ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸೋಲಿಸಿ ಸಂವಿಧಾನ ಉಳಿಸಿಕೊಳ್ಳೋಣ: ಗುರುಪ್ರಸಾದ್

Published 14 ಏಪ್ರಿಲ್ 2024, 9:08 IST
Last Updated 14 ಏಪ್ರಿಲ್ 2024, 9:08 IST
ಅಕ್ಷರ ಗಾತ್ರ

ಮೈಸೂರು: ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಸಂವಿಧಾನವನ್ನು ಉಳಿಸಿಕೊಳ್ಳೋಣ’ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ತಿಳಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಅಂಗವಾಗಿ ‘ಭಾರತ- ಸಂವಿಧಾನ-ಪ್ರಜಾಪ್ರಭುತ್ವದ ಉಳಿವಿಗಾಗಿ’ ದಲಿತ ಸಂಘರ್ಷ ಸಮಿತಿಯಿಂದ ಇಲ್ಲಿನ ಎಂ.ಜಿ. ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಭಾನುವಾರ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಮೋದಿ 3ನೇ ಬಾರಿ ಪ್ರಧಾನಿಯಾದರೆ ನಾವೆಲ್ಲರೂ ಬೆಂಕಿಯಲ್ಲಿ ಬೇಯುವಂತಹ ಪರಿಸ್ಥಿತಿ ನೋಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಕುಮಾರಸ್ವಾಮಿ ಮಾತನ್ನು ಒಪ್ಪುತ್ತೀರಾ?: ‘ಗ್ಯಾರಂಟಿಗಳಿಂದ ಮಹಿಳೆಯರು ಹಾದಿ ತಪ್ಪಿದರು ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಗ್ರಾಮೀಣ ಭಾಷೆಯಲ್ಲಿ ಹಾದಿ ತಪ್ಪಿದರು ಎಂದರೆ ಏನರ್ಥ? ಮಹಿಳೆಯರು ಕುಮಾರಸ್ವಾಮಿ ಮಾತುಗಳನ್ನು ಒಪ್ಪುತ್ತೀರಾ? ಗ್ಯಾರಂಟಿ ಫಲಾನುಭವಿಗಳನ್ನು ಈ ರೀತಿ ಅಣಕ ಮಾಡುವುದನ್ನು ಎಲ್ಲರೂ ಖಂಡಿಸಬೇಕು. ಬುದ್ಧಿ ಕಲಿಸಬೇಕು’ ಎಂದು ಕರೆ ನೀಡಿದರು.

‘ಮೋದಿಯವರೇ, ಟ್ರೇಲರ್ ತೋರಿಸಲು ಹತ್ತು ವರ್ಷ ತೆಗೆದುಕೊಂಡಿದ್ದೀರಿ. ಈಗ ಯಾವ ಪುರುಷಾರ್ಥಕ್ಕೆ ಮತ ಕೇಳಲು ಬರುತ್ತಿದ್ದೀರಿ?’ ಎಂದು ಕೇಳಿದರು. ‘ಈ ಚುನಾವಣೆಯು ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಒಕ್ಕೂಟ ಭಾರತವನ್ನು ಉಳಿಸಿಕೊಳ್ಳಲು ನಮಗಿರುವ ಕೊನೆಯ ಅವಕಾಶವಾಗಿದೆ’ ಎಂದು ತಿಳಿಸಿದರು.

ಸಂವಿಧಾನದ ಆಶಯಕ್ಕೆ ವಿರುದ್ಧವಿರುವ ಪ್ರಧಾನಿ: ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ‘ಚಹಾ ಮಾರುತ್ತಿದ್ದ ನಾನು ಸಂವಿಧಾನದಿಂದಲೇ ಇಂತಹ ಹುದ್ದೆಗೆ ಬರಲು ಸಾಧ್ಯವಾಯಿತು ಎನ್ನುತ್ತಲೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಕೆಲಸವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ದೇಶಕ್ಕೆ ಎದುರಾಗಿರುವ ಗಂಡಾಂತರವನ್ನು ಹೋಗಲಾಡಿಸಬೇಕು’ ಎಂದರು. ಸಂಸ್ಕೃತಿ ಚಿಂತಕ ಶಿವಸುಂದರ್ ಮಾತನಾಡಿ, ‘ದೇಶದಲ್ಲಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಘನತೆಯ ಬದುಕಿಗೆ ಬೇಕಾದ ಎಲ್ಲವೂ ಸಿಗಲೇಬೇಕು. ಈ ನಿಟ್ಟಿನಲ್ಲಿ, ನಮ್ಮ ಬದುಕಿನ ಪ್ರಶ್ನೆ ಇಂದಿನ ಚುನಾವಣೆಯ ಪ್ರಶ್ನೆಯಾಗಬೇಕು’ ಎಂದು ತಿಳಿಸಿದರು. ಪ್ರಧಾನಿಯನ್ನು ಗಡ್ಡದ ಭೂತ ಎಂದು ವ್ಯಂಗ್ಯವಾಡಿದ ಅವರು, ‘ಭೂತದ ಬಾಯಲ್ಲಿ ಸಂವಿಧಾನವೂ ಬರಬಾರದು’ ಎಂದು ಟೀಕಿಸಿದರು.

ಸಂವಿಧಾನ ಬದಲಾಗಿ ಹೋಗಿದೆ: ‘ಸಂವಿಧಾನ ಈಗಾಗಲೇ ಬದಲಾಗಿ ಹೋಗಿದೆ. ಅಂಬೇಡ್ಕರ್ ಕೊಟ್ಟ ಸಂವಿಧಾನದ ಚಹರೆಗಳು ಉಳಿದೇ ಇಲ್ಲ. ಸಾವಿರ ಇರಿತಗಳಿಂದ ಸಂವಿಧಾನವನ್ನು ಕೊಲ್ಲಲಾಗಿದೆ. ನಮ್ಮ ಬದುಕನ್ನು ಇಂಚು ಇಂಚಾಗಿ ಕೊಚ್ಚಿ ಕೊಲೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಪ್ರಧಾನಿಯು ಸಂವಿಧಾನದ ಬಟ್ಟೆ ಹಾಕಿಲ್ಲದ ಬೆತ್ತಲೆ ರಾಜ ಆಗಿದ್ದಾರೆ. ಈ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುತ್ತಾರೋ ಇಲ್ಲವೋ. ಆದರೆ, ಚುನಾವಣಾ ಬಾಂಡ್ ಅವರನ್ನು ‘420’ ಎಂದು ಈಗಾಗಲೇ ಹೇಳಿದೆ. ಅತಿ ದೊಡ್ಡ ಭ್ರಷ್ಟಾಚಾರಿ ಪಕ್ಷವಿದ್ದರೆ ಅದು ಬಿಜೆಪಿ’ ಎಂದರು. ‘ಸಂವಿಧಾನದ ಆಶಯದಂತೆ ಸಂಪತ್ತು ಹಂಚಿಕೆ ಆಗಬೇಕು ಎಂದು ಹೇಳಿದರೆ ಭಯೋತ್ಪಾದಕ ಎನ್ನುತ್ತಾರೆ, ದೇಶದ್ರೋಹಿ ಎಂದು ಜೈಲಿಗೆ ಕಳುಹಿಸುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ‌ ಬಂದಿದೆ. ಬಿಜೆಪಿಯೇ ಅಧಿಕಾರಕ್ಕೆ ಬಂದರೆ, ನಾವು ಈ ದೇಶದ ನಾಗರಿಕ ಎಂಬುದನ್ನು ಸಾಬೀತುಪಡಿಸಲು ಪರದಾಡಬೇಕಾದ ಪರಿಸ್ಥಿತಿಯನ್ನು ಸರ್ಕಾರ ತಂದೊಡ್ಡಲಿದೆ’ ಎಂದು ತಿಳಿಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರಂಗಕರ್ಮಿ ಎಚ್‌.ಜನಾರ್ಧನ್‌ (ಜನ್ನಿ) ಮಾತನಾಡಿದರು.

ಪ್ರಗತಿಪರ ಚಿಂತಕರಾದ ಎಸ್.ತುಕಾರಾಂ, ಬಸವರಾಜ ದೇವನೂರು, ದಸಂಸ ಜಿಲ್ಲಾ ಸಂಚಾಲಕರಾದ ಹೆಗ್ಗನೂರು ನಿಂಗರಾಜು, ಶಂಭುಲಿಂಗಸ್ವಾಮಿ, ಮುಖಂಡರಾದ ಬೆಟ್ಟಯ್ಯ ಕೋಟೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT