ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಎಂಎಫ್‌ ಇತಿಹಾಸದಲ್ಲೇ ದಾಖಲೆ ಹಾಲು ಸಂಗ್ರಹ: ಎಂಡಿ

Published 1 ಜೂನ್ 2024, 14:35 IST
Last Updated 1 ಜೂನ್ 2024, 14:35 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯದಲ್ಲಿ ಶುಕ್ರವಾರ ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಳಿ) ಇತಿಹಾಸದಲ್ಲೇ ಅತಿ ಹೆಚ್ಚು, ಅಂದರೆ 94.26 ಲಕ್ಷ ಕೆ.ಜಿ. ಹಾಲು ಶೇಖರಿಸಿ ದಾಖಲೆ ಬರೆದಿದ್ದೇವೆ. ಸದ್ಯದಲ್ಲೇ ಇದು ಒಂದು ಕೋಟಿ ಕೆ.ಜಿ.ಗೆ ಏರಿಕೆಯಾಗುವ ವಿಶ್ವಾಸವಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ತಿಳಿಸಿದರು.

ಇಲ್ಲಿ ಶನಿವಾರ ವಿಶ್ವ ಹಾಲು ದಿನದ ಅಂಗವಾಗಿ ಆಯೋಜಿಸಿದ್ದ ಬೈಕ್‌ ರ‍್ಯಾಲಿ ವೇಳೆ ಅವರು ಮಾತನಾಡಿ, ‘ಈ ಬಾರಿ ಬೇಸಿಗೆಯಲ್ಲೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಾಲು, ಮೊಸರು ಹಾಗೂ ಮಜ್ಜಿಗೆ ಉತ್ಪನ್ನಗಳನ್ನು ನೀಡಿದ್ದೇವೆ. ವಿಶೇಷವಾಗಿ ಗರಿಷ್ಠ 39 ಸಾವಿರ ಲೀಟರ್ ಐಸ್‌ಕ್ರೀಂ ಮಾರಿದ್ದೇವೆ. ಕಳೆದ ವರ್ಷ 16 ಸಾವಿರ ಲೀಟರ್ ಮಾರಾಟವಾಗಿತ್ತು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿರುವುದರಿಂದ, ಮುಂಬೈನಲ್ಲೂ ಪ್ರತಿ ನಿತ್ಯ 2 ಲಕ್ಷ ಲೀಟರ್ ಮಾರಾಟಕ್ಕೆ ಕ್ರಮ ವಹಿಸಲಾಗಿದೆ. ಅಲ್ಲಿ ಇನ್ನೂ ಒಂದು ಲಕ್ಷ ಹೆಚ್ಚಿಸಲು ಯೋಜಿಸಲಾಗಿದೆ. ತಮಿಳುನಾಡಿನ ಚೆನ್ನೈ ಮಾರುಕಟ್ಟೆಯಲ್ಲಿ 35 ಸಾವಿರ ಲೀಟರ್ ಹಾಲನ್ನು ಪ್ರತಿದಿನ ಮಾರಾಟ ಮಾಡಲಾಗುತ್ತಿದೆ. ಅಲ್ಲೂ ಹೆಚ್ಚುವರಿಯಾಗಿ ಒಂದು ಲಕ್ಷ ಲೀಟರ್ ಮಾರಾಟಕ್ಕೆ ಕ್ರಮ ವಹಿಸಲಾಗಿದೆ. ಬಿಎಸ್‌ಎನ್‌ಎಲ್ ಸಹಯೋಗದೊಂದಿಗೆ 16 ‘ನಂದಿನಿ ಪಾರ್ಲರ್’ ಸ್ಥಾಪಿಸುವ ಬಗ್ಗೆ ಮಾತುಕತೆ ನಡೆದಿದೆ’ ಎಂದು ಮಾಹಿತಿ ನೀಡಿದರು.

‘ಹಾಲು ಪೂರೈಸುವ ರೈತರಿಗೆ ನಿಗದಿತ ಅವಧಿಯಲ್ಲಿ ಹಣ ಬಿಡುಗಡೆಗೆ ಕ್ರಮ ವಹಿಸಿದ್ದೇವೆ. ಪ್ರತಿ ‘ನಂದಿನಿ ಪಾರ್ಲರ್‌’ಗಳಲ್ಲೂ ಕೆಎಂಎಫ್‌ನ ಉತ್ಪನ್ನಗಳು ಸಿಗುವಂತೆ ಮಾಡಲಾಗಿದೆ. ಅಲ್ಲಿ ಅನ್ಯ ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಲು ವಿಚಕ್ಷಣಾ ತಂಡಗಳ ಮೂಲಕ ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT