ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಕಾವ್ಯ: ಅಮ್ಮನಗುಡ್ಡಕ್ಕೆ ಮಹತ್ವದ ಸ್ಥಾನ: ವಿಮರ್ಶಕ ಪ್ರೊ.ಬಸವರಾಜ ಕಲ್ಗುಡಿ

‘ಅಮ್ಮನಗುಡ್ಡ– ಅಂತರಾಳ’ ಕೃತಿ ಬಿಡುಗಡೆ: ವಿಮರ್ಶಕ ಪ್ರೊ.ಬಸವರಾಜ ಕಲ್ಗುಡಿ ಅಭಿಮತ
Published 22 ಮಾರ್ಚ್ 2024, 5:13 IST
Last Updated 22 ಮಾರ್ಚ್ 2024, 5:13 IST
ಅಕ್ಷರ ಗಾತ್ರ

ಮೈಸೂರು: ‘ಪಿ.ಲಂಕೇಶ್‌ ಅವರ ಸಂಪಾದಿತ ಕೃತಿ ‘ಅಕ್ಷರ ಹೊಸ ಕಾವ್ಯ’ದಲ್ಲಿ ಚ.ಸರ್ವಮಂಗಳಾ ಅವರ ಅಮ್ಮನಗುಡ್ಡ ಕವಿತೆಗೆ ಮಹತ್ವದ ಸ್ಥಾನವಿದೆ. ಅದರಿಂದ ನಾಡಿನ ಪ್ರಮುಖ ಕವಯತ್ರಿಯಾಗಿ ಗುರುತಿಸಿಕೊಂಡರು’ ಎಂದು ವಿಮರ್ಶಕ ಪ್ರೊ.ಬಸವರಾಜ ಕಲ್ಗುಡಿ ಹೇಳಿದರು.

ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ‘ಕನ್ನಡ ಲೇಖಕಿಯರ ಟ್ರಸ್ಟ್’ ಗುರುವಾರ ಆಯೋಜಿಸಿದ್ದ  ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಚ.ಸರ್ವಮಂಗಳಾ ಅವರ ‘ಅಮ್ಮನಗುಡ್ಡ– ಅಂತರಾಳ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬಾಲ್ಯದ ಭಯ–ದಿಗಿಲುಗಳ ಮುಗ್ಧ ಪ್ರಪಂಚ ಹಾಗೂ ಬೆಳೆದ ಬುದ್ಧಿಜನ್ಯ ಅನುಭವ ಪ್ರಪಂಚ ಇವುಗಳನ್ನು ಜೊತೆಯಾಗಿ ಕವಿತೆಯು ದಾಖಲಿಸುತ್ತಲೇ, ನಾಗರಿಕತೆ ಬೆಳೆಯುವಾಗ ಆ ರಮ್ಯ ಅನುಭವ ಕಳೆದುಹೋಗುತ್ತದೆ ಎಂಬ ದಟ್ಟವಾದ ಸತ್ಯವನ್ನು ಕಟ್ಟುತ್ತದೆ. ಹೀಗಾಗಿಯೇ ಅವರ ಕವಿತೆ ಹೆಸರು ಮಾಡಿತ್ತು’ ಎಂದರು.

‘ಕಥೆಗಾರ ಮೊಗಳ್ಳಿ ಗಣೇಶ್‌ ಅವರು ನಡೆಸಿದ್ದ ಸಂದರ್ಶನದಲ್ಲಿ ‘ಹೆಣ್ಣಿಗೆ ಅವಳ ದೇಹವೇ ದೊಡ್ಡ ತಡೆ. ಹೆಣ್ಣನ್ನು ಮಾನದ ಮಡಿಕೆಯಲ್ಲಿ ಬಂಧಿಸುವಂತಹ ಕ್ರೂರತೆ ಬೇರೆ ಯಾವುದಿದೆಯೆಂದು ಸರ್ವಮಂಗಳಾ ಪ್ರಶ್ನಿಸಿದ್ದರು. ನೇರ, ದಿಟ್ಟವಾಗಿ  ಮಾತನಾಡುತ್ತಿದ್ದರು’ ಎಂದು ತಿಳಿಸಿದರು.

‘ಮಹಾರಾಜ ಕಾಲೇಜಿನಲ್ಲಿ ಕನ್ನಡ ಪಾಠ ಮಾಡುತ್ತಾ ದಿಟ್ಟತನದ ಮಾತುಗಳಿಂದ ವಿದ್ಯಾರ್ಥಿಗಳ ಮನಸ್ಸನ್ನು ಆವರಿಸಿಕೊಂಡಿದ್ದರು. ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದರು’ ಎಂದರು.

ಪ್ರೊ.ಎಸ್.ಡಿ.ಶಶಿಕಲಾ ಕೃತಿ ಕುರಿತು ಮಾತನಾಡಿದರು. ಪ್ರೊ.ಎಚ್.ಎಂ.ಕಲಾಶ್ರೀ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪ್ರೊ.ಚ.ಸರ್ವಮಂಗಳಾ, ಕನ್ನಡ ಲೇಖಕಿಯರ ಟ್ರಸ್ಟ್ ಅಧ್ಯಕ್ಷೆ ಪದ್ಮಾಶೇಖರ್, ಕಾರ್ಯದರ್ಶಿ ಹೇಮಾ ನಂದೀಶ್, ಸಹ ಕಾರ್ಯದರ್ಶಿ ಮೀನಾ ಮೈಸೂರು, ಲೇಖಕ ಸತೀಶ್ ಜವರೇಗೌಡ, ರಂಗಕರ್ಮಿ ಚಂದ್ರ ಮಂಡ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT