡ ರಂಗ ಮಂದಿರಗಳಿಗೆ ವ್ಯವಸ್ಥಾಪಕ ಹುದ್ದೆಯೂ ಇದೆ. ಹುದ್ದೆಗಳಿಗೆ ಪ್ರಸ್ತಾವನೆಯನ್ನು ಹಲವು ಬಾರಿ ಕಳುಹಿಸಿದ್ದರೂ ಮಂಜೂರಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT