ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | 2030ರೊಳಗೆ ಜಿಲ್ಲೆ ಸಂಪೂರ್ಣ ಸಾಕ್ಷರಗೊಳಿಸಬೇಕು: ಜಿಲ್ಲಾಧಿಕಾರಿ

Published 14 ಡಿಸೆಂಬರ್ 2023, 14:35 IST
Last Updated 14 ಡಿಸೆಂಬರ್ 2023, 14:35 IST
ಅಕ್ಷರ ಗಾತ್ರ

ಮೈಸೂರು: ‘ಜಿಲ್ಲೆಯಲ್ಲಿ 3 ಲಕ್ಷ ವಯಸ್ಕ ಅನಕ್ಷರಸರಿದ್ದು, ಅವರಿಗೆ ಶಿಕ್ಷಣ ನೀಡಿ 2030ರೊಳಗೆ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರಗೊಳಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಲೋಕನಾಥ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ವಯಸ್ಕರ ಶಿಕ್ಷಣ ಸಂಬಂಧಿಸಿದ ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನ ಕುರಿತ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘15 ವರ್ಷ ಮೇಲ್ಪಟ್ಟ ಅನಕ್ಷರಸ್ಥರಿಗೆ ಶಿಕ್ಷಣ ನೀಡಲು ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು. 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಶೇ 72.79ರಷ್ಟಿದ್ದು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಅನಕ್ಷರಸ್ಥರ ಸರ್ವೆ ಮಾಡಿಸಿ, ಅವರ ಮನೆಯಲ್ಲಿಯೇ ಇರುವ ಅಕ್ಷರಸ್ಥರ ಮೂಲಕ ಕಲಿಕೆ ಮಾಡಿಸಬೇಕು’ ಎಂದು ಸಲಹೆ ನೀಡಿದರು.

ಪ್ರೋತ್ಸಾಹ ನೀಡಿ: ‘ಪ್ರತಿ ಗ್ರಾಮದಲ್ಲಿ ಸ್ವಇಚ್ಛೆಯಿಂದ ಬೋಧನೆ ಮಾಡುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಅವರಿಗೆ ಪ್ರಶಂಸನಾ ಪತ್ರ, ಯೋಜನೆಗಳಲ್ಲಿ ಆದ್ಯತೆ ನೀಡಬೇಕು’ ತಿಳಿಸಿದರು.
 
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ‘ಪ್ರತಿ 20 ಅನಕ್ಷರಸ್ಥರಿಗೆ ಒಬ್ಬರು ಸ್ವಯಂ ಬೋಧಕರನ್ನು ನೇಮಿಸಲಾಗುವುದು. 6 ತಿಂಗಳ ಅವಧಿಯ ಬೋಧನೆ ಬಳಿಕ 150 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಶೇ 40 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದವರನ್ನು ಸಾಕ್ಷರರು ಎಂದು ಘೋಷಣೆ ಮಾಡಲಾಗುತ್ತದೆ. ನವ ಸಾಕ್ಷರರಿಗೆ ಪ್ರಮಾಣ ಪತ್ರ ನೀಡಲಾಗುವುದು’ ಎಂದರು.

‘2022–23‌ರಲ್ಲಿ 19,560 ಜನರನ್ನು ಸಾಕ್ಷರರನ್ನಾಗಿ ಮಾಡಲಾಗಿದ್ದು, 2023–24ನೇ ಸಾಲಿಗೆ ರಾಜ್ಯದಿಂದ ಜಿಲ್ಲೆಗೆ 74,820 ಸಾಕ್ಷರರನ್ನಾಗಿಸುವ ಗುರಿ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT