ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗಿದ ಕೆರೆಕಟ್ಟೆ: ವನ್ಯಜೀವಿಗೆ ನೀರಿಲ್ಲ

ನಾಗರಹೊಳೆ ಅರಣ್ಯದ 360 ಕೆರೆ ಬರಿದಾಗುವ ಭೀತಿ; ಪ್ರಾಣಿಗಳಿಗೆ ತಟ್ಟಿದ ಬೇಸಿಗೆ ತಾಪ
Published 7 ಏಪ್ರಿಲ್ 2024, 5:56 IST
Last Updated 7 ಏಪ್ರಿಲ್ 2024, 5:56 IST
ಅಕ್ಷರ ಗಾತ್ರ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಈ ವರ್ಷ ಬೇಸಿಗೆ ತಾಪ ತಟ್ಟುತ್ತಿದೆ. ಅರಣ್ಯದಲ್ಲಿರುವ ಬಹುತೇಕ ಕೆರೆ–ಕಟ್ಟೆಗಳು ಬರಿದಾಗುತ್ತಿದ್ದು, ವನ್ಯಪ್ರಾಣಿಗಳಿಗೆ ನೀರಿನ ತತ್ವಾರ ಎದುರಾಗಿದೆ.

840 ಚದರ ಕಿ.ಮೀ. ವ್ಯಾಪ್ತಿ ಹೊಂದಿರುವ ಅರಣ್ಯ ಪ್ರದೇಶದಲ್ಲಿ 360 ಕೆರೆಗಳಿದ್ದು, ಈ ಪೈಕಿ ಶೇ 50ರಷ್ಟು ದೊಡ್ಡ ಕೆರೆಗಳು. ಅರಣ್ಯಕ್ಕೆ ಹೊಂದಿಕೊಂಡಂತೆ ಕಪಿಲಾ, ತಾರಕ ಮತ್ತು ಲಕ್ಷ್ಮಣತೀರ್ಥ ನದಿಗಳು ಹರಿಯುತ್ತವೆ. ಕಪಿಲಾ ಮತ್ತು ತಾರಕ ಅಣೆಕಟ್ಟೆಯ ಹಿನ್ನೀರು ವನ್ಯಜೀವಿಗಳಿಗೆ ವರವಾಗಿತ್ತು. ಆದರೆ, ಈ ಬಾರಿ ಹಿನ್ನೀರು ಗಣನೀಯವಾಗಿ ಕುಸಿತ ಕಂಡಿದೆ.

ನಾಗರಹೊಳೆಯ ವೀರನಹೊಸಹಳ್ಳಿ, ಮೇಟಿಕುಪ್ಪೆ, ಡಿ.ಬಿ.ಕುಪ್ಪೆ ಮತ್ತು ಅಂತರಸಂತೆ ವಲಯದ ಅರಣ್ಯದಂಚಿನಲ್ಲಿ 106 ಗ್ರಾಮಗಳಿದ್ದು, ನೀರಿಗಾಗಿ ಈ ಪ್ರದೇಶಕ್ಕೆ ಕಾಡುಪ್ರಾಣಿಗಳು ಲಗ್ಗೆ ಇಟ್ಟು ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಾಗುವ ಸಾಧ್ಯತೆ ಇದೆ.

‘ನಾಗರಹೊಳೆಯಲ್ಲಿ 1,500ರಿಂದ 1,600 ಆನೆಗಳು ಸೇರಿದಂತೆ ಇತರೆ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಅರಣ್ಯ ಇಲಾಖೆಯು ಸೌರಶಕ್ತಿ ಚಾಲಿತ ಪಂಪ್‌ಸೆಟ್ ಮೂಲಕ ಕೆರೆಗಳಿಗೆ ನೀರು ತುಂಬಿಸುತ್ತಿದೆ. 2024–25ನೇ ಸಾಲಿನಲ್ಲಿ 8 ಸೌರಶಕ್ತಿ ಚಾಲಿತ ಪಂಪ್‌ಸೆಟ್ ಅಳವಡಿಕೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಅನುದಾನದ ನಿರೀಕ್ಷೆಯಲ್ಲಿದ್ದೇವೆ’ ಎಂದು ಹುಲಿ ಯೋಜನಾ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಗರಹೊಳೆ ಅರಣ್ಯಕ್ಕೆ ವರವಾಗಿರುವ ಕಪಿಲಾ ಮತ್ತು ತಾರಕ ನದಿ ಅಣೆಕಟ್ಟೆಯ ನೀರನ್ನು ಬೇಸಿಗೆಯ ಬೆಳೆಗಳಿಗೆ ನೀಡುವುದರಿಂದ ಹಿನ್ನೀರು ಕಡಿಮೆಯಾಗಿದ್ದು, ಪ್ರಾಣಿಗಳು ವಲಸೆ ಹೋಗುತ್ತಿವೆ. ಹೀಗಾಗಿ, ನೀರನ್ನು ಕೃಷಿಗೆ ಬಳಸದೆ ಅರಣ್ಯ ಪ್ರಾಣಿಗಳಿಗೆ ಮೀಸಲಿಟ್ಟರೆ ನೀರಿನ ಕೊರತೆಯ ಒತ್ತಡ ತಗ್ಗಿಸಬಹುದು’ ಎಂದು ಹೇಳಿದರು.

‘ಅರಣ್ಯದೊಳಗೆ ಹರಿಯುವ ಸಾರಥಿ, ನಾಗರಹೊಳೆ ಮತ್ತು ಲಕ್ಷ್ಮಣತೀರ್ಥ ನದಿಯ ಜೋಗು ಪ್ರದೇಶದಲ್ಲಿ ಚೆಕ್ ಡ್ಯಾಂ ನಿರ್ಮಿಸಿ ಅಲ್ಲಲ್ಲಿ ನೀರು ಸಂಗ್ರಹ ಕಾರ್ಯ ನಡೆದಿದೆ. ಅಂತರಸಂತೆ ವಲಯದ ಹಳೆಕೆರೆ ಜೀರ್ಣೋದ್ಧಾರಗೊಂಡಿದ್ದು, ಟ್ಯಾಂಕ್‌ ಮೂಲಕ ನೀರು ತುಂಬಿಸಿದೆ. ಟೈಗರ್ ಟ್ಯಾಂಕ್, ಟೆಂಪಲ್ ಟ್ಯಾಂಕ್‌ಗಳಿಗೆ ಈ ಸಾಲಿನಲ್ಲಿ ಸೌರಶಕ್ತಿ ಚಾಲಿತ ಪಂಪ್‌ಸೆಟ್ ಅಳವಡಿಸಿದ್ದೇವೆ’ ಎಂದರು.

ನಾಗರಹೊಳೆಯಲ್ಲಿ ಬರಿದಾಗುತ್ತಿರುವ ದಯ್ಯದಕಟ್ಟೆ ಕೆರೆ
ನಾಗರಹೊಳೆಯಲ್ಲಿ ಬರಿದಾಗುತ್ತಿರುವ ದಯ್ಯದಕಟ್ಟೆ ಕೆರೆ
ಸುಭಾಷ್
ಸುಭಾಷ್
ಹರ್ಷಕುಮಾರ್ ಚಿಕ್ಕನರಗುಂದ
ಹರ್ಷಕುಮಾರ್ ಚಿಕ್ಕನರಗುಂದ

840 ಚದರ ಕಿ.ಮೀ. ವ್ಯಾಪ್ತಿ ಹೊಂದಿರುವ ಅರಣ್ಯ ಅರಣ್ಯದಂಚಿನಲ್ಲಿ 106 ಗ್ರಾಮ ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಾಗುವ ಸಾಧ್ಯತೆ

‘ನೀರಿನ ಬವಣೆ ನೀಗಿಸಲು ಕ್ರಮ’ ‘ಎಲೆ ಉದುರುವ ನಾಲ್ಕು ವಲಯದ ಅರಣ್ಯ ಪ್ರದೇಶದಲ್ಲಿ ಮೇಟಿಕುಪ್ಪೆ 27 ಅಂತರಸಂತೆ 24 ಡಿ.ಬಿ.ಕುಪ್ಪೆ 13 ಮತ್ತು ವೀರನಹೊಸಹಳ್ಳಿ 26 ಕೆರೆಗಳಿದ್ದು ಆಯ್ದ ಮಧ್ಯಮ ಮತ್ತು ದೊಡ್ಡಕೆರೆಗಳಿಗೆ 26ರಿಂದ 30 ಸೌರಶಕ್ತಿ ಚಾಲಿತ ಪಂಪ್‌ಸೆಟ್‌ ಅಳವಡಿಸಿ ನೀರಿನ ಬವಣೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹುಲಿ ಯೋಜನಾ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದರು.

‘ಫಸಲು ನಷ್ಟ ಜೀವಹಾನಿ ಆತಂಕ’ ‘ಅರಣ್ಯದಂಚಿನ ಮುದಗನೂರು ಕೆರೆ ಬಹುತೇಕ ಖಾಲಿಯಾಗಿದ್ದು ಗ್ರಾಮದ ಹೊಲ ತೋಟಗಳಿಗೆ ಕಾಡಾನೆ ದಾಳಿ ನಡೆಸುವುದು ಖಚಿತ. ರೈಲ್ವೆ ತಡೆಗೋಡೆ ಇದ್ದರೂ ಕಾಡಾನೆಗಳು ಸರಾಗವಾಗಿ ದಾಟುವುದರಿಂದ ಫಸಲು ನಷ್ಟ ಹಾಗೂ ಜೀವಹಾನಿ ಆತಂಕ ಕಾಡುತ್ತಿದೆ’ ಎಂದು ಮುದಗನೂರು ರೈತ ಸುಭಾಷ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT