ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಕಬ್ಬಿನ ತೋಟದ ಆನೆಗಳು ಅರಮನೆಗೆ!

Published 19 ಡಿಸೆಂಬರ್ 2023, 5:27 IST
Last Updated 19 ಡಿಸೆಂಬರ್ 2023, 5:27 IST
ಅಕ್ಷರ ಗಾತ್ರ

ಮೈಸೂರು: ಕಬ್ಬು–ಬಾಳೆ ತೋಟದಲ್ಲಿದ್ದ ತಾಯಿ– ಮರಿಯಾನೆಗಳು ಅರಮನೆ ಆವರಣಕ್ಕೆ ಬರುತ್ತಿವೆ. ‘ಮಲೆ ಮಹದೇಶ್ವರ ವನ್ಯಧಾಮ’ದಿಂದ ಹುಲಿಯನ್ನು ಕರೆತಲಾಗುತ್ತಿದೆ. ಸೋಮನಾಥಪುರ ದೇವಾಲಯವನ್ನು ನಿರ್ಮಿಸಲಾಗುತ್ತಿದೆ! 

ಇಟ್ಟಿಗೆ, ಗಾರೆ, ಕಬ್ಬಿಣದಿಂದ ಇವುಗಳ ನಿರ್ಮಾಣ ನಡೆಯುತ್ತಿಲ್ಲ. ಬದಲಿಗೆ 4 ಲಕ್ಷ ಹೂಗಳಿಂದ ‘ಹೂಗಳ ಲೋಕ’ವನ್ನು ಸೃಷ್ಟಿಸಲಾಗುತ್ತಿರುವುದು ವಿಶೇಷ!

ಅರಮನೆ ಅಂಗಳದಲ್ಲಿ ‘ಮೈಸೂರು ಅರಮನೆ ಮಂಡಳಿ’ಯು ಇದೇ 22ರಿಂದ ‘ಮಾಗಿ ಉತ್ಸವ’ ಆಯೋಜಿಸಿದೆ. ಕ್ರಿಸ್‌ಮಸ್‌ ರಜೆ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರವಾಸಿಗರು ನಗರಕ್ಕೆ ಲಗ್ಗೆ ಇಡಲಿದ್ದಾರೆ. ಅವರಿಗಾಗಿ 10 ದಿನಗಳ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ. ಡಿ.31ರವರೆಗೆ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರವಾಸಿಗರು, ನಾಗರಿಕರು ಹೂಗಳ ಲೋಕವನ್ನು ಕಣ್ತುಂಬಿಕೊಳ್ಳಬಹುದು. ಪ್ರವೇಶ ಉಚಿತ. 

ಡಿ.22ರ ಸಂಜೆ 5.30ಕ್ಕೆ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಕಲಾಪ್ರಕಾರಗಳೊಂದಿಗೆ ‌ಚಾಮುಂಡೇಶ್ವರಿ ದೇವಿಯ ರಥೋತ್ಸವವೂ ನಡೆಯಲಿದೆ. 

ಸಿದ್ಧತೆ ಆರಂಭ

ಅರಮನೆಯ ವರಾಹ ದ್ವಾರಕ್ಕೆ ಹೊಂದಿಕೊಂಡಿರುವ ಅಂಗಳದಲ್ಲಿ ಸೋಮನಾಥಪುರ ದೇಗುಲ ಕಟ್ಟುವ ಕಾರ್ಯ ಆರಂಭವಾಗಿದೆ. ಅಂಗಳದಲ್ಲಿ ಬೆಳೆದಿದ್ದ ಕಳೆಯನ್ನು ಕಾರ್ಮಿಕರು ತೆಗೆದು ಫಲಪುಷ್ಪ ಪ್ರದರ್ಶನಕ್ಕೆ ಅಣಿಗೊಳಿಸುತ್ತಿದ್ದಾರೆ. 

‘ಕಳೆದ 9 ವರ್ಷದಿಂದ ಪ್ರತಿ ವರ್ಷಾಂತ್ಯದಲ್ಲಿ ಮಾಗಿ ಉತ್ಸವ ಪ್ರಯುಕ್ತ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ. 25 ಸಾವಿರಕ್ಕೂ ಹೆಚ್ಚಿನ ಅಲಂಕಾರಿಕ ಹೂಕುಂಡಗಳು, ಬೋನ್ಸಾಯ್‌ ಗಿಡಗಳು, 35 ಜಾತಿಯ ಹೂ ಗಿಡಗಳು ಪ್ರದರ್ಶನದಲ್ಲಿದ್ದು, 4 ಲಕ್ಷಕ್ಕೂ ಹೆಚ್ಚು ಹೂಗಳಿಂದ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಅರಮನೆ ಮಂಡಳಿ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಸಕ್ತ ವರ್ಷ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೋಮನಾಥಪುರ ದೇವಾಲಯ ಸ್ಥಾನ ‍ಪಡೆದ ಹಿನ್ನೆಲೆಯಲ್ಲಿ 20 ಅಡಿ ಉದ್ದ, 50 ಅಡಿ ಅಗಲ, 28 ಅಡಿ ಎತ್ತರದ ಸೋಮನಾಥಪುರ ದೇವಾಲಯ ಮಾದರಿ ನಿರ್ಮಿ‌ಸಲಾಗುತ್ತಿದೆ. ಜೊತೆಗೆ ಸಂವಿಧಾನ ಪೀಠಿಕೆಯ ಮಾದರಿ, ಸಿರಿಧಾನ್ಯ ವರ್ಷವಾದ್ದರಿಂದ ಮಲೆ ಮಹದೇಶ್ವರ ಸ್ವಾಮಿಯು ಹುಲಿಯನ್ನೇರಿ ಬರುವ ಮಾದರಿಯನ್ನು ಸಿರಿಧಾನ್ಯ ಹಾಗೂ ಹೂ ಬಳಸಿ ನಿರ್ಮಿಸಲಾಗುತ್ತಿದೆ. ಮಾನವ–ವನ್ಯಪ್ರಾಣಿ ಸಂಘರ್ಷ ನೆನಪಿಸುವ ಕಬ್ಬು–ಬಾಳೆ ತೋಟದ ಮಧ್ಯೆ ಇರುವ ತಾಯಿ–ಮರಿಯಾನೆಗಳ ಮಾದರಿ ಗಮನ ಸೆಳೆಯಲಿವೆ. 

ಹಂಪಿ ಕಲ್ಲಿನ ರಥ, ವಿರೂಪಾಕ್ಷ, ಶಿವಲಿಂಗ, ಓರೆಯಾದ ಹೂಕುಂಡ, ರಾಜ್ಯದ ನಕ್ಷೆಗೆ ದೀಪಾಲಂಕಾರ ಮಾದರಿ, ವಾಣಿವಿಲಾಸ ಸನ್ನಿಧಾನ, ನಾಲ್ವಡಿ ಕೃಷ್ಣರಾಜ ಒಡೆಯರ್‌, ರಾಜ್‌ಕುಮಾರ್‌ ನೇಗಿಲು ಉಳುಮೆ ಮಾಡುವ ದೃಶ್ಯದ ಮಾದರಿಗಳೂ ಇರಲಿವೆ. ದೂರದರ್ಶಕ ಅಳವಡಿಸಲಾಗುತ್ತಿದ್ದು, ಅದರಿಂದ ಅರಮನೆಯನ್ನೂ ವೀಕ್ಷಿಸಬಹುದು. 

ಸಂಗೀತದ ಇಂಪು: ಅಂಗಳದಲ್ಲಿ ಫಲಪುಷ್ಪಗಳನ್ನು ವೀಕ್ಷಿಸುತ್ತಲೇ ಜಯಚಾಮರಾಜ ಒಡೆಯರ್‌ರ ಕರ್ನಾಟಕ ಸಂಗೀತ ಕೃತಿಗಳನ್ನು ಆಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಉದ್ಘಾಟನಾ ದಿನದಂದು 500 ಜನರಿಗೆ ಅಲೋವೆರಾ, ತುಳಸಿ, ಮಲ್ಲಿಗೆ, ವೀಳ್ಯೆದೆಲೆ ಹಾಗೂ ಇತರ ಔಷಧ ಗಿಡಗಳನ್ನು ಸಾಂಕೇತಿಕವಾಗಿ ನೀಡಲಾಗುತ್ತಿದೆ. ಚಿಟ್ಟೆ, ಹದ್ದು, ಹೃದಯ ಸೆಲ್ಫಿ ಪಾಯಿಂಟ್‌ಗಳೂ ಚಿತ್ರಪ್ರಿಯರನ್ನು ಕಾಯುತ್ತಿವೆ.

ದೀಪಾಲಂಕಾರ ಶಬ್ದರಹಿತ

ಬಾಣ–ಬಿರುಸು ರಿಂದ ನಿತ್ಯ 7ರಿಂದ 9ರವರೆಗೆ ಅರಮನೆ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸಲಿದೆ. 22ರಿಂದ 25ರವರೆಗೆ ಅರಮನೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ.31ರಂದು ರಾತ್ರಿ 11ರಿಂದ 12ರವರೆಗೆ ಪೊಲೀಸ್‌ ಬ್ಯಾಂಡ್‌ ವಾದ್ಯ ಸಂಗೀತ ಇರಲಿದೆ. ರಾತ್ರಿ 12ರಿಂದ 12.15ರವರೆಗೆ ಹಸಿರು ಪಟಾಕಿಯ ಬಾಣ– ಬಿರುಸುಗಳಿಂದ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ.  ಛಾಯಾಚಿತ್ರ ವಿಡಿಯೊ ಪ್ರದರ್ಶನ: ಛಾಯಾಚಿತ್ರ ಪ್ರದರ್ಶನದಲ್ಲಿ ದಸರಾ ಅಂದು– ಇಂದು ಮೈಸೂರು ಅರಸರು ಸಾಕ್ಷ್ಯಚಿತ್ರ ಪ್ರದರ್ಶನ ಇರಲಿದೆ. ಬೊಂಬೆ ಪ್ರದರ್ಶನವೂ ಇರಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ 

ಡಿ.22ರಂದು ಸಂಜೆ 6ಕ್ಕೆ ಎ.ಎಂ.ಗುರುರಾಜ್ ಅವರಿಂದ ವಾದ್ಯಸಂಗೀತ ರಾತ್ರಿ 7.20ಕ್ಕೆ ಮನೋ ಅವರಿಂದ ಸಂಗೀತ ಸಂಜೆ ಡಿ.23ರಂದು ಸಂಜೆ 5.45ಕ್ಕೆ ಹನುಮಂತರಾಜು ಅವರಿಂದ ಲಯ ನಾದತರಂಗ 6.30ಕ್ಕೆ ಕಿಶನ್‌ ಬಿಳಿಗಲಿ ತಂಡದಿಂದ ನೃತ್ಯ ರಾತ್ರಿ 7.45 ಟಿಪೂ ಅವರಿಂದ ಗಾಯನ ಡಿ.24ರಂದು ಸಂಜೆ 5.45ಕ್ಕೆ ಯೋಗೇಶ್‌ ಅವರಿಂದ ಸಮರಕಲೆ 6.30ಕ್ಕೆ ಹೇಮಲತಾ ಕುಮಾರಸ್ವಾಮಿ ಸುಗಮ ಸಂಗೀತ ರಾತ್ರಿ 7.30ಕ್ಕೆ ಹೇಮಂತ್– ಶಮಿತ ಮಲ್ನಾಡ್‌ ಅವರಿಂದ ಸಂಗೀತ ಯಾನ ಡಿ.25ರಂದು ಸಂಜೆ 6ಕ್ಕೆ ನಾಗಲಕ್ಷ್ಮಿ ಅವರಿಂದ ನೃತ್ಯ ರಾತ್ರಿ 7ಕ್ಕೆ ವಿದ್ಯಾಭೂಷಣ– ರಘುಪತಿಭಟ್‌ ಕುಂಚಗಾಯನ 8ಕ್ಕೆ ಎಂ.ಡಿ.ಪಲ್ಲವಿ ಅವರಿಂದ ಸುಗಮ ಸಂಗೀತ ಸಂಜೆ ಡಿ.31ರಂದು ರಾತ್ರಿ 11ಕ್ಕೆ ಪೊಲೀಸ್‌ ಬ್ಯಾಂಡ್‌ ವಾದ್ಯ ಸಂಗೀತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT