ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳು ಕೊಂಪೆಯಾದ ಜೆ.ಕೆ. ಕ್ರೀಡಾಂಗಣ

ಹಾಳಾದ ಬ್ಯಾಸ್ಕೆಟ್‌ಬಾಲ್‌ ಅಂಕಣಗಳು; ಎಲ್ಲೆಲ್ಲೂ ಕಸದ ರಾಶಿ
Published 12 ಜನವರಿ 2024, 7:27 IST
Last Updated 12 ಜನವರಿ 2024, 7:27 IST
ಅಕ್ಷರ ಗಾತ್ರ

ಮೈಸೂರು: ಮುರಿದು ಬಿದ್ದ ಬ್ಯಾಸ್ಕೆಟ್‌ಬಾಲ್‌ ಕಂಬಗಳು, ಅಂಕಣದ ಒಳಗೇ ಕಲ್ಲಿನ ರಾಶಿ, ಸುತ್ತಲೂ ಗಿಡಗಂಟಿ, ಕಸದ ರಾಶಿ, ಆಗಾಗ್ಗೆ ಮೈದಾನಕ್ಕೆ ಹರಿಯುವ ಚರಂಡಿ ನೀರು...

ಇದು ನಗರದ ಹೃದಯ ಭಾಗದಲ್ಲಿ, ರೈಲು ನಿಲ್ದಾಣದ ಸಮೀಪ ಇರುವ ಜೀವಣ್ಣರಾಯನ ಕಟ್ಟೆ ಅರ್ಥಾತ್ ಜೆ.ಕೆ. ಮೈದಾನದ ದುಃಸ್ಥಿತಿ. ಒಂದೊಮ್ಮೆ ಕ್ರೀಡಾ ಚಟುವಟಿಕೆಗಳ ಕೇಂದ್ರವಾಗಿದ್ದ ಈ ಮೈದಾನ ಇದೀಗ ಪಾಳು ಕೊಂಪೆಯಾಗಿದ್ದು, ಕ್ರೀಡಾಪಟುಗಳು ಒಳಗೆ ಕಾಲಿಡಲು ಹೆದರುವಂತಹ ಪರಿಸ್ಥಿತಿ ಇದೆ. ಎಷ್ಟೆಲ್ಲ ಸೌಲಭ್ಯಗಳು ಮಣ್ಣು ಪಾಲಾಗಿದ್ದು, ವೈದ್ಯಕೀಯ ವಿದ್ಯಾರ್ಥಿಗಳೂ ಸೇರಿದಂತೆ ಯಾರೊಬ್ಬರ ಅಭ್ಯಾಸಕ್ಕೂ ಉಪಯೋಗವಾಗುತ್ತಿಲ್ಲ.

ನಗರದ ಒಳಗಿನ ಬೆರಳೆಣಿಕೆಯ ಕ್ರೀಡಾಂಗಣಗಳಲ್ಲಿ ಜೆ.ಕೆ. ಮೈದಾನ ಸಹ ಒಂದು. ಇಲ್ಲಿ ಮೂರು ಬ್ಯಾಸ್ಕೆಟ್‌ಬಾಲ್‌ ಅಂಕಣಗಳಿವೆ. 1987ರಲ್ಲಿ ಇಲ್ಲಿ ರಾಷ್ಟ್ರೀಯ ಸಬ್‌ ಜೂನಿಯರ್‌ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ ನಡೆದಿತ್ತು. ಕ್ರೀಡಾಕೂಟಕ್ಕೆಂದು ಜಿಲ್ಲಾ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆಯಿಂದ ಈ ಮೂರು ಬ್ಯಾಸ್ಕೆಟ್‌ಬಾಲ್‌ ಅಂಕಣಗಳನ್ನು ನಿರ್ಮಾಣ ಮಾಡಲಾಗಿತ್ತು. ಕೆಲವು ಕಾಲ ಉತ್ತಮವಾಗಿ ಟೂರ್ನಿಗಳು ನಡೆದವು. ಆದರೆ, ಕಾಲಕ್ರಮೇಣ ಇವುಗಳ ಬಳಕೆ ನಿಂತಿದ್ದು, ಇದೀಗ ಮೂರು ಅಂಕಣಗಳೂ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿವೆ. ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿರುವ ಮೈಸೂರು ಮೆಡಿಕಲ್‌ ಕಾಲೇಜು ತನ್ನ ಕ್ರೀಡಾಂಗಣ ಅಭಿವೃದ್ಧಿಗೆ ಮಾತ್ರ ಗಮನ ಹರಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.

ಸದ್ಯ ಕ್ರೀಡಾಂಗಣವನ್ನು ಮೈಸೂರು ಮೆಡಿಕಲ್‌ ಕಾಲೇಜು ಆಡಳಿತ ಮಂಡಳಿಯು ನಿರ್ವಹಿಸುತ್ತಿದೆ. ಕ್ರೀಡಾಂಗಣದ ಒಂದು ಭಾಗವನ್ನು ಮಾತ್ರ ಖಾಸಗಿ ಸಂಸ್ಥೆಗಳು ಬಳಕೆ ಮಾಡಿಕೊಳ್ಳುತ್ತಿದ್ದು, ನೆಟ್ಸ್‌ನಲ್ಲಿ ಕ್ರೀಡಾಪಟುಗಳು ಅಭ್ಯಾಸ ನಡೆಸುತ್ತಿದ್ದಾರೆ. ಉಳಿದ ಭಾಗವೆಲ್ಲ ಪಾಳು ಬಿದ್ದಿದೆ. ಕ್ರೀಡಾಕೂಟಕ್ಕೆ ಬದಲಾಗಿ ಕೇವಲ ಉತ್ಸವಗಳು, ಖಾಸಗಿ ಕಂಪನಿಗಳ ಕಾರ್ಯಕ್ರಮಗಳಿಗೆ ಮೈದಾನವನ್ನು ಬಾಡಿಗೆ ನೀಡಲಾಗುತ್ತಿದೆ. ಜೊತೆಗೆ, ಸುತ್ತಲಿನ ಕಟ್ಟಡ ತ್ಯಾಜ್ಯ ಸೇರಿದಂತೆ ಕಸದ ರಾಶಿಯನ್ನು ತಂದು ಸುರಿಯಲಾಗುತ್ತಿದೆ. ಮೈದಾನದ ಒಳಗೇ ಚರಂಡಿ ನೀರು ಸಹ ಹರಿದಿದೆ.

ಹಿಂದೊಮ್ಮೆ, ಇದೇ ಮೈದಾನವನ್ನು ನಗರ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ, ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳು ಹಾಗೂ ಕ್ರೀಡಾಸಕ್ತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಅಲ್ಲಿಗೇ ಕೈಬಿಡಲಾಯಿತು. ನಂತರದಲ್ಲಿ ಇಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣದ ಪ್ರಯತ್ನಗಳು ನಡೆದಿವೆಯಾದರೂ ಎಲ್ಲವೂ ಕಾಗದ ರೂಪದಲ್ಲಿಯೇ ಉಳಿದುಹೋಗಿವೆ. ಮೆಡಿಕಲ್‌ ಕಾಲೇಜು ಹೆಸರಿಗೆ ಮೈದಾನದ ಖಾತೆ ಮಾಡಿಕೊಡಲು ಈ ಹಿಂದೆ ಪಾಲಿಕೆ ಹಾಗೂ ಕಾಲೇಜು ನಡುವೆ ಹಗ್ಗಜಗ್ಗಾಟವೂ ನಡೆದಿತ್ತು.

ಮೈಸೂರಿನ ಜೆ.ಕೆ. ಮೈದಾನದ ಬ್ಯಾಸ್ಕೆಟ್‌ಬಾಲ್‌ ಅಂಕಣದ ದುಃಸ್ಥಿತಿ –ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.
ಮೈಸೂರಿನ ಜೆ.ಕೆ. ಮೈದಾನದ ಬ್ಯಾಸ್ಕೆಟ್‌ಬಾಲ್‌ ಅಂಕಣದ ದುಃಸ್ಥಿತಿ –ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.

- ‘ಯೋಜನೆ ರೂಪಿಸುತ್ತೇವೆ’

ಈ ಕುರಿತು ಮೈಸೂರು ಮೆಡಿಕಲ್ ಕಾಲೇಜು ಡೀನ್ ಡಾ. ದಾಕ್ಷಾಯಿಣಿ ಪ್ರತಿಕ್ರಿಯಿಸಿ ‘ಮೆಡಿಕಲ್ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘವು ಮೈದಾನದಲ್ಲಿ ಭವನ ನಿರ್ಮಿಸಿದ್ದು ಸದ್ಯ ಕ್ರೀಡಾಂಗಣವನ್ನೂ ನಿರ್ವಹಣೆ ಮಾಡುತ್ತಿದೆ. ಕ್ರೀಡಾಂಗಣ ನಿರ್ಮಾಣ ಸಂಬಂಧ ಈ ಹಿಂದೆ ಹಲವು ಪ್ರಸ್ತಾವಗಳಿದ್ದವು. ಆದರೆ ಮೈದಾನ ಹಳ್ಳದಲ್ಲಿದ್ದು ಒಳಾಂಗಣ ಕ್ರೀಡಾಂಗಣ ಸೇರಿದಂತೆ ಯಾವುದೇ ಕಟ್ಟಡ ನಿರ್ಮಿಸಬೇಕಾದರೂ ಹೆಚ್ಚು ವೆಚ್ಚವಾಗುತ್ತದೆ ಎಂಬ ಕಾರಣಕ್ಕೆ ಕೈಬಿಡಲಾಗಿತ್ತು. ಶತಮಾನೋತ್ಸವ ಹಿನ್ನೆಲೆಯಲ್ಲಿ ಕಾಲೇಜು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಿದ್ದು ಅದರಲ್ಲಿ ಜೆ.ಕೆ. ಮೈದಾನದ ಅಭಿವೃದ್ಧಿಗೂ ಯೋಜನೆ ರೂಪಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT