ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಯದುವೀರಗೆ ಬಿಜೆಪಿ ಗಾಳ!

ಪ್ರತಾಪ ಜೊತೆ ಇನ್ನೊಂದು ಹೆಸರು ಶಿಫಾರಸು
Published 9 ಮಾರ್ಚ್ 2024, 14:27 IST
Last Updated 9 ಮಾರ್ಚ್ 2024, 14:27 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಕಣಿಕ್ಕಿಳಿಸುವ ಬಗ್ಗೆ ಬಿಜೆಪಿ ಯೋಜಿಸಿದ್ದು, ಅವರೊಂದಿಗೆ ಮಾತುಕತೆ ನಡೆಸಿದೆ’ ಎಂದು ತಿಳಿದುಬಂದಿದೆ.

ಹಾಲಿ ಸಂಸದ ಪ್ರತಾಪ ಸಿಂಹ ಅವರೊಂದಿಗೆ ಯದುವೀರರ ಹೆಸರನ್ನೂ ಶಿಫಾರಸು ಮಾಡಲಾಗಿದೆ. ಅವರ ತಾಯಿ ಪ್ರಮೋದಾದೇವಿ ಒಡೆಯರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಮ್ಮತಿಸಿದರೆ, ಅವರಿಗೇ ಟಿಕೆಟ್‌ ನೀಡಲು ಮುಖಂಡರು ಚಿಂತನೆ ನಡೆಸಿದ್ದಾರೆ. ಈ ಬೆಳವಣಿಗೆಯಿಂದ ಪ್ರತಾಪ ಸಿಂಹ ಅವರಿಗೆ ಟಿಕೆಟ್‌ ಕೈತಪ್ಪುವ ಭೀತಿ ಎದುರಾಗಿದೆ.

‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರ‍ಪ್ಪ ಮತ್ತು ಆರ್‌ಎಸ್‌ಎಸ್‌ ನಾಯಕರು ತಂತ್ರ ರೂಪಿಸಿದ್ದು, ಯದುವೀರರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅವರೊಂದಿಗೆ ಮಾತುಕತೆಯೂ ನಡೆದಿದ್ದು, ಮನವೊಲಿಸುವ ಪ್ರಯತ್ನ ನಡೆದಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ’ ಎಂದು ತಿಳಿದುಬಂದಿದೆ.

‘ಮೈಸೂರು ರಾಜವಂಶಸ್ಥರ ಕೊಡುಗೆಗಳನ್ನು ಜನ ಗೌರವದಿಂದ ಸ್ಮರಿಸುತ್ತಾರೆ. ಅದನ್ನು ರಾಜಕೀಯ ಲಾಭವನ್ನಾಗಿಸಿಕೊಳ್ಳುವುದು ನಾಯಕರ ಯೋಜನೆ. ಅವರು ಸ್ಪರ್ಧಿಸಿದರೆ ಮೈಸೂರು–ಕೊಡಗು ಕ್ಷೇತ್ರದೊಂದಿಗೆ ಚಾಮರಾಜನಗರ, ಮಂಡ್ಯ ಹಾಗೂ ಹಾಸನದಲ್ಲೂ ಪಕ್ಷಕ್ಕೆ ಅನುಕೂಲವಾಗಬಹುದೆಂಬುದು ಲೆಕ್ಕಾಚಾರ. ಯಡಿಯೂರಪ್ಪ ಅವರು ಹೈಕಮಾಂಡ್‌ ಮಟ್ಟದಲ್ಲೂ ಇದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ’ ಎಂದು ಹೇಳಲಾಗುತ್ತಿದೆ.

‘ಯದುವೀರ ಅವರಿಗೆ ಬಿಜೆಪಿ ಗಾಳ ಹಾಕಲು ಪ್ರಯತ್ನಿಸುತ್ತಿದೆ’ ಎಂಬ ವಿಷಯ ಹಿಂದಿನಿಂದಲೂ ಚರ್ಚೆಯಲ್ಲಿದೆ. ಆದರೆ, ಚುನಾವಣೆ ಘೋಷಣೆಯ ದಿನಗಳು ಸಮೀಪಿಸುತ್ತಿದ್ದಂತೆಯೇ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿಯವರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

‘ಯದುವೀರ ಅವರನ್ನು ಕಣಕ್ಕಿಳಿಸುವ ಬಗ್ಗೆ ಗಂಭೀರ ಚರ್ಚೆಯಾಗಿರುವುದು ನಿಜ. ಹಾಲಿ ಸಂಸದರ ಬಗ್ಗೆ ಸ್ಥಳೀಯ ನಾಯಕರಲ್ಲೇ ವಿರೋಧವಿದೆ. ಕೆಲವು ವಿವಾದಗಳಿಗೂ ಕಾರಣವಾಗಿದ್ದಾರೆ. ಕ್ಷೇತ್ರದ ನಾಯಕರೊಂದಿಗೆ ಸಮನ್ವಯ ಸಾಧಿಸುವಲ್ಲಿಯೂ ವಿಫಲವಾಗಿದ್ದಾರೆ. ಹೀಗಾಗಿ, ಬೇರೆಯವರ ಬಗ್ಗೆ ವರಿಷ್ಠರು ಪರಿಶೀಲಿಸುತ್ತಿದ್ದಾರೆ’ ಎಂದು ಪಕ್ಷದ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

‘ರಾಜವಂಶಸ್ಥ ಸ್ಪರ್ಧಿಸಿದರೆ ಹಳೆಯ ಮೈಸೂರು ಭಾಗದಲ್ಲಿ ಸಂಚಲನ ಉಂಟಾಗುತ್ತದೆ. ಜಾತ್ಯತೀತವಾಗಿ ಎಲ್ಲ ವರ್ಗದವರಿಂದಲೂ ಬೆಂಬಲ ದೊರೆಯುತ್ತದೆ. ಪಕ್ಷಕ್ಕೆ ಒಳ್ಳೆಯ ಇಮೇಜ್ ಸೃಷ್ಟಿಯಾಗುತ್ತದೆ ಎಂಬುದನ್ನು ವರಿಷ್ಠರು ಪರಿಗಣಿಸುತ್ತಿದ್ದಾರೆ’ ಎಂದರು.

ಪ್ರತಿಕ್ರಿಯೆಗೆ ಯದುವೀರ ಲಭ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT