ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಥೆನಾಲ್‌ ಉತ್ಪಾದನೆಗೆ ನೀತಿ ರೂಪಿಸಿ: ಗಡ್ಕರಿ ಸಲಹೆ

Published 10 ಮಾರ್ಚ್ 2024, 15:42 IST
Last Updated 10 ಮಾರ್ಚ್ 2024, 15:42 IST
ಅಕ್ಷರ ಗಾತ್ರ

ಮೈಸೂರು: ‘ಕರ್ನಾಟಕದಲ್ಲಿ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಅದರಿಂದ ಜೈವಿಕ ಎಥೆನಾಲ್ ಉತ್ಪಾದನೆ ಹೆಚ್ಚಿಸಲು ರಾಜ್ಯ ಸರ್ಕಾರ ನೀತಿ ರೂಪಿಸಬೇಕು. ಅದಕ್ಕೆ ಕೇಂದ್ರ ಅಗತ್ಯ ನೆರವಾಗಲಿದೆ’ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ನಿತಿನ್ ಗಡ್ಕರಿ ಭರವಸೆ ನೀಡಿದರು.

ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಾಜ್ಯದ ವಿವಿಧ ಜಿಲ್ಲೆಗಳ ವ್ಯಾಪ್ತಿಯ ₹4ಸಾವಿರ ಕೋಟಿ ವೆಚ್ಚದ 22 ಹೆದ್ದಾರಿ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಇಂಧನ ಸ್ವಾವಲಂಬನೆ ಪ್ರಮುಖವಾಗಿದೆ. ಶೇ 100ರಷ್ಟು ಎಥೆನಾಲ್‌ನಿಂದ ಚಲಿಸಬಲ್ಲ ವಾಹನಗಳು ನಮ್ಮಲ್ಲಿ ಲಭ್ಯವಿವೆ. ಪ್ರಮುಖ ಕಂಪನಿಗಳು ಸಂಪೂರ್ಣ ಜೈವಿಕ ಎಥೆನಾಲ್‌ನಿಂದ ಓಡಬಲ್ಲ ವಾಹನಗಳ ಉತ್ಪಾದನೆ ಆರಂಭಿಸುತ್ತಿವೆ. ಸದ್ಯದಲ್ಲೇ ದೇಶದಲ್ಲಿ 400 ಎಥೆನಾಲ್ ಬಂಕ್‌ಗಳನ್ನು ತೆರೆಯಲಾಗುತ್ತಿದೆ. ಇದಕ್ಕೆ ಪೂರಕವಾಗಿ ಉತ್ಪಾದನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ’ ಎಂದರು.

‘ಪಂಜಾಬ್‌–ಹರಿಯಾಣದಲ್ಲಿ ಕೃಷಿ ಉತ್ಪನ್ನದಿಂದ ಬಿಟುಮಿನ್‌ ಉತ್ಪಾದನೆ ಕಾರ್ಯ ನಡೆದಿದೆ. ಪಾಣಿಪತ್‌ನಲ್ಲಿ 78ಸಾವಿರ ಟನ್‌ನಷ್ಟು ವಿಮಾನಗಳಿಗೆ ಬಳಸಬಲ್ಲ ಜೈವಿಕ ಇಂಧನ (ಬಯೋ ಏವಿಯೇಷನ್‌ ಫ್ಯುಯೆಲ್‌) ಉತ್ಪಾದನೆ ನಡೆದಿದೆ. ರೈತರು ಕೇವಲ ಅನ್ನದಾತರಾಗದೇ ಇಂಧನದಾತರೂ ಆಗುವ ಕಾಲ ಬಂದಿದೆ’ ಎಂದು ತಿಳಿಸಿದರು.

‘ಈ ವರ್ಷಾಂತ್ಯಕ್ಕೆ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ ಮೂಲ ಸೌಕರ್ಯವು ಅಮೆರಿಕಾದ ಹೆದ್ದಾರಿಗಳ ಸೌಕರ್ಯಕ್ಕೆ ಸಮನಾಗಲಿದೆ. ಪ್ರಸ್ತುತ ಕರ್ನಾಟಕದಲ್ಲಿ 8200 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದ್ದು, 151 ಯೋಜನೆಗಳು ಪೂರ್ಣಗೊಂಡಿವೆ. ಈ ವರ್ಷಾಂತ್ಯಕ್ಕೆ ರಾಜ್ಯದಲ್ಲಿ ₹3 ಲಕ್ಷ ಕೋಟಿ ಮೊತ್ತದ ಹೆದ್ದಾರಿ ಕಾಮಗಾರಿಗಳು ನಡೆಯಲಿದ್ದು, ಇದರಿಂದ ಕರ್ನಾಟಕದ ಚಿತ್ರಣವೇ ಬದಲಾಗಲಿದೆ’ ಎಂದು ವಿವರಿಸಿದರು.

‘ಮೈಸೂರು ಪೆರಿಫೆರಲ್‌ ರಿಂಗ್‌ ರಸ್ತೆ ಹಾಗೂ ಹಾಸನಕ್ಕೆ ರಿಂಗ್‌ ರಸ್ತೆ ನಿರ್ಮಾಣಕ್ಕೆ ಮನವಿ ಬಂದಿದ್ದು, ಈ ಯೋಜನೆಗಳಿಗೆ ಅವಶ್ಯವಾದ ಭೂಸ್ವಾಧೀನದ ಶೇ 50ರಷ್ಟನ್ನು ಭರಿಸಲು ಒಪ್ಪಿ ರಾಜ್ಯ ಸರ್ಕಾರ ಪತ್ರ ಬರೆದಲ್ಲಿ ಎರಡೂ ಯೋಜನೆಗಳಿಗೆ ಮಂಜೂರಾತಿ ನೀಡಲಾಗುವುದು’ ಎಂದು ತಿಳಿಸಿದರು.

‘ಮೈಸೂರು–ಕುಶಾಲನಗರ ಚತುಷ್ಪಥ ರಸ್ತೆ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಕುಶಾಲನಗರರಿಂದ ಮಾಣಿ ನಡುವಣ 130 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೆ ಡಿಪಿಆರ್ ಸಲ್ಲಿಸುವಂತೆ ಆದೇಶ ನೀಡಲಾಗುವುದು. ಮೈಸೂರು– ನಂಜನಗೂಡು ನಡುವೆ ಆರು ಪಥದ ರಸ್ತೆ ನಿರ್ಮಾಣಕ್ಕೂ ಡಿಪಿಆರ್ ಸಲ್ಲಿಸಲು ಸೂಚಿಸಲಾಗುವುದು' ಎಂದರು.

‘ಬೆಂಗಳೂರು–ಮೈಸೂರು ಹೆದ್ದಾರಿಯ ಪ್ರಮುಖ ಗ್ರಾಮಗಳಿಗೆ ಅಂಡರ್‌ಪಾಸ್‌ ನಿರ್ಮಿಸಲಾಗುವುದು. ಪ್ರವೇಶ–ನಿರ್ಗಮನ ದ್ವಾರ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ತುಮಕೂರು–ಶಿವಮೊಗ್ಗ ಹೆದ್ದಾರಿ ಕಾಮಗಾರಿಯು ಶೇ 80ರಷ್ಟು ಪೂರ್ಣಗೊಂಡಿದ್ದು, ಈ ಭಾಗದ ಕೈಗಾರಿಕೆಗಳ ಬೆಳವಣಿಗೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸ ರಸ್ತೆ:

‘ಹಾಸನ–ಹುಲಿಯೂರು–ಹಿರಿಯೂರು ನಡುವೆ ₹4,500 ಕೋಟಿ ವೆಚ್ಚದಲ್ಲಿ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಇದರಿಂದ ಈ ನಗರಗಳ ನಡುವಣ ಪ್ರಯಾಣದ ಅವಧಿ ಮೂರೂವರೆ ಗಂಟೆಯಷ್ಟು ಕಡಿಮೆ ಆಗಲಿದೆ. ಇದರ ಮೊದಲ ಹಂತದ ಕಾಮಗಾರಿಗೆ ರಾಜ್ಯ ಸರ್ಕಾರದ ಅರಣ್ಯ ಇಲಾಖೆಯು ಪರಿಸರ ಅನುಮತಿ ನೀಡುವುದು ಬಾಕಿ ಇದ್ದು, ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

‘ಮೈಸೂರಿನಿಂದ ಕೇರಳದ ಮಲಪ್ಪುರಂಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯು ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲಕ ಹಾದುಹೋಗಿದೆ. ಇಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ ಇರುವ ಕಾರಣ ಸಂಚಾರ ಅಡಚಣೆ ತಪ್ಪಿಸಲು ಬೆಂಗಳೂರು–ಮಲಪ್ಪುರಂ ನಡುವೆ ₹2,500 ಕೋಟಿ ವೆಚ್ಚದಲ್ಲಿ ಹೊಸ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ’ ಎಂದರು.

ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ

ಕರ್ನಾಟಕದಲ್ಲಿ ಒಟ್ಟು ₹5ಸಾವಿರ ಕೋಟಿ ವೆಚ್ಚದಲ್ಲಿ 16 ರೋಪ್‌ವೇ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಅಂಜನಾದ್ರಿ ದೇವನದುರ್ಗ ಮಧುಗಿರಿ ಜೊತೆಗೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ₹114 ಕೋಟಿ ವೆಚ್ಚದಲ್ಲಿ 1.4 ಕಿ.ಮೀ. ಉದ್ದದ ರೋಪ್ ನಿರ್ಮಾಣಕ್ಕೆ ಚಿಂತಿಸಲಾಗಿದೆ ಎಂದರು.

ಗ್ರೀನ್‌ಫೀಲ್ಡ್‌ ಹೆದ್ದಾರಿ

‘ದೇಶದಲ್ಲಿ ₹5.5 ಲಕ್ಷ ಕೋಟಿ ವೆಚ್ಚದಲ್ಲಿ 10 ಸಾವಿರ ಕಿ.ಮೀ. ಉದ್ದದ 27 ಗ್ರೀನ್‌ಫೀಲ್ಡ್‌ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದ್ದು ಇದರಲ್ಲಿ ಕರ್ನಾಟಕದಲ್ಲಿ ₹45 ಸಾವಿರ ಕೋಟಿ ವೆಚ್ಚದಲ್ಲಿ 607 ಕಿ.ಮೀ. ಉದ್ದದ 4 ಹೊಸ ಹೆದ್ದಾರಿ ಕಾಮಗಾರಿಗಳು ನಡೆಯಲಿವೆ. ಬೆಂಗಳೂರು–ಚೆನ್ನೈ ನಡುವೆ ₹20 ಸಾವಿರ ಕೋಟಿ ವೆಚ್ಚದಲ್ಲಿ 264 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಮುಂದಿನ ಜನವರಿಗೂ ಮುನ್ನವೇ ಚಾಲನೆ ನೀಡಲಾಗುವುದು’ ಎಂದು ಗಡ್ಕರಿ ತಿಳಿಸಿದರು. ‘282 ಕಿ.ಮೀ. ಉದ್ದದ ಬೆಂಗಳೂರು ಸ್ಯಾಟಲೈಟ್ ಟೌನ್‌ ರಿಂಗ್ ರಸ್ತೆ ಕಾಮಗಾರಿಯು ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು ಇದರಿಂದ ರಾಜಧಾನಿಯ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT