ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಲಹೀನ ಆಗುತ್ತಿರುವ ಮಹಾಪ್ರಭು ಮೊಗದಲ್ಲಿ ಅತಂಕ ಗೋಚರ: ಪ್ರಕಾಶ್ ರೈ

Published 14 ಏಪ್ರಿಲ್ 2024, 9:02 IST
Last Updated 14 ಏಪ್ರಿಲ್ 2024, 9:02 IST
ಅಕ್ಷರ ಗಾತ್ರ

ಮೈಸೂರು: ‘ನಾನು ಬಲಶಾಲಿ ಅಲ್ಲ, ತುಂಬಾ ಬಲಹೀನ ಆಗುತ್ತಿದ್ದೇನೆ ಎನ್ನುವುದು ಗೊತ್ತಾಗಿರುವುದರಿಂದಲೇ ಮಹಾಪ್ರಭುವಿನ ಮುಖದಲ್ಲಿ ಆತಂಕ ಗೋಚರಿಸುತ್ತಿದೆ’ ಎಂದು ಖ್ಯಾತ ಚಿತ್ರ ನಟ ಪ್ರಕಾಶ್‌ ರೈ ಟೀಕಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಅಂಗವಾಗಿ ‘ಭಾರತ- ಸಂವಿಧಾನ-ಪ್ರಜಾಪ್ರಭುತ್ವದ ಉಳಿವಿಗಾಗಿ’ ದಲಿತ ಸಂಘರ್ಷ ಸಮಿತಿಯಿಂದ ಇಲ್ಲಿನ ಎಂ.ಜಿ. ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಭಾನುವಾರ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘400 ಸ್ಥಾನ ಗಳಿಸುತ್ತೇವೆ ಎನ್ನುತ್ತಾರೆ. ಅದು ಅವರ ನಂಬಿಕೆ ಅಲ್ಲ, ಭಯ. ತುಂಬಾ ವಿಶ್ವಾಸದಿಂದ ಮಾತನಾಡಿದಾಗ, ಪ್ರಶ್ನಿಸುವವರನ್ನು ಜೈಲಿಗೆ ಕಳುಹಿಸಿದಾಗ, ಇಡಿಯಿಂದ ದಾಳಿ ಮಾಡಿಸಿದಾಗ ಅವರು ಹೆದರಿದ್ದಾರೆ ಎನ್ನುವುದು ಗೊತ್ತಾಗುತ್ತದೆ’ ಎಂದು ವಾಗ್ದಾಳಿ ನಡೆಸಿದರು.

‘ಅವರನ್ನು ಮಹಾಪ್ರಭು ಎಂದೇಕೆ ಕರೆಯುತ್ತೇನೆಂದರೆ ಅದರ ಹಿಂದೊಂದು ಮರ್ಮವಿದೆ. ಅಂಬೇಡ್ಕರ್‌ ಸಂವಿಧಾನದ ಪ್ರಕಾರ, ಮಹಾಪ್ರಭು ಎನ್ನುವವರು ಇರಬಾರದು. ಆದರೆ, ಇವರು ಮಹಾಪ್ರಭು ರೀತಿ ಓಡಾಡುತ್ತಿದ್ದಾರೆ. ಮೈಸೂರಿನ ಮಹಾರಾಜರನ್ನು ನೋಡಲು ದಿಲ್ಲಿಯ ಮಹಾಪ್ರಭು ಬರುತ್ತಾರೆ. ಈ ಪ್ರಸಂಗ–ವಿನೋದ ನೋಡಲು ಜನರನ್ನು ಕರೆತರಲು ಸಾಕಷ್ಟು ಬಸ್‌ಗಳು ಓಡಾಡಿದವು. ಆದರೆ, ಕೋವಿಡ್ ಸಂಕಷ್ಟ ಕಾಲದಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರಿಗೇಕೆ ಒಂದು ಬಸ್‌ ಕೂಡ ಓಡಿಸಲಿಲ್ಲ ಎಂದು ನಾವೆಲ್ಲರೂ ಕೇಳಬೇಕು’ ಎಂದರು.

‘ಅರೆನಿರ್ವಾಣದ ಗಾಂಧಿ ಸಂತ. ಇವರು ಫುಲ್ ಕಾಸ್ಟೂಮ್‌’ ಎಂದು ಟೀಕಿಸಿದರು.

‘ಮಹಾಪ್ರಭುವಿನ ದಿಲ್ಲಿಯ ಆಸ್ಥಾನಕ್ಕೆ ಬೇಕಿರುವುದು ವಿದೂಷಕರೇ. ಹೋದ ಚುನಾವಣೆಯಲ್ಲಿ ರಾಜ್ಯದಿಂದ ಆಯ್ಕೆಯಾದ 27 ಮಂದಿ ಕೂಡ ವಿದೂಷಕರು. ಈ ವಿದೂಷಕರು ಬರ ಪರಿಹಾರ ಮೊದಲಾದವುಗಳ ಬಗ್ಗೆ ಮಾತನಾಡುವುದಿಲ್ಲ. ಈಗ ಮಹಾಪ್ರಭು ಮೈಸೂರಿನ ಮಹಾರಾಜರನ್ನೂ ವಿದೂಷಕರನ್ನಾಗಿಸಲು ಹೊರಟಿದ್ದಾರೆ. ಅವರೇಕೆ ಒಪ್ಪಿಕೊಂಡರೋ ನಮಗೆ ಗೊತ್ತಿಲ್ಲ. ಆದರೆ, ಅವರನ್ನು ತಡೆಯುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

‘ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ಹಾದಿ ತಪ್ಪಿದ್ದಾರೆ ಎಂದು ಕುಮಾರಣ್ಣ ಹೇಳಿಕೆ ನೀಡಿದ್ದಾರೆ. ನೀವು ದಾರಿ ತಪ್ಪಿ ಎಷ್ಟು ವರ್ಷವಾಯಿತು? ಎಲ್ಲಿ ಓಡಾಡಿಕೊಂಡಿದ್ದೀರಿ, ಇನ್ನೂ ಒಂದ್ಕಡೆ ಸೇರಿಕೊಂಡಿಲ್ಲವಲ್ಲ?’ ಎಂದು ವ್ಯಂಗ್ಯವಾಗಿ ಕೇಳಿದರು.

‘ನೆನ್ನೆ ಮೊನ್ನೆವರೆಗೂ ಬಾಯಿಗೆ ಬಂದಂತೆ ಉಗಿದಿರಲ್ಲವೇ? ಅಪ್ಪ–ಮಗ, ಕುಟುಂಬ, ಪರಿಹಾರ ಎಂದೆಲ್ಲಾ ಮಾತನಾಡಿದರಲ್ಲವೇ? ಚುನಾವಣೆ ಸಂದರ್ಭದಲ್ಲಿ ಅವರನ್ನೇ ತಬ್ಬಿಕೊಂಡು, ನೆಕ್ಕಿಕೊಂಡು ಕುಳಿತಿದ್ದೀರಲ್ಲಾ ನಾಚಿಕೆ ಆಗುವುದಿಲ್ಲವೇ?’ ಎಂದು ಕೇಳಿದರು. ಉಗಿದವನಿಗೂ ನಾಚಿಕೆ ಇಲ್ಲ, ಉಗಿಸಿಕೊಂಡವನಿಗೂ ಇಲ್ಲ. ನಮಗೆ ನೋಡಲು ಆಗುತ್ತಿಲ್ಲ’ ಎಂದರು.

‘ಮಹಾಪ್ರಭುವಿನ ಆಳ್ವಿಕೆ ಪ್ರಾಕೃತಿಕ ನ್ಯಾಯವಲ್ಲ. ಇದು ಅಮಾನವೀಯವಾದುದು. ಇದಕ್ಕೆ ನಾವು ಮೋಸ ಹೋಗಬಾರದು. ದೇಶದಲ್ಲಿ ಬದಲಾವಣೆ ವಿರೋಧ ಪಕ್ಷದಿಂದ ಸಾಧ್ಯವಿಲ್ಲ. ಆಳುವ ಪಕ್ಷದಿಂದಲೂ ಆಗುತ್ತಿಲ್ಲ. ನಮ್ಮಿಂದ ಮಾತ್ರವೇ ಬದಲಾವಣೆ ಸಾಧ್ಯ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕು. ಮೊದಲು, ಈ ಕೊರೊನಾ ಸೋಂಕನ್ನು ಕೆಳಗಿಳಿಸೋಣ’ ಎಂದು ಕರೆ ನೀಡಿದರು.

‘ಮಹಾಪ್ರಭು ಸ್ಥಾವರ; ನಾವೆಲ್ಲರೂ ಜಂಗಮರಾಗಬೇಕು. ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ. ಆದ್ದರಿಂದ ಅಂಬೇಡ್ಕರ್‌ ಉಳಿಸಿಕೊಂಡರೆ ಮಾತ್ರ ನಾವು ಉಸಿರಾಡಲು ಸಾಧ್ಯ. ನಮ್ಮ ಅಂಬೇಡ್ಕರ್, ಮಾನವೀಯ ಮೌಲ್ಯ ಮತ್ತು ಸಂವಿಧಾನವನ್ನು ಉಳಿಸಿಕೊಳ್ಳಬೇಕು. ಯಾವಾಗಲೂ ವಿರೋಧ ಪಕ್ಷವಾಗಿರೋಣ. ಯಾರೇ ಬಂದರೂ ಪ್ರಶ್ನಿಸೋಣ’ ಎಂದು ಕರೆ ನೀಡಿದರು.

‘ಸಂವಿಧಾನವನ್ನು ಅಂಬೇಡ್ಕರ್‌ ಅಲ್ಲದೇ ಬೇರೆ ಯಾರಾದರೂ ರಚಿಸಿದ್ದರೆ ಏನಾಗುತ್ತಿತ್ತು? ಸಂವಿಧಾನದ ಪೀಠಿಕೆಯಲ್ಲಿನ ಆಶಯಗಳು ಕಾನೂನಲ್ಲ. ಅವಮಾನಕ್ಕೆ, ಹಸಿವಿಗೆ ಹುಟ್ಟಿದ್ದದು. ಧಾರ್ಮಿಕ ಕ್ರೌರ್ಯದ ಪರಿಣಾಮಕ್ಕೆ ಹುಟ್ಟಿದ್ದದು. ಸಂವಿಧಾನವನ್ನು ನಾವು ಕೊಂಡಾಡಬೇಕು, ಸಂಭ್ರಮಿಸಬೇಕು ನಿಜ. ಆದರೆ, ಕಾಲ ಹಾಗಿಲ್ಲ. ಅದನ್ನು ಉಳಿಸಿಕೊಳ್ಳಬೇಕಾದ ಸ್ಥಿತಿಗೆ ನಾವು ಬಂದಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT