ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್‌ ಸಂಭ್ರಮದಲ್ಲಿ ಮೀನಾ ಬಜಾರ್‌

ಉಪವಾಸ ವ್ರತಾಚರಣೆಯೊಂದಿಗೆ ಖರೀದಿಯೂ ಜೋರು; ಉಡುಗೊರೆ ನೀಡಲು ಸಿದ್ಧತೆ
Published 30 ಮಾರ್ಚ್ 2024, 7:38 IST
Last Updated 30 ಮಾರ್ಚ್ 2024, 7:38 IST
ಅಕ್ಷರ ಗಾತ್ರ

ಮೈಸೂರು: ಮುಸ್ಲಿಂ ಸಮುದಾಯದವರ ಪವಿತ್ರ ರಂಜಾನ್‌ ಮಾಸ ಆರಂಭವಾಗಿದ್ದು, ಕಟ್ಟುನಿಟ್ಟಿನ ಉಪವಾಸ ವ್ರತಾಚರಣೆ ನಡೆಯುತ್ತಿದೆ. ‘ಈದ್‌ ಉಲ್‌ ಫಿತ್ರ್‌’ ದಿನವು ಹತ್ತಿರವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಖರೀದಿ ಸಂಭ್ರಮ ಗರಿಗೆದರಿದೆ.

ಅದರಲ್ಲೂ, ನಗರದ ಮಂಡಿ ಮೊಹಲ್ಲಾದ ಸಾಡೇ ರಸ್ತೆಯ ‘ಮೀನಾ ಬಜಾರ್‌’ ಹಬ್ಬದ ವಿಶೇಷ ವ್ಯಾಪಾರದಿಂದ ಕಂಗೊಳಿಸುತ್ತಿದೆ. ದಿನವೂ ಇಫ್ತಾರ್‌ ಬಳಿಕ ಚಿತ್ತಾಕರ್ಷಕ ಬೆಳಕಿನಲ್ಲಿ ಮಿನುಗುತ್ತಿದೆ.

ಸಂಜೆಯಾದರೆ ಸಾಕು ಮಾರುಕಟ್ಟೆಯಲ್ಲಿನ ಬಾಂಬೆ ಫ್ಯಾಬ್ರಿಕ್, ಕುರ್ತಾ ಕಿಂಗ್, ಡೆಲ್ಲಿ ಬಜಾರ್, ಉಮಂಗ್‌ ಫ್ಯಾಷನ್, ಮರಿಯಂ ಫ್ಯಾಷನ್ ಮುಂತಾದ ಅಂಗಡಿಗಳಲ್ಲಿನ ಬಟ್ಟೆಗಳಿಗೆ ಜನರು ಮುಗಿ ಬೀಳುತ್ತಿದ್ದಾರೆ. ಸಿಹಿ ತಿಂಡಿ, ತಂಪುಪಾನೀಯ, ಬಿರಿಯಾನಿ ಸೆಂಟರ್‌ಗಳು ಭರ್ತಿಯಾಗುತ್ತಿವೆ. ಗ್ರಾಹಕರಿಗಾಗಿ ಉತ್ತರಪ್ರದೇಶ, ಬಿಹಾರ್‌, ದೆಹಲಿಯಿಂದಲೂ ವ್ಯಾಪಾರಿಗಳು ಸರಕುಗಳೊಂದಿಗೆ ಬಂದಿದ್ದಾರೆ.

ಚಾಮರಾಜನಗರ, ಮಂಡ್ಯ, ಹಾಸನ, ಕೊಡಗಿನಿಂದ ಬರುವ ಮುಸ್ಲಿಮರು ಮನೆ ಮಂದಿಗೆಲ್ಲ ಬಟ್ಟೆ, ಪ್ರೀತಿ ಪಾತ್ರರಿಗೆ ಉಡುಗೊರೆ ಕೊಳ್ಳಲು ಶುರು ಮಾಡಿದ್ದಾರೆ.

‘ಉಪವಾಸದ ಕೊನೆ ದಿನಗಳಲ್ಲಿ ಮಾರ್ಕೆಟ್‌ನಲ್ಲಿ ಜನದಟ್ಟಣೆ ಹೆಚ್ಚಾಗುತ್ತದೆ. ಹಾಗಾಗಿ, ಈಗಲೇ ಕುಟುಂಬದೊಂದಿಗೆ ಖರೀದಿಗೆ ಬಂದಿದ್ದೇವೆ’ ಎಂದು ಕೆ.ಆರ್‌.ನಗರದ ಫಯಾಜ್‌ ತಿಳಿಸಿದರು.

‘ಮಹಿಳೆಯರ ಬಟ್ಟೆಗಳು, ಫ್ಯಾಶನ್‌ ಉತ್ಪನ್ನಗಳು, ಸುಗಂಧ ದ್ರವ್ಯಗಳು, ಚಪ್ಪಲಿಗಳು, ಫ್ಯಾನ್ಸಿ ಆಭರಣಗಳು, ಗೃಹೋಪಯೋಗಿ ವಸ್ತುಗಳು, ಮಕ್ಕಳ ಆಟಿಕೆಗಳು, ಸಿಹಿ ತಿಂಡಿಗಳಿಗೆ ಈ ತಿಂಗಳಲ್ಲಿ ಬೇಡಿಕೆ ಹೆಚ್ಚು. ಇದು ನಮ್ಮ ದೊಡ್ಡ ಹಬ್ಬವಾಗಿದ್ದು, ವರ್ಷದಲ್ಲಿ ಯಾವ ಹಬ್ಬಕ್ಕೂ ಮಾಡದ ಖರ್ಚನ್ನು ಮಾಡುತ್ತೇವೆ. ಹೆಚ್ಚು ಸಂಭ್ರಮಿಸುತ್ತೇವೆ’ ಎಂದರು.

‘ಸುಗಂಧ’ದ ಮೋಹ: ಹಬ್ಬ ಸುಗಂಧ ದ್ರವ್ಯದ ಮಾರಾಟವನ್ನು ಚುರುಕುಗೊಳಿಸಿದೆ. ಮರಿಯಮ್ 300, ಸಿ.ಆರ್.7, ಮಾರ್ವಾ, ಕುಲ್ ಬ್ಲೂ, ಐಸ್ ಬರ್ಗ್, ಶಾಹಿ, ಮಸ್ಕೆರೆ ಜಾಲಿ, ಸಬಾಯ, ವೈಟ್ ಊದ್, ಡೆನ್ವೀರ್ ಸುಗಂಧಗಳು ಜನರನ್ನು ಸೆಳೆಯುತ್ತಿವೆ.

‘ಈ ಬಾರಿ ಕಳೆದ ಸಲಕ್ಕಿಂತ ಉತ್ತಮ ವ್ಯಾಪಾರವಾಗುತ್ತಿದೆ. ಹೆಚ್ಚು ಉತ್ತಮ ಬ್ರ್ಯಾಂಡ್‌ಗಳನ್ನು ತರಿಸಿದ್ದೇನೆ. 10 ಮಿ. ಲೀ.ಗೆ ₹100ರಿಂದ ₹2 ಸಾವಿರ ಮೊತ್ತದ ಉತ್ಪನ್ನಗಳು ನಮ್ಮಲ್ಲಿವೆ’ ಎಂದು ಅಲ್ ಮದೀನಾ ಅತ್ತರ್ಸ್‌ ಅಂಡ್ ಪರ್ಫ್ಯೂಮ್ ಅಂಗಡಿ ಮಾಲೀಕ ಫರ್ಹಾನ್ ಪಾಶಾ ‘ಪ್ರಜಾವಾಣಿ’ಗೆ ತಿಳಿಸಿದರು.

ಟೋಪಿ ಮಾರಾಟದಲ್ಲಿ ನಿರತವಾಗಿರುವ ವ್ಯಾಪಾರಿ ಅಬ್ದುಲ್‌ ರೆಹಮಾನ್‌
ಟೋಪಿ ಮಾರಾಟದಲ್ಲಿ ನಿರತವಾಗಿರುವ ವ್ಯಾಪಾರಿ ಅಬ್ದುಲ್‌ ರೆಹಮಾನ್‌
ಕಬೀರ್‌
ಕಬೀರ್‌

ಕುಟುಂಬದೊಂದಿಗೆ ಆಗಮಿಸುತ್ತಿರುವ ಜನ ಹಬ್ಬ ಹತ್ತಿರವಾದಂತೆ ಹೆಚ್ಚುತ್ತಿದೆ ಖರೀದಿ ಬಟ್ಟೆ, ಸುಗಂಧ ದ್ರವ್ಯ, ಸಿಹಿ ತಿನಿಸಿಗೆ ಬೇಡಿಕೆ

ಪ್ರತಿ ಹಬ್ಬದ ಖರೀದಿಗೂ ಕುಟುಂಬದೊಂದಿಗೆ ಮೀನಾ ಬಜಾರ್‌ಗೆ ಬರುತ್ತೇವೆ. ಇಲ್ಲಿ ನಮಗೆ ಬೇಕಾದ ಗುಣಮಟ್ಟದ ವಸ್ತುಗಳು ಸಿಗುತ್ತವೆ

-ಕಬೀರ್ ಮಳವಳ್ಳಿ

ವಿವಿಧ ಟೋಪಿಗೆ ಬೇಡಿಕೆ ಮುಸ್ಲಿಮರು ಈ ಹಬ್ಬದಲ್ಲಿ ಹೊಸ ಟೋಪಿಗಳನ್ನು ಖರೀದಿಸಲಿದ್ದು ಅಂಗಡಿಗಳು ಅನೇಕ ಮಾದರಿಯ ಟೋಪಿಗಳನ್ನು ಮಾರಾಟಕ್ಕಿಟ್ಟಿವೆ. ‘ಬರ್ಕತಿ ಅಫ್ಗಾನಿ ತುರ್ಕಿ ಸ್ಟೋನ್ ಟೋಪಿ ಇರ್ತುಗುಲ ಹೈದರಾಬಾದಿ ಕಾಶ್ಮೀರಿ ಟೋಪಿ ಅಜ್ಮೇರ್ ಕೆ ಖ್ವಾಜ ಗರಿಬುನ್ ನವಾಜ್ ಹಾಗೂ ಹೈದರಾಬಾದ್ ನವಾಬ್ ಸಾಬ್ ಟೋಪಿಗಳು ಗಮನ ಸೆಳೆಯುತ್ತಿವೆ. ‘ಟೋಪಿ ಎನ್ನುವುದು ನಮ್ಮ ಧರ್ಮದಲ್ಲಿ ಭಕ್ತಿಯ ಭಾಗವಾಗಿದೆ. ಹಾಗಾಗಿ ಇಲ್ಲಿ ತೀರಾ ಫ್ಯಾಶನ್‌ ಮಾಡುವುದಿಲ್ಲ. ನಮ್ಮ ಅಂಗಡಿಯಲ್ಲಿ ₹50ರಿಂದ ₹400ರವರೆಗಿನ ಟೋಪಿಗಳು ಲಭ್ಯ ಇವೆ’ ಎಂದು ವ್ಯಾಪಾರಿ ಅಬ್ದುಲ್ ರೆಹಮಾನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT