ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ; ಎಸ್‌ಯುಸಿಐನಿಂದ ಸುನಿಲ್ ಕಣಕ್ಕೆ

Published 26 ಮಾರ್ಚ್ 2024, 20:31 IST
Last Updated 26 ಮಾರ್ಚ್ 2024, 20:31 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯದ 19 ಲೋಕಸಭಾ ಕ್ಷೇತ್ರಗಳಲ್ಲಿ ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ- ಕಮ್ಯುನಿಸ್ಟ್ (ಎಸ್‌ಯುಸಿಐ- ಸಿ) ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಟಿ.ಆರ್.ಸುನಿಲ್ ಕಣಕ್ಕಿಳಿಯುವರು’ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಬಿ.ರವಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿರುದ್ಯೋಗ ಮತ್ತು ಬೆಲೆಯೇರಿಕೆ ಸಮಸ್ಯೆ ನಿವಾರಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದ್ದು, ಚುನಾವಣಾ ಬಾಂಡ್ ಮೂಲಕ ಭ್ರಷ್ಟಾಚಾರಕ್ಕೆ ಹೊಸ ವ್ಯಾಖ್ಯಾನ ನೀಡಿದೆ. ಕೋಮುವಾದ, ಬಂಡವಾಳಶಾಹಿ ನೀತಿಯನ್ನು ಮತ್ತಷ್ಟು ವ್ಯಾಪಕಗೊಳಿಸಿದೆ. ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಕೂಟವೂ ಅವಕಾಶಕ್ಕಾಗಿ ಜನಪರ ಮಾತುಗಳನ್ನಾಡುತ್ತಿದ್ದು, ಶೋಷಿತ ಮತ್ತು ರೈತಪರ ಆಡಳಿತ ನೀಡಲು ಅವರು ಬದ್ಧರಾಗಿಲ್ಲ. ಆದ್ದರಿಂದ, ಜನರ ಹೋರಾಟದ ಭಾಗವಾಗಿ ನಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ’ ಎಂದರು.

‘ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಟಿ.ಆರ್.ಸುನಿಲ್, ಪಕ್ಷದ ಯುವಜನ ಸಂಘಟನೆ ಎಐಡಿವೈಒ ಮೂಲಕ ನೇಮಕಾತಿ ಅಕ್ರಮ, ಖಾಲಿ ಹುದ್ದೆಗಳ ಭರ್ತಿ, ಅತಿಥಿ ಶಿಕ್ಷಕರ ಸಮಸ್ಯೆ, ವಿದ್ಯಾರ್ಥಿಗಳ ಸಮಸ್ಯೆ ನಿವಾರಣೆಗೆ ಚಳವಳಿ ರೂಪಿಸಿ ಯಶಸ್ವಿಯಾಗಿದ್ದಾರೆ. ನಾಗರಹೊಳೆ ವ್ಯಾಪ್ತಿಯ ಆದಿವಾಸಿಗಳ ಸಂಕಷ್ಟ ಪರಿಹಾರಕ್ಕೆ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾರೆ. ಶ್ರಮಿಕರ, ಕಾರ್ಮಿಕರ, ರೈತರ ಸಮಸ್ಯೆಗಳ ಪರಿಹಾರಕ್ಕೆ ಸದಾ ಮುನ್ನುಗ್ಗುವ ಗುಣ ಅವರಲ್ಲಿದ್ದು, ಕ್ಷೇತ್ರದ ಮತದಾರರು ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಸ್.ಸುಮಾ, ಮುಖಂಡರಾದ ಚಂದ್ರಶೇಖರ್ ಮೇಟಿ, ಎಂ.ಉಮಾದೇವಿ, ವಿ.ಯಶೋಧರ್, ಎಸ್.ಎಚ್.ಹರೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT