ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಪೆರೆದ ಹದ ಮಳೆ; ಮಂಡ್ಯದಲ್ಲಿ ‘ರೆಡ್‌ ಅಲರ್ಟ್‌’

Published 14 ಮೇ 2024, 15:29 IST
Last Updated 14 ಮೇ 2024, 15:29 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸೋಮವಾರ ತಡರಾತ್ರಿಯಿಂದ ಮಂಗಳವಾರ ಮುಂಜಾನೆವರೆಗೂ ಸುರಿದ ಹದವಾದ ಮಳೆಯು ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ ಜನರಿಗೆ ತಂಪೆರೆಯಿತು.

ಮಂಡ್ಯದ ಫ್ಯಾಕ್ಟರಿ ವೃತ್ತದ ಸಮೀಪ ಬಿರುಗಾಳಿ, ಮಳೆ ವೇಳೆ ಬೆಂಗಳೂರಿನಿಂದ ಮೈಸೂರಿನತ್ತ ತೆರಳುತ್ತಿದ್ದ ಮೆಮೊ ರೈಲು ಎಂಜಿನ್‌ ಮೇಲೆ ಮರದ ರೆಂಬೆ ಬಿದ್ದು ಲೋಕೊಪೈಲಟ್‌ ಎಂ.ಎನ್. ಪ್ರಸಾದ್ ಗಾಯಗೊಂಡರು.

ವೇಗವಾಗಿ ಚಲಸುತ್ತಿದ್ದಾಗ ರೈಲಿನ ಎಂಜಿನ್‌ ಮೇಲೆ ಮರದ ಕೊಂಬೆ ಮುರಿದು ಬಿದ್ದಿದೆ. ಇದರಿಂದ ಎಂಜಿನ್‌ನ ಮುಂದಿನ ಗಾಜಿನ ಚೂರುಗಳು ಪುಡಿಪುಡಿಯಾಗಿ ಪ್ರಸಾದ್‌ ಅವರತ್ತ ಬಡಿದಿವೆ. ಮುಖ ಹಾಗೂ ತಲೆಗೆ ಗಾಯಗಳಾಗಿದ್ದರೂ ಅವರು ರೈಲು ಗಾಡಿಯನ್ನು ನಗರದ ನಿಲ್ದಾಣದವರೆಗೆ ತಂದು ನಿಲ್ಲಿಸಿದ್ದಾರೆ.

ರೈಲು ನಿಲ್ದಾಣದಲ್ಲಿ ಸಿಬ್ಬಂದಿ ಪ್ರಸಾದ್‌ ಅವರನ್ನು ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮತ್ತೊಬ್ಬ ಲೋಕೊ ಪೈಲಟ್‌ ರೈಲು ಚಲಾಯಿಸಿಕೊಂಡು ಹೋಗಿದ್ದಾರೆ. ಘಟನೆ ನಡೆದಾಗ ರೈಲಿನಲ್ಲಿ 500 ಮಂದಿ ಪ್ರಯಾಣಿಕರಿದ್ದರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದರು. ರೈಲು ನಿಲ್ದಾಣದ ಪೊಲೀಸ್‌ ಉಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿಯಿಡೀ ಧಾರಾಕಾರ ಮಳೆಯಾಗಿದೆ. ಸಂಜೆ ಆರಂಭವಾದ ಮಳೆ ಮಂಗಳವಾರ ಬೆಳಿಗ್ಗೆ 6 ಗಂಟೆಯಾದರೂ ಸುರಿಯುತ್ತಲೇ ಇತ್ತು. ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ ಸರಾಸರಿ 3.17 ಸೆಂ.ಮೀ. ಮಳೆಯಾಗಿದೆ.

ಸೋಮವಾರ ರಾತ್ರಿ ಶ್ರೀರಂಗಪಟ್ಟಣ ತಾಲ್ಲೂಕಿನ ಹೊಸಹಳ್ಳಿ, ಕೆ.ಆರ್. ಪೇಟೆ ತಾಲ್ಲೂಕಿನ ಹರಳಹಳ್ಳಿ ಹಾಗೂ ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿಯಲ್ಲಿ ತಲಾ 12 ಸೆಂ.ಮೀ. ಮಳೆ ಬಿದ್ದಿದೆ. ಶ್ರೀರಂಗಪಟ್ಟಣದ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ರಸ್ತೆ ಜಲಾವೃತವಾಗಿದ್ದ ಕಾರಣ ಮಂಗಳವಾರ ಬೆಳಿಗ್ಗೆ ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು. ಜಿಲ್ಲೆಯಲ್ಲಿ ಜೋರು ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನಲ್ಲಿ ಮಂಗಳವಾರ ಸಂಜೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿಯಿತು. ಕೊಡಗು ಜಿಲ್ಲೆಯ ಬಹುತೇಕ ಕಡೆ ಸೋಮವಾರ ತಡರಾತ್ರಿ ಸಾಧಾರಣ ಮಳೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT