ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಶಿವರಾತ್ರಿ ಆಚರಣೆಗೆ ಸಿದ್ಧತೆ ಜೋರು

ಮುಂಜಾನೆಯಿಂದಲೇ ವಿಶೇಷ ಪೂಜೆ; ಚಿನ್ನದ ಕೊಳಗ ಹಸ್ತಾಂತರ
Published 8 ಮಾರ್ಚ್ 2024, 6:34 IST
Last Updated 8 ಮಾರ್ಚ್ 2024, 6:34 IST
ಅಕ್ಷರ ಗಾತ್ರ

ಮೈಸೂರು: ಮಹಾ ಶಿವರಾತ್ರಿಯ ಶ್ರದ್ಧಾಭಕ್ತಿಯ ಆಚರಣೆಗೆ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆಯಿರುವ ಶಿವನ ದೇಗುಲಗಳಲ್ಲಿ ಗುರುವಾರ ಸಕಲ ಸಿದ್ಧತೆ ನಡೆಯಿತು.

ವಿಶೇಷ ಪೂಜೆ, ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಪತ್ರೆ ಅರ್ಪಣೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ದೇಗುಲ, ಮಠ–ಮಂದಿರಗಳಲ್ಲೂ ತಯಾರಿ ಭರದಿಂದ ನಡೆಯಿತು. ದೇಗುಲಗಳಲ್ಲಿ ನೂಕುನುಗ್ಗಲು ಉಂಟಾಗದಿರಲು ಸರತಿ ಸಾಲಿನಲ್ಲಿ ಬರಲು ಬ್ಯಾರಿಕೇಡ್‌, ಹಗ್ಗವನ್ನು ಕಟ್ಟಲಾಯಿತು.  

ಚಿನ್ನದ ಕೊಳಗ ಹಸ್ತಾಂತರ: ಅರಮನೆಯ ತ್ರಿನೇಶ್ವರ ದೇಗುಲದ ಮೂಲದೇವರಿಗೆ, ಶಿವರಾತ್ರಿಯ ದಿನದಂದು ತೊಡಿಸಲು ಬಂಗಾರದ ಕೊಳಗವನ್ನು ಗುರುವಾರ ಅಧಿಕಾರಿಗಳು ಅರ್ಚಕರಿಗೆ ಹಸ್ತಾಂತರಿಸಿದರು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ಸಂದರ್ಭ ಜಯಚಾಮರಾಜೇಂದ್ರ ಒಡೆಯರ್ ಅವರು ಅರಮನೆಯ ತ್ರಿನೇಶ್ವರಸ್ವಾಮಿ, ನಂಜನಗೂಡಿನ ನಂಜುಂಡೇಶ್ವರ ಹಾಗೂ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರಸ್ವಾಮಿ ದೇಗುಲಕ್ಕೆ ಚಿನ್ನದ ಕೊಳಗ ಕೊಡುಗೆಯಾಗಿ ನೀಡಿದ್ದರು. 

‘ಶುಕ್ರವಾರ ಮುಂಜಾನೆ ದೇಗುಲದಲ್ಲಿ ಅರ್ಚನೆ, ಅಭಿಷೇಕ ನಡೆಯಲಿದ್ದು, ಕೊಳಗ ಧಾರಣೆ ನಡೆಯಲಿದೆ. ಬೆಳಿಗ್ಗೆ 6ರಿಂದ ರಾತ್ರಿವರೆಗೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರಿಗೆ ವರಾಹ ದ್ವಾರದಿಂದ ಪ್ರವೇಶಾವಕಾಶವಿದೆ’ ಎಂದು ಅರಮನೆ ಮಂಡಳಿ ತಿಳಿಸಿದೆ.

ಎಲ್ಲೆಡೆ ಸಿದ್ಧತೆ: ರಾಮಾನುಜ ರಸ್ತೆಯಲ್ಲಿನ ಗುರುಕುಲದಲ್ಲಿರುವ ನೂರೊಂದು ಶಿವಲಿಂಗಗಳನ್ನು ಸ್ವಚ್ಛಗೊಳಿಸಿ, ಪೂಜೆಗೆ ಸಜ್ಜು ಮಾಡಲಾಯಿತು. ಇದರ ಮುಂಭಾಗದಲ್ಲಿರುವ ಕಾಮೇಶ್ವರ, ಕಾಮೇಶ್ವರಿ, ಕೆ.ಜಿ.ಕೊಪ್ಪಲು, ಪಡುವಾರಹಳ್ಳಿಯಲ್ಲಿರುವ ಚಂದ್ರಮೌಳೇಶ್ವರ, ಚಾಮುಂಡಿ ಬೆಟ್ಟದ ಮಹಾಬಲೇಶ್ವರಸ್ವಾಮಿ ದೇಗುಲದಲ್ಲೂ ಶಿವರಾತ್ರಿಯ ಆಚರಣೆ ಸಿದ್ಧತೆ ನಡೆದವು.

ಜಯಲಕ್ಷ್ಮೀಪುರಂನ ಕಾಳಿದಾಸ ರಸ್ತೆಯ ಚಂದ್ರಕಲಾ ಆಸ್ಪತ್ರೆ ಸಮೀಪ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯವು ಶಿವರಾತ್ರಿ ಪ್ರಯುಕ್ತ 21 ಅಡಿ ಎತ್ತರ ಶಿವಲಿಂಗ ಸ್ಥಾಪಿಸಿದೆ.

ಚಾಮರಾಜಪುರಂನ ಗೀತಾ ರಸ್ತೆಯಲ್ಲಿನ ಪ್ರಸನ್ನ ವಿಶ್ವೇಶ್ವರ ಸ್ವಾಮಿ, ಖಿಲ್ಲೆ ಮೊಹಲ್ಲಾದ ಭೈರವೇಶ್ವರಸ್ವಾಮಿ, ಅಶೋಕ ರಸ್ತೆಯ ಮುಕ್ಕಣ್ಣೇಶ್ವರ ಸ್ವಾಮಿ, ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಸ್ಥಾನ, ಬೋಗಾದಿಯ ನಾಗೇಶ್ವರ ಭೋಗೇಶ್ವರಸ್ವಾಮಿ, ಕುಂಬಾರಕೊಪ್ಪಲು, ಸಿದ್ದಪ್ಪ ಚೌಕ, ಹೊಸಕೇರಿ, ಬನ್ನೂರು ರಸ್ತೆ, ಲಷ್ಕರ್‌ ಮೊಹಲ್ಲಾದ ಗರಡಿಕೇರಿ ಹಾಗೂ ಇತರೆಡೆ ಇರುವ ಮಹದೇಶ್ವರ ದೇವಾಲಯ, ಸುತ್ತೂರು ಮಠ, ಗಣಪತಿ ಸಚ್ಚಿದಾನಂದ ಆಶ್ರಮದಲ್ಲೂ ಆಚರಣೆ ನಡೆಯಲಿದೆ.

ರಾಮಾನುಜರಸ್ತೆಯಲ್ಲಿರುವ ಗುರುಕುಲದ ನೂರೆಂಟು ಶಿವಲಿಂಗಗಳ ದೇವಾಲಯದಲ್ಲಿ ವಿಗ್ರಹಗಳನ್ನು ಸ್ವಚ್ಛಗೊಳಿಸಲಾಯಿತು –ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ರಾಮಾನುಜರಸ್ತೆಯಲ್ಲಿರುವ ಗುರುಕುಲದ ನೂರೆಂಟು ಶಿವಲಿಂಗಗಳ ದೇವಾಲಯದಲ್ಲಿ ವಿಗ್ರಹಗಳನ್ನು ಸ್ವಚ್ಛಗೊಳಿಸಲಾಯಿತು –ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.

ದೇಗುಲಗಳಲ್ಲಿ ಭದ್ರತೆ

ಶಿವರಾತ್ರಿ ಹಿನ್ನೆಲೆಯಲ್ಲಿ ನಗರದ ದೇಗಲಗಳ ಬಳಿ 3 ಡಿಸಿಪಿ 12 ಎಸಿ‍ಪಿ 33 ಇನ್‌ಸ್ಪೆಕ್ಟರ್‌ 58 ಪಿಎಸ್‌ಐ 114 ಎಎಸ್‌ಐ 770 ಕಾನ್‌ಸ್ಟೆಬಲ್‌ಗಳು 103 ಮಹಿಳಾ ಸಿಬ್ಬಂದಿ ಒಳಗೊಂಡಂತೆ ಕೆಎಸ್‌ಆರ್‌ಪಿ ಸಿಎಆರ್‌ ಪೊಲೀಸ್‌ ತುಕಡಿಗಳನ್ನು ನಿಯೋಜಿಸಲಾಗಿದೆ. ದೇವಸ್ಥಾನಗಳ ಬಳಿ ಮತ್ತು ಜಾಗರಣೆ ಸಮಯದಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆಯಲು ಅಗತ್ಯ ಬಂದೋಬಸ್ತ್‌ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ತಿಳಿಸಿದ್ದಾರೆ.  ಸಹಾಯವಾಣಿ 112 0821– 2418139 2418339ಗೆ ಸಂಪರ್ಕಿಸಬಹುದು. 

ಖರೀದಿ ಭರಾಟೆ ಜೋರು

ಹಬ್ಬದ ಮುನ್ನಾ ದಿನವಾದ ಗುರುವಾರ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ದೇವರಾಜ ಮಾರುಕಟ್ಟೆ ನಂಜುಮಳಿಗೆ ಹಾಗೂ ಅಗ್ರಹಾರದ ವಾಣಿ ವಿಲಾಸ ಮಾರುಕಟ್ಟೆಯಲ್ಲಿ ಶಿವಪೂಜೆಗೆ ಪ್ರಧಾನವಾಗಿ ಬಳಸುವ ಬಿಲ್ವಪತ್ರೆ ವಿಭೂತಿ ಲಿಂಗವಸ್ತ್ರ ಹೂವು ಹಣ್ಣುಗಳ ಹಾಗೂ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಜನರು ತೊಡಗಿದ್ದರು. ಮಲ್ಲಿಗೆ ಕಾಕಡ ಕನಕಾಂಬರ ಸೇವಂತಿ ಹೂವುಗಳಿಗೆ ಬೇಡಿಕೆ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT