ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ಜಿಲ್ಲೆಯ ಮೊದಲ ಸೈನಿಕ ಶಾಲೆ ಸರಗೂರಲ್ಲಿ

Last Updated 1 ಸೆಪ್ಟೆಂಬರ್ 2022, 11:10 IST
ಅಕ್ಷರ ಗಾತ್ರ

ಮೈಸೂರು: ‘ಸರಗೂರಿನಲ್ಲಿರುವ ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ (ವಿಎಸ್‌ಒಇ) ಸೈನಿಕ ಶಾಲೆಯ ಉದ್ಘಾಟನಾ ಸಮಾರಂಭ ಸೆ.3ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ’ ಎಂದು ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್ (ಎಸ್‌ವಿವೈಎಂ) ಶಿಕ್ಷಣ ವಿಭಾಗದ ಮುಖ್ಯಸ್ಥ ‍‍ಪ್ರವೀನ್‌ಕುಮಾರ್‌ ಎಸ್. ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಉದ್ಘಾಟಿಸಲಿದ್ದಾರೆ. ಹೈದರಾಬಾದ್‌ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಬೋಧಮಯಾನಂದ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ, ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್‌ ಜಿ.ಕಣ್ಣನ್ ಭಾಗವಹಿಸಲಿದ್ದಾರೆ. ವಿವೈಎಸ್‌ಎಂ ಉಪಾಧ್ಯಕ್ಷ ಡಾ.ಸುಧೀರ್ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಎಸ್‌ವಿವೈಎಂ ಘಟಕವಾದ ವಿಎಸ್‌ಒಇ ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ 2002ರಲ್ಲಿ ಪ್ರಾರಂಭವಾಗಿದೆ. 567 ವಿದ್ಯಾರ್ಥಿಗಳು ಓದುತ್ತಿದ್ದಾರೆ’ ಎಂದು ಹೇಳಿದರು.

‘ಈಗ, ರಕ್ಷಣಾ ಸಚಿವಾಲಯದ ಸೈನಿಕ್ ಸ್ಕೂಲ್ ಸೊಸೈಟಿ (ಎಸ್‌ಎಸ್‌ಎಸ್‌)ಯು ಸೈನಿಕ ಶಾಲೆಗೆ ಅನುಮೋದನೆ ನೀಡಿದೆ. ಇದು ಕರ್ನಾಟಕದ 4ನೇಯದಾಗಿದೆ (ವಿಜಯಪುರ, ಕೊಡಗು ಹಾಗೂ ಸಂಗೊಳ್ಳಿ). ಮೈಸೂರು ಜಿಲ್ಲೆಯ ಮೊದಲ ಹಾಗೂ ಎನ್‌ಜಿಒದಿಂದ ನಡೆಸಲಾಗುವ ರಾಜ್ಯದ ಏಕೈಕ ಸೈನಿಕ ಶಾಲೆಯೂ ಇದಾಗಿದೆ. ವಸತಿ ಸೌಲಭ್ಯವನ್ನೂ ಒದಗಿಸಲಾಗುತ್ತದೆ’ ಎಂದು ವಿವರಿಸಿದರು.

‘2022–23ನೇ ಶೈಕ್ಷಣಿಕ ವರ್ಷಕ್ಕೆ 60 ವಿದ್ಯಾರ್ಥಿಗಳಿಗೆ ಸೈನಿಕ ಶಾಲೆಯ ಅಡಿಯಲ್ಲಿ 6ನೇ ತರಗತಿಗೆ ಪ್ರವೇಶ ನೀಡಲಾಗುವುದು. ಇವುಗಳಲ್ಲಿ ಶೇ. 40ರಷ್ಟು ಸೀಟುಗಳಿಗೆ ಪ್ರವೇಶವು ಅಖಿಲ ಭಾರತ ಕೋಟವಾಗಿದ್ದು, ಎಐಎಸ್‌ಎಸ್‌ಇ ಮೂಲಕ ನಡೆಯುತ್ತದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಮತ್ತು ಹರಿಯಾಣ ರಾಜ್ಯಗಳಿಂದ ಈವರೆಗೆ 11 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2ನೇ ಸುತ್ತಿನ ಕೌನ್ಸೆಲಿಂಗ್ ಪ್ರಗತಿಯಲ್ಲಿದೆ. ಉಳಿದ 36 ಸೀಟುಗಳು ವಿವೇಕಾನಂದ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ವಿದ್ಯಾರ್ಥಿಗಳಿಗೆ ಮೀಸಲಾಗಿವೆ. ಸೆ. 6ರಂದು ಲಿಖಿತ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘2022–23ನೇ ಸಾಲಿಗೆ ಬೋಧನಾ ಶುಲ್ಕ ₹ 45ಸಾವಿರ ಹಾಗೂ ಹಾಸ್ಟೆಲ್‌ಗೆ ₹ 36ಸಾವಿರ ನಿಗದಿಪಡಿಸಲಾಗಿದೆ’ ಎಂದರು.

ಎಸ್‌ವಿವೈಎಂ ನಿರ್ದೇಶಕ, ನಿವೃತ್ತ ಏರ್‌ ಕಮೋಡರ್ ಆರ್.ಎನ್.ಜಯಸಿಂಹ ಮಾತನಾಡಿ, ‘ಸೈನ್ಯಕ್ಕೆ ಸೇರುವಂತೆ ಪ್ರೋತ್ಸಾಹಿಸುವುದು ಶಾಲೆಯ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಿಶೇಷ ತರಬೇತಿ ಕೊಡಲಾಗುತ್ತದೆ. ಎನ್‌ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ನಡೆಸುವ ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತದೆ’ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 9591945162 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT