ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳ ನೇರ ವ್ಯಾಖ್ಯಾನ ಅಗತ್ಯ: ಪ್ರೊ.ಎಚ್‌.ಎಸ್. ಶಿವಪ್ರಕಾಶ್‌

ಬಹುರೂಪಿ: ವಿಚಾರಸಂಕಿರಣ ಉದ್ಘಾಟಿಸಿದ ಪ್ರೊ.ಎಚ್‌.ಎಸ್. ಶಿವಪ್ರಕಾಶ್‌
Published 9 ಮಾರ್ಚ್ 2024, 12:13 IST
Last Updated 9 ಮಾರ್ಚ್ 2024, 12:13 IST
ಅಕ್ಷರ ಗಾತ್ರ

ಮೈಸೂರು: ‘ವಚನಗಳನ್ನು ನೇರವಾಗಿ ನೋಡಿ ವ್ಯಾಖ್ಯಾನಿಸುವ ಅಗತ್ಯವಿದೆ’ ಎಂದು ಕವಿ ಪ್ರೊ.ಎಚ್‌.ಎಸ್. ಶಿವಪ್ರಕಾಶ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ರಂಗಾಯಣದಲ್ಲಿ ನಡೆಯುತ್ತಿರುವ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವದ ಭಾಗವಾಗಿ ‘ಬಿ.ವಿ.ಕಾರಂತ ರಂಗಚಾವಡಿ’ಯಲ್ಲಿ ಶನಿವಾರ ಆರಂಭವಾದ ‘ವಚನ ಚಳವಳಿಯ ಸಮಕಾಲೀನ ವ್ಯಾಖ್ಯಾನ’ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ನಾವು ವಚನಗಳ ಮೇಲೆ ಕಟ್ಟಿಕೊಂಡಿರುವ ಕಥನವು ವಚನಗಳ ಮೇಲೆ ನೇರವಾಗಿ ಅಧಾರಿತವಾದುದಲ್ಲ’ ಎಂದು ಪ್ರತಿಪಾದಿಸಿದ ಅವರು, ‘ವಿರಕ್ತರು ಸಂಪಾದನೆ, ಶೂನ್ಯ ಸಂಪಾದನೆ ಮೇಲೆ ಮರುವ್ಯಾಖ್ಯಾನ ಮಾಡಿದರು. ಅದರ ಆಧಾರದ ಮೇಲೆ ಮಾತನಾಡುತ್ತಿದ್ದೇವೆ’ ಎಂದು ತಿಳಿಸಿದರು.

‘ವಚನ ಪರಂಪರೆಯ ಅನೇಕ ಸತ್ಯಗಳನ್ನು ಬಿಚ್ಚಿಡುವ ಶೂನ್ಯ ಸಂಪಾದನೆಯು ಒಂದು ರೀತಿಯಲ್ಲಿ ವಚನಗಳಿಗೆ ಅನ್ಯಾಯ ಮಾಡಿದೆ. ಏಕೆಂದರೆ, ಶೋಷಿತ, ಶ್ರಮಜೀವಿ ವರ್ಗದವರು ಹಾಗೂ ಮಹಿಳೆಯರ ದನಿಗಳನ್ನು ಬದಿಗೊತ್ತಲಾಗಿದೆ’ ಎಂದು ವಿಶ್ಲೇಷಿಸಿದರು.

ವೀರಶೈವೇತರ ಯೋಗದಾನ ಮಹತ್ವದ್ದು:

‘ವಚನಗಳ ಪುನರ್‌ ವ್ಯಾಖ್ಯಾನಕ್ಕೆ ವೀರಶೈವೇತರ ಸಮುದಾಯದವರ ಯೋಗದಾನ ಬಹಳ ಮುಖ್ಯವಾಗಿದೆ’ ಎಂದು ಹೇಳಿದರು.

‘ನಾವು ನಮ್ಮ ಗತವನ್ನು ಚರಿತ್ರೆಯ ದೃಷ್ಟಿಯಿಂದ ನೋಡಿದ್ದೇವೆಯೇ ಹೊರತು ಚಾರಿತ್ರ್ಯದ ದೃಷ್ಟಿಯಿಂದ ನೋಡಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಆಧುನಿಕ ಸಂದರ್ಭದಲ್ಲಿ ಪುನರ್‌ವ್ಯಾಖ್ಯಾನ ಪ್ರಯತ್ನ ನಡೆದಿದೆ ನಿಜ. ಆದರೆ, ಸಮಾಧಾನಕರ ಸ್ಥಿತಿಯಲ್ಲಿ ಆಗಿಲ್ಲ. ಏಕೆಂದರೆ, ನಾವು ಚಾರಿತ್ರ್ಯ ಪರಂಪರೆಯನ್ನು ಬಿಟ್ಟು ಚರಿತ್ರೆಯ ಪರಂಪರೆಯಲ್ಲಿ ಸಿಲುಕಿಕೊಂಡಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಭಕ್ತಿ ಸಂತರು ಭಾರತದ ಅತ್ಯಂತ ಶ್ರೇಷ್ಠ ಸಮನ್ವಯಕಾರರು. ಗುರು ಪಂಪರೆಯಲ್ಲಿ ಜಾತಿ ಸೂಚಕಗಳಿಲ್ಲ.‌ ಅದಿರುವುದು ಆಚಾರ್ಯ ಪರಂಪರೆಯಲ್ಲಿ. ಅದರಿಂದ ಬಿಡಿಸಿಕೊಂಡು ಗುರು ಪರಂಪರೆಯತ್ತ ಹೋಗಬೇಕಾದ ಅಗತ್ಯವಿದೆ. ಅದು ಜಾತೀಯತೆಯನ್ನು ನಿರಾಕರಿಸುವ ಸಂಸ್ಕೃತಿಯೂ ಹೌದು’ ಎಂದು ತಿಳಿಸಿದರು.

ತೂತು ಬಿದ್ದ ಚೀಲದಲ್ಲಿ:

ಅಧ್ಯಕ್ಷತೆ ವಹಿಸಿದ್ದ ಲೇಖಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಮಾತನಾಡಿ, ‘ನಾವಿಂದು ತೂತು ಬಿದ್ದ ಚೀಲದಲ್ಲಿ ವಚನಗಳನ್ನು ಹಾಕಿಕೊಂಡು ಓಡಾಡುತ್ತಿದ್ದೇವೆ. ಹೇಳಿದ್ದನ್ನೇ ಹೇಳುತ್ತಿದ್ದೇವೆ. ಪ್ರಶ್ನೆ ಕೇಳಿದರೆ ಸುಂಕ ಕೊಡಬೇಕು. ಎಂ.ಎಂ. ಕಲಬುರ್ಗಿ ಅಂಥವರು ಜೀವದ ಸಂಕುವನ್ನೇ ಕೊಟ್ಟರು. ಬಸವಣ್ಣ ಹೇಳಿದ್ದನ್ನು ಸ್ವಲ್ಪವಾದರೂ ಪಾಲಿಸದಿದ್ದರೆ, ನಮ್ಮದನ್ನಾಗಿ ಮಾಡಿಕೊಳ್ಳದಿದ್ದರೆ ಸಾಂಸ್ಕೃತಿಕ ನಾಯಕನನ್ನಾಗಿ ಮಾಡಿಕೊಂಡು ಏನು ಪ್ರಯೋಜನ?’ ಎಂದು ಕೇಳಿದರು.

‘ವಚನಗಳನ್ನು ನೇರವಾಗಿ ನೋಡಲು ಚರಿತ್ರೆಯೂ ಅಗತ್ಯವಾಗುತ್ತದೆ’ ಎಂದು ಶಿವಪ್ರಕಾಶ್ ಹೇಳಿಕೆಗೆ ಪ್ರತಿಕ್ರಿಯಿಸಿದರು.

‘ಬಸವಣ್ಣನನ್ನು ಕೋಟ್ ಮಾಡುವ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ‘ನುಡಿದರೆ ಚಾಕುವಿನಿಂದ ಚುಚ್ಚಿದಂತಿರಬೇಕು’ ಎಂಬಿತ್ಯಾದಿಯಾಗಿ ಮಾತನಾಡುತ್ತಾರೆ. ಅಂಥವರಿಗೆ ಬಾಯಿ ಮುಚ್ಕೊಂಡಿರಯ್ಯ ಎಂದು ಹೇಳುವ ಧೈರ್ಯ ನಮಗೇಕಿಲ್ಲ?’ ಎಂದು ಕೇಳಿದರು.

ಸಂಚಾಲಕ ಪ್ರೊ.ಎಚ್‌.ಎಸ್. ಉಮೇಶ್ ಆಶಯ ಭಾಷಣ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಹಾಗೂ ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು

‌‘ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ್ದಕ್ಕೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಬೇಕು. ಬಸವಣ್ಣನಿಗೆ ಕೊಟ್ಟ ಗೌರವ ಇತರ ಎಲ್ಲ ಶರಣರಿಗೂ ನೀಡಿದ್ದೇ ಆಗಿದೆ. ಯಾವ ಸರ್ಕಾರವೂ ಮಾಡದ ದೊಡ್ಡ ಕೆಲಸವನ್ನು ಈ ಸರ್ಕಾರ ಮಾಡಿದೆ’ ಎಂದು ಶಿವಪ್ರಕಾಶ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ್ದಕ್ಕೆ ರಾಜ್ಯ ಸರ್ಕಾರವನ್ನು ಅಭಿನಂದಿಸುವುದು ಸರಿ. ಆದರೆ, ಅದರಲ್ಲಿ ಅಪಾಯವೂ ಇದೆಯಲ್ಲವೇ? ಬಸವಣ್ಣನನ್ನು ಪ್ರಶ್ನಿಸುವುದು ಅಥವಾ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆಯಲ್ಲವೇ’ ಎಂದು ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT