ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಕೃತಿ, ಮನುಷ್ಯ ಸಂಬಂಧ ಮರುಸ್ಥಾಪಿಸಿ: ಚಿಂತಕ ಶಂಕರ್ ದೇವನೂರು

ಮಹಿಳಾ ದಿನಾಚರಣೆ; ಎನ್.ಕೆ. ಲೋಲಾಕ್ಷಿ ಅವರ ದೃಶ್ಯಕಾವ್ಯ ಬಿಡುಗಡೆ
Published 5 ಏಪ್ರಿಲ್ 2024, 6:22 IST
Last Updated 5 ಏಪ್ರಿಲ್ 2024, 6:22 IST
ಅಕ್ಷರ ಗಾತ್ರ

ಮೈಸೂರು: ‘ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಯಾಂತ್ರಿಕ ನಾಗರಿಕತೆ ಮತ್ತು ಅಭಿವೃದ್ಧಿ‌ಯ ಓಟ ಕಡಿತಗೊಳಿಸುತ್ತಿದೆ’ ಎಂದು ಸಂಸ್ಕೃತಿ ಚಿಂತಕ ಶಂಕರ್ ದೇವನೂರು ವಿಷಾದ ವ್ಯಕ್ತಪಡಿಸಿದರು.

ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಹಾಗೂ ಅಸ್ತಿತ್ವ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಗುರುವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಎನ್.ಕೆ. ಲೋಲಾಕ್ಷಿ ಅವರ ದೃಶ್ಯಕಾವ್ಯ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ನಿಸರ್ಗದ ಮಹತ್ವ ಅರಿಯಲು ಜನರು ವಿಫಲರಾಗಿದ್ದಾರೆ. ಯಾಂತ್ರಿಕ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾ ಆರ್ಥಿಕ ಅವಿವೇಕತನದಲ್ಲಿ ಬದುಕುತ್ತಿರುವುದು ದುರಂತ. ಸಂತರು, ಶರಣರು ತಮ್ಮ ಬದುಕನ್ನು ನಿಸರ್ಗದೊಂದಿಗೆ ಏಕೀಕರಿಸಿಕೊಂಡಿದ್ದರು. ಇಂದು ನಮ್ಮ ಬದುಕು ಪ್ರಕೃತಿ ವಿರುದ್ಧವಾಗಿದೆ. ಕಾಡು-ಮೇಡು, ವನ್ಯಪ್ರಾಣಿಗಳು ಇರುವ ತನಕ ಈ ಭೂಮಿ ಮನುಷ್ಯನಿಗೆ ಆಶ್ರಯವನ್ನು ನೀಡಬಲ್ಲದು’ ಎಂದರು.

‘ನಿಸರ್ಗ ನಮ್ಮೆಲ್ಲರ ಬದುಕಿನ ವ್ಯಕ್ತಿತ್ವದ ವಿಸ್ತಾರ. ಹುಟ್ಟುತ್ತ ಮಾನವ, ಬೆಳೆಯುತ್ತ ಸಾಧಕನಾಗಿ ಕೊನೆಯಲ್ಲಿ ಇತರರಿಗೆ ಬೆಳಕಾಗಬೇಕು. ಇದು ಭಗವಂತ ಮನುಷ್ಯನಿಗೆ ಕೊಟ್ಟಿರುವ ಮಹತ್ವದ ಸಂದೇಶ’ ಎಂದು ಹೇಳಿದರು.

ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲ ಬಿ.ವಿ. ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಟಿ ಅಖಿಲಾ ತಾಂಡೂರು ದೃಶ್ಯಕಾವ್ಯ ಬಿಡುಗಡೆ ಮಾಡಿದರು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕಚೇರಿ ಪೊಲೀಸ್ ಸೂಪರಿಂಟೆಂಡೆಂಟ್‌ ಬಿ.ಟಿ.ಕವಿತಾ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎನ್.ಕೆ. ಲೋಲಾಕ್ಷಿ ವಿಶೇಷ ಉಪನ್ಯಾಸ ನೀಡಿದರು. ಗಾಯಕ ಅಮ್ಮ ರಾಮಚಂದ್ರ ಅವರು ಗಾಯನ ಪ್ರಸ್ತುತ ಪಡಿಸಿದರು. ವೇದಿಕೆ ಅಧ್ಯಾಪಕ ಕಾರ್ಯದರ್ಶಿ ಎಂ.ನಂಜುಂಡಯ್ಯ, ಖಜಾಂಚಿ ಅಶ್ವಿನಿ, ವಿದ್ಯಾರ್ಥಿ ಘಟಕದ ಅಧ್ಯಕ್ಷೆ ರಕ್ಷಿತಾ, ಕಾರ್ಯದರ್ಶಿ ಜೆ.ಎಸ್.ಜೇನುಶ್ರೀ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT