ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ದಕ್ಷಿಣ ಶಿಕ್ಷಕರ ಕ್ಷೇತ್ರ: ಶೇ 88.07ರಷ್ಟು ಮತದಾನ

Published 3 ಜೂನ್ 2024, 13:50 IST
Last Updated 3 ಜೂನ್ 2024, 13:50 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್‌ ಚುನಾವಣೆ ಸೋಮವಾರ ಶಾಂತಿಯುತವಾಗಿ ನಡೆದಿದ್ದು, ಶೇ 88.07 ಮತದಾನವಾಗಿದೆ. ಒಟ್ಟು 11 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ.

ಮೈಸೂರು, ಹಾಸನ, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಒಟ್ಟು 44 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 11,998 ಪುರುಷರು, 9,550 ಮಹಿಳೆಯರು, ಒಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 21,549 ಮತದಾರರಿದ್ದರು. ಇವರಲ್ಲಿ 18,979 ಮಂದಿ ಹಕ್ಕು ಚಲಾಯಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ದಾಖಲೆಯ ಶೇ 92.25ರಷ್ಟು ಮತದಾನವಾಗಿದೆ. ಕ್ಷೇತ್ರದ ಶೇ 50ರಷ್ಟು ಮತದಾರರಿರುವ ಮೈಸೂರಿನಲ್ಲಿ ಅತಿ ಕಡಿಮೆ (ಶೇ 84.07) ಮತದಾನವಾಗಿದೆ. ಹಾಸನದಲ್ಲಿ ಶೇ 91.95 ಹಾಗೂ ಮಂಡ್ಯದಲ್ಲಿ ಶೇ 91.6ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ.

ಮೈಸೂರಿನ 10,439 ಮತದಾರರಲ್ಲಿ 8,776 ಮಂದಿ ಹಕ್ಕು ಚಲಾಯಿಸಿದರು. ಇವರಲ್ಲಿ 5,338 ಪುರುಷರು, 5,100 ಮಹಿಳೆಯರು ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಕಾಂಗ್ರೆಸ್‌ನ ಮರಿತಿಬ್ಬೇಗೌಡ, ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ, ನಾಗೇಂದ್ರ ಬಾಬು (ಕೆಜೆಪಿ), ಮಾಜಿ ಶಾಸಕ ವಾಟಾಳ್ ನಾಗರಾಜ್‌ (ಕನ್ನಡ ಚಳವಳಿ ವಾಟಾಳ್ ಪಕ್ಷ), ಅನಿಲ್‌ ಕುಮಾರ್, ಅಂಬರೀಷ್, ನಿವೃತ್ತ ಡಿಡಿಪಿಯು ನಾಗಮಲ್ಲೇಶ್, ಎಸ್.ನಿಂಗರಾಜು, ವಿಧಾನಪರಿಷತ್‌ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ, ಬಿಎಸ್ಪಿ ಬೆಂಬಲಿತ ಅಭ್ಯರ್ಥಿ ಆರ್. ಮಹೇಶ್ ಹಾಗೂ ರಾಜು ಕೆ. (ಎಲ್ಲರೂ ಪಕ್ಷೇತರರು) ಅವರ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದಾರೆ. ಮತ ಎಣಿಕೆ ಮೈಸೂರಿನಲ್ಲಿ ಜೂನ್‌ 6ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT