ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ನರೇಗಾ ಯೋಜನೆಗಳ ನಕಲಿ ಬಿಲ್ ಸೃಷ್ಟಿ

ತನಿಖೆ ನಡೆಸಲು ಸಾಮಾಜಿಕ ಲೆಕ್ಕ ಪರಿಶೋಧನ ಸಭೆಯಲ್ಲಿ ಒತ್ತಾಯ
Published 20 ಡಿಸೆಂಬರ್ 2023, 14:48 IST
Last Updated 20 ಡಿಸೆಂಬರ್ 2023, 14:48 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿ ನಡೆಸದೆ ನಕಲಿ ಬಿಲ್ ಸೃಷ್ಟಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಗ್ರಾಮದಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನ ಸಭೆಯಲ್ಲಿ ಪಟ್ಟು ಹಿಡಿದರು.

ಗ್ರಾ.ಪಂ. ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಸ್ಥಳದಲ್ಲಿ ನರೇಗಾ ಯೋಜನೆ ಬಳಸಿಕೊಂಡು ಕಾಮಗಾರಿ ನಡೆಸಲಾಗಿದೆ ಎಂದು ನಕಲಿ ಬಿಸ್ ಸೃಷ್ಟಿಸಿ ಸರ್ಕಾರದಿಂದ ಹಣ ಪಡೆದಿದ್ದಾರೆ. ಇದಲ್ಲದೆ 14 ಮತ್ತು 15 ನೇ ಹಣಕಾಸು ಯೋಜನೆಯಲ್ಲೂ ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಿ ಸಭೆಯಲ್ಲಿ ಸ್ಥಳೀಯರು ಆಕ್ರೋಶ ಹೊರ ಹಾಕಿದರು. ಈ ಸಂಬಂಧ ವಿಶೇಷ ತನಿಖೆ ನಡೆಸಿ ಹಣ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೊಠಡಿ ನಿರ್ಮಾಣಕ್ಕೆ ಸಂಬಂಧಿಸಿದಂತೆ 14ನೇ ಹಣಕಾಸು ಯೋಜನೆ ಮತ್ತು ನರೇಗಾ ಅನುದಾನ ಬಳಸಿಕೊಂಡಿದ್ದು ಎರಡು ಬಾರಿ ಒಂದೇ ಕಾಮಗಾರಿಗೆ ಬಿಲ್ ಸೃಷ್ಟಿಸಲಾಗಿದೆ. ಇದಲ್ಲದೆ ಶಾಲೆಯಲ್ಲಿ ಅಂಗವಿಕಲ ಮಕ್ಕಳಿಗೆ ಶೌಚಾಲಯ ಪೂರ್ಣಗೊಳಿಸುವ ಮುನ್ನ ಸಂಪೂರ್ಣ ಬಿಲ್ ಪಾವತಿಸಲಾಗಿದೆ ಎಂದು ದೂರಿದರು.

ಈ ಸಂಬಂಧ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ನೋಡಲ್ ಅಧಿಕಾರಿ ಅಶ್ವಿನಿ ಮಾತನಾಡಿ, ಗ್ರಾಮಸ್ಥರು ಸಭೆಯಲ್ಲಿ ಮಾಡುತ್ತಿರುವ ದೂರುಗಳನ್ನು ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗುವುದು. ಇದಲ್ಲದೆ ಸಭೆಯಲ್ಲಿ ಸಾರ್ವಜನಿಕರು ಮಾಡಿದ ಆರೋಪಗಳನ್ನು ನಡವಳಿಕೆ ಪುಸ್ತಕದಲ್ಲಿ ದಾಖಲಿಸಲಾಗುವುದು ಎಂದರು. ಇದಲ್ಲದೆ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ತಿಳಿಸಿ ಸಭೆ ಮುಂದೂಡಿದರು.

ಸಭೆಯಲ್ಲಿ ತಾಲ್ಲೂಕು ಸಮನ್ವಯಾಧಿಕಾರಿ ಗೌರೀಶ್, ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ, ಪಿಡಿಒ ಶಿಲ್ಪಶ್ರೀ ಮತ್ತು ಸಿಬ್ಬಂದಿ ಇದ್ದರು.

ಸಾಮಾಜಿಕ ಲೆಕ್ಕ ಪರಿಶೋದನ ಸಭೆಯಲ್ಲಿ ಕೇಳಿಬಂದ ಆರೋಪಕ್ಕೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿ ವರದಿ ನೀಡಿದ್ದು ಆ ಬಗ್ಗೆ ತನಿಖೆ ನಡೆಸಲಾಗುವುದು

-ನು ಬಿ.ಕೆ ತಾ.ಪಂ. ಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT