ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾಗೆ ಸನ್ಮಾನ

Published 17 ಮೇ 2024, 8:59 IST
Last Updated 17 ಮೇ 2024, 8:59 IST
ಅಕ್ಷರ ಗಾತ್ರ

ತಿ.ನರಸೀಪುರ: ‘ಪ್ರಾಥಮಿಕ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯ ಅಡಿಪಾಯ ಹಾಕಿದಾಗ ಮಾತ್ರ ಎಸ್‌ಎಸ್ಎಲ್‌ಸಿಯಲ್ಲಿ ಉತ್ತಮ ಗುಣಮಟ್ಟದ ಫಲಿತಾಂಶ ಪಡೆಯಲು ಸಾಧ್ಯ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಶೋಭಾ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಗುರುವಾರ ನಡೆದ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಭೆಯ ವೇಳೆ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ತಿ. ನರಸೀಪುರ ತಾಲ್ಲೂಕು ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಶಿಕ್ಷಣದ ಗುಣಮಟ್ಟ ಕಾಪಾಡಲು ಪ್ರಾಥಮಿಕ ಶಾಲೆಗಳಲ್ಲಿ ಭದ್ರ ಅಡಿಪಾಯ ಅಗತ್ಯ. ಪ್ರಾಥಮಿಕ ಶಾಲಾ ಶಿಕ್ಷಕರು ಶ್ರಮ ವಹಿಸಿ ಕಲಿಸಿದಾಗ ಅದರ ಫಲ ಫಲಿತಾಂಶದಲ್ಲಿ ಸಿಗುತ್ತಿದೆ. ಈ ಬಾರಿ ಜಿಲ್ಲೆಯಲ್ಲಿ ತಿ.ನರಸೀಪುರ ತಾಲ್ಲೂಕು ಶೇ 93.3 ರಷ್ಟು ಫಲಿತಾಂಶ ಪಡೆಯಲು ಪ್ರಾಥಮಿಕ ಶಾಲಾ ಶಿಕ್ಷಕರು ಸೇರಿದಂತೆ ಇಲಾಖೆಯ ಅಧಿಕಾರಿಗಳು, ಪ್ರೌಢಶಾಲಾ ಮುಖ್ಯ ಶಿಕ್ಷಕರು, ವಿಷಯ ಶಿಕ್ಷಕರು ಹಾಗೂ ಪೋಷಕರ ಸಹಕಾರ ಕಾರಣವಾಗಿದೆ. ಇದಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಫಲಿತಾಂಶ ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಮತ್ತಷ್ಟು ವಿಧಾನಗಳ ಮೂಲಕ ಫಲಿತಾಂಶದ ಪ್ರಮಾಣ ಹೆಚ್ಚಿಸಿಕೊಳ್ಳಲು ಶ್ರಮಿಸಬೇಕಿದೆ’ ಎಂದು ತಿಳಿಸಿದರು.

‘2024- 25ನೇ ಸಾಲಿನ ಶೈಕ್ಷಣಿಕ ವರ್ಷ ಮೇ 29ರಿಂದ ಪ್ರಾರಂಭಗೊಳ್ಳಲಿದ್ದು, ಶಾಲೆಯ ಪ್ರಾರಂಭೋತ್ಸವಕ್ಕೂ ಮುನ್ನ ಶಾಲಾ ಸ್ವಚ್ಛತೆ ಸೇರಿದಂತೆ ಎಲ್ಲಾ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಕಲಿಕಾ ಚಟುವಟಿಕೆಗಳ ಜತೆ ಶೈಕ್ಷಣಿಕ ಭಾಗದ ಇನ್ನಿತರ ಚಟುವಟಿಕೆಗಳಿಗೂ, ಮಕ್ಕಳನ್ನು ವಿವಿಧ ಹಂತದ ಪರೀಕ್ಷೆಗಳನ್ನು ಬರೆಯಲು ಪ್ರೇರೇಪಿಸಲು ಕ್ರಮವಹಿಸಬೇಕು’ ಎಂದು ಅವರು ಸಲಹೆ ನೀಡಿದರು.

ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ನಾಗೇಶ್, ಸಹಾಯಕ ನಿರ್ದೇಶಕ ಮದ್ದಾನಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಡಿ.ಮಾದಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ನೌಕರರ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ, ಶಿಕ್ಷಕರ ಸಂಘದ ಕಾರ್ಯದರ್ಶಿ ಕುಪ್ಯ ಪುಟ್ಟಸ್ವಾಮಿ, ಉಪಾಧ್ಯಕ್ಷ ಟಿ.ಎನ್.ನಾಗೇಂದ್ರ, ಬಿಆರ್‌ಪಿಗಳಾದ ಕೆ.ಪಿ.ಮಹದೇವಸ್ವಾಮಿ, ಸಿರಿದೇವಿ, ಮೇರಿ ಶೈಲಶ್ರೀ, ದೈಹಿಕ ಶಿಕ್ಷಣ ಪರಿವೀಕ್ಷಕ ಮರಿಸ್ವಾಮಿ, ಬಿಐಆರ್‌ಟಿ ವೆಂಕಟೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT