ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ ಚುನಾವಣೆ: ಕಡೇ ದಿನ ನಾಮಪತ್ರ ಸಲ್ಲಿಕೆ ಭರಾಟೆ

Published 16 ಮೇ 2024, 14:31 IST
Last Updated 16 ಮೇ 2024, 14:31 IST
ಅಕ್ಷರ ಗಾತ್ರ

ಮೈಸೂರು: ವಿಧಾನ ಪರಿಷತ್‌ನ ವಿವಿಧ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಗೆ ಗುರುವಾರ ಕಡೆಯ ದಿನವಾಗಿದ್ದು, ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮೂರು ಕ್ಷೇತ್ರಗಳಿಂದ ಒಟ್ಟು 21 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಉತ್ಸಾಹ ತೋರಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್–ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕೆ. ವಿವೇಕಾನಂದ ಮೂರು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು. ಅವರಿಗೆ ಜೆಡಿಎಸ್‌ ಶಾಸಕಾಂಗ ಪಕ್ಷದ‌ ನಾಯಕ ಎಚ್.ಡಿ. ಕುಮಾರಸ್ವಾಮಿ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ವಿಪಕ್ಷ ನಾಯಕ ಆರ್. ಅಶೋಕ್, ಮೈಸೂರು–ಕೊಡಗು ಲೋಕಭಾ ಕ್ಷೇತ್ರದ ಬಿಜೆಪಿ–ಜೆಡಿಎಸ್‌ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಥ್ ನೀಡಿದರು.

ಇದೇ ಕ್ಷೇತ್ರದಿಂದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಭ್ಯರ್ಥಿಯಾಗಿ ವಾಟಾಳ್‌ ನಾಗರಾಜು, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಎಂ. ನಾಗೇಂದ್ರ ಬಾಬು, ಪಕ್ಷೇತರರಾಗಿ ಕೆ.ಸಿ. ಪುಟ್ಟಸಿದ್ಧಶೆಟ್ಟಿ, ನಾಗಮಲ್ಲೇಶ್‌, ಎಸ್‌. ಅನಿಲ್‌ ಕುಮಾರ್‌, ಆರ್‌. ಮಹೇಶ್‌, ಕೆ. ರಾಜು, ಎನ್‌. ಅಂಬರೀಶ್‌, ಎಸ್. ನಿಂಗರಾಜು ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಕೆ. ಮಂಜುನಾಥ್‌ ಕುಮಾರ್‌ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸಿದರು. ಇದೇ ಕ್ಷೇತ್ರದಿಂದ ಪಕ್ಷೇತರರಾಗಿ ಬಿ.ಆರ್‌. ನಂಜೇಶ್‌, ನರೇಶ ಹೆಗ್ಗಡೆ, ಕೆ.ಕೆ. ಮಂಜುನಾಥ್‌ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

ನೈರುತ್ಯ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್‌ ಉಮೇದುವಾರಿಕೆ ಸಲ್ಲಿಸಿದ್ದು, ಸಚಿವ ಮಧು ಬಂಗಾರಪ್ಪ ಹಾಗೂ ಕಾಂಗ್ರೆಸ್ ಮುಖಂಡರು ಸಾಥ್‌ ನೀಡಿದರು. ಬಿಜೆಪಿ ಅಭ್ಯರ್ಥಿಯಾಗಿ ಧನಂಜಯ ಸರ್ಜೆ ನಾಮಪತ್ರ ಸಲ್ಲಿಸಿದ್ದು, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಪಕ್ಷದ ಮುಖಂಡರು ಜೊತೆಗಿದ್ದರು.

ಇದೇ ಕ್ಷೇತ್ರದಿಂದ ಪಕ್ಷೇತರರಾಗಿ ಮಾಜಿ ಶಾಸಕ ಕೆ. ರಘುಪತಿ ಭಟ್‌ ನಾಮಪತ್ರ ಸಲ್ಲಿಸಿದರು. ಸರ್ವ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಜೆ.ಸಿ. ಪಟೇಲ್‌, ಪಕ್ಷೇತರರಾಗಿ ಷಹರಾಜ್‌ ಮುಜಾಹಿದ್‌ ಸಿದ್ದಿಕಿ, ಜಿ.ಆರ್. ಷಡಾಕ್ಷರಪ್ಪ, ಎಂ. ರಂಗಸ್ವಾಮಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಒಟ್ಟಾರೆಯಾಗಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ 10, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ 13 ಹಾಗೂ ನೈರುತ್ಯ ಪದವೀಧರ ಕ್ಷೇತ್ರದಿಂದ 11 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಶುಕ್ರವಾರ ನಾಮಪತ್ರ ‍ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ವಾಪಸ್‌ಗೆ ಮೇ 20 ಕಡೆಯ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT