ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾರಂಪರಿಕ ಪೂರ್ಣಯ್ಯ ನಾಲೆ ಉಳಿವಿಗೆ ‘ಜನಾಗ್ರಹ’

Published 7 ಡಿಸೆಂಬರ್ 2023, 4:50 IST
Last Updated 7 ಡಿಸೆಂಬರ್ 2023, 4:50 IST
ಅಕ್ಷರ ಗಾತ್ರ

ಮೈಸೂರು: ಪಾರಂಪರಿಕ ಪೂರ್ಣಯ್ಯ ನಾಲೆ ಉಳಿಸಲು, ಒತ್ತುವರಿ ತೆರವಿಗೆ ಜನಾಗ್ರಹ ಚಳವಳಿ ರೂಪಿಸಲು ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಪತ್ರ ಬರೆಯಲು ಮೈಸೂರು ನಾಗರಿಕರು, ಪರಿಸರ ತಜ್ಞರು ಒಕ್ಕೊರಲ ನಿರ್ಧಾರ ಕೈಗೊಂಡರು.

‘ಪ್ರಜಾವಾಣಿ’ಯು ಆರಂಭಿಸಿದ ‘ಪೂರ್ಣಯ್ಯ ನಾಲೆಗೆ ಸಂಚಕಾರ’ ಸರಣಿ ವರದಿಗಳ ಪರಿಣಾಮ ಯಾದವಗಿರಿಯ ‘ಮೈಸೂರು ಗ್ರಾಹಕರ ಪರಿಷತ್‌’ನಲ್ಲಿ ಬುಧವಾರ ನಡೆದ ದುಂಡು ಮೇಜಿನ ಸಭೆಯಲ್ಲಿ ನಾಲೆ ಉಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿ‌ಸ್ತೃತ ಚರ್ಚೆ ನಡೆಯಿತು.

ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಿನ ದಿನಗಳಲ್ಲಿ ‘ಜನಾಗ್ರಹ’ ನಡೆಸಲು ನಿರ್ಧರಿಸಲಾಯಿತು.

ಶಾಲಾ–ಕಾಲೇಜು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಕುಕ್ಕರಹಳ್ಳಿ ಕೆರೆ ವಾಯುವಿಹಾರಿಗಳಿಗೆ ನಾಲೆಯ ಮಹತ್ವ ತಿಳಿಸಲು ಕಾರ್ಯಾಗಾರ ನಡೆಸಲು ಪರಿಸರ ತಜ್ಞ ಯು.ಎನ್‌.ರವಿಕುಮಾರ್ ಸಲಹೆ ನೀಡಿದರೆ, ಗ್ರಾಹಕರ ಪರಿಷತ್‌ನ ಭಾಮಿ ವಿ. ಶೆಣೈ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಪತ್ರ ಬರೆಯುವುದು, ನಾಗರಿಕರೊಂದಿಗೆ ಜನಪ್ರತಿನಿಧಿಗಳೂ ಹೋರಾಟದಲ್ಲಿ ಭಾಗಿಯಾಗಬೇಕೆಂದು ಹೇಳಿದರು.

ನಾಲೆ ಒತ್ತುವರಿಯಾಗಿರುವ ಬಡಾವಣೆ ನಿವಾಸಿಗಳಲ್ಲಿ ಪೂರ್ಣಯ್ಯ ಕಾಲುವೆಯ ಮಹತ್ವ ಹೇಳಲು ‘ನಾಲಾ ಹಬ್ಬ’ ಆಚರಿಸಿ, ಜಾಗೃತಿಯನ್ನು ಮೂಡಿಸುವ ಬಗೆಯನ್ನು ಪರಿಷತ್‌ ಸದಸ್ಯರು ಪ್ರತಿಪಾದಿಸಿದರು.

ಅಂತರ್ಜಲಕ್ಕಾಗಿ ಉಳಿಸಬೇಕು

‘ಮೈಸೂರಿನ ವಿಜಯನಗರ ಸೇರಿದಂತೆ ಪಶ್ಚಿಮ ಭಾಗದಲ್ಲಿ ಅಂತರ್ಜಲ ಪ್ರಮಾಣ ಕಡಿಮೆ. ಮುಂದೊಂದು ದಿನ ಕಾವೇರಿ ನೀರು ಬರದಿದ್ದರೆ ಈ ಭಾಗದಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ’ ಎಂದು ಯು.ಎನ್‌.ರವಿಕುಮಾರ್ ಹೇಳಿದರು.

‘ಕಾವೇರಿ ಹಾಗೂ ಕಬಿನಿ ಜಲಾಯನ ಪ್ರದೇಶವನ್ನು ಪ್ರತ್ಯೇಕಿಸುವ ಎತ್ತರದ ಭೂಸ್ವರೂಪವನ್ನು ಆಧರಿಸಿ ಪೂರ್ಣಯ್ಯ ನಾಲೆ ನಿರ್ಮಿಸಲಾಗಿದೆ. ಹುಯಿಲಾಳು ಕೆರೆ, ಮಾದಗಹಳ್ಳಿ ಕೆರೆ ಸೇರಿದಂತೆ ಆರು ಕೆರೆಗಳ ಕೋಡಿ ನೀರು ಸೇರಿದಂತೆ ಮಳೆ ನೀರನ್ನು ಕುಕ್ಕರಹಳ್ಳಿ ಕೆರೆಗೆ ತರುತ್ತಿತ್ತು’ ಎಂದು ಬೆಳಕು ಚೆಲ್ಲಿದರು. 

‘ಮಾದಗಳ್ಳಿ ಕೆರೆಯಲ್ಲಿ 150 ವರ್ಷದ ಹಿಂದೆ ನಾಲೆಗೆ ಮಾಡಿದ್ದ ಕೋಡಿ ಗೇಟ್‌ ಇದ್ದು, ಅದನ್ನು ಪಾರಂಪರಿಕ ಸ್ಥಳವಾಗಿ ರಕ್ಷಣೆ ಮಾಡಬೇಕು. ಉದ್ಯಾನ ನಿರ್ಮಿಸಬೇಕು. ಮರಟಿಕ್ಯಾತನಹಳ್ಳಿ ವರೆಗೆ ನಾಲೆಯನ್ನು ರಕ್ಷಣೆ ಮಾಡಬೇಕು. ಬೆಂಗಳೂರಿನಲ್ಲಿ ಪ್ರವಾಹವಾದ ನಂತರ ರಾಜಕಾಲುವೆ ರಕ್ಷಣೆ ಮಾಡಲಾಯಿತು. ಮೈಸೂರಿನ ಮಹಾರಾಜಕಾಲುವೆಯಾದ ಪೂರ್ಣಯ್ಯ ನಾಲೆಯನ್ನು ಕಾಪಾಡಬೇಕು’ ಎಂದರು.

‘ಕುಕ್ಕರಹಳ್ಳಿ ಕೆರೆಯಿಂದ ಎಸ್‌ಜೆಸಿಇ ಕಾಲೇಜಿನ ಹಿಂಭಾಗದವರೆಗಿನ 2.5 ಕಿಮೀ ನಾಲೆಯನ್ನು ಉಳಿಸಿದರೆ, ಕೆರೆಗೆ ಶೇ 30ರಷ್ಟು ಶುದ್ಧ ನೀರು ದೊರೆಯಲಿದೆ. 20 ಎಕರೆ ಹಸಿರು ಪಟ್ಟಿ ನಿರ್ಮಾಣವಾಗಲಿದೆ’ ಎಂದು ತಿಳಿಸಿದರು.

ಪರಿಸರ ತಜ್ಞ ಶೈಲಜೇಶ್‌ ಮಾತನಾಡಿ, ‘ಕುಕ್ಕರಹಳ್ಳಿ ಕೆರೆಗೆ 2 ಸಾವಿರ ವಾಯುವಿಹಾರಿಗಳು ಬರುತ್ತಾರೆ. ಕಾಳಜಿ ಇರುವವರನ್ನು ಒಳಗೊಂಡಂತೆ ಹೋರಾಟ ರೂಪಿಸಬೇಕು. ಕೆರೆಗೆ ಮಲಿನ ನೀರು ಸೇರುತ್ತಿದ್ದಾಗ, ಮೀನುಗಳ ಸಾವಾದಾಗ ನಡೆದ ಸಹಿ ಸಂಗ್ರಹ ಅಭಿಯಾನ ಗಮನ ಸೆಳೆದಿತ್ತು’ ಎಂದು ಸ್ಮರಿಸಿದರು.

‘ರೈಲ್ವೆ ಬಡಾವಣೆ, ಎಸ್‌ಬಿಎಂ ಬಡಾವಣೆ, ರೂಪಾನಗರ ಸೇರಿದಂತೆ ನಾಲೆ ಇರುವ ಜಾಗದಲ್ಲಿ ಜನ ಚಳವಳಿ ನಡೆಸಬೇಕು. ರಾಜಕಾರಣಿಗಳ ಬೆಂಬಲವೂ ಬೇಕು. ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ನ್ಯಾಯಾಲಯ, ಲೋಕಾಯುಕ್ತ, ಹಸಿರು ನ್ಯಾಯಮಂಡಳಿಗೂ ಸಲ್ಲಿಸಬೇಕು’ ಎಂದು ಗ್ರಾಹಕ ಪರಿಷತ್ತಿನ ಭಾಮಿ ವಿ.ಶೆಣೈ ಪ್ರತಿಪಾದಿಸಿದರು.

‘ಪೀಪಲ್ಸ್‌ ಪಾರ್ಕ್‌ನ ಮರಗಳನ್ನು ಉಳಿಸಲು ಚಳವಳಿ ನಡೆಸಿದಾದ ಜಿ.ಟಿ.ದೇವೇಗೌಡ ಸೇರಿದಂತೆ ರಾಜಕಾರಣಿಗಳು ಬಂದಿದ್ದರು’ ಎಂದು ಉದಾಹರಿಸಿದರು. 

‘ಲಿಬಿಯಾದಂಥ ಮರುಭೂಮಿಯಲ್ಲಿ ದಿಢೀರ್‌ ಪ್ರವಾಹ ಉಂಟಾಗಿತ್ತು. ಅದೇ ಮಾದರಿಯ ಪ್ರವಾಹ ಮೈಸೂರಿಗೂ ಬರಬಹುದು. ಬೋಗಾದಿಯ ರಿಂಗ್‌ರಸ್ತೆ ಜಂಕ್ಷನ್‌ನಲ್ಲಿ ನಾಲ್ಕು ದಿನ ಜೋರು ಮಳೆ ಬಂದರೆ ಸೊಂಟಮಟ್ಟ ನೀರು ನಿಲ್ಲುತ್ತದೆ’ ಎಂದು ತಿಳಿಸಿದರು.

ರೈಲ್ವೆ ಬಡಾವಣೆಯ ನಿವಾಸಿ ಹರೀಶ್‌ ಮಾತನಾಡಿ, ‘ನಮ್ಮ ಭಾಗದಲ್ಲಿ ನಾಲೆಯನ್ನೇ ರಸ್ತೆ ಮಾಡಲಾಗಿದೆ. ನಿವಾಸಿಗಳು ಕಾಲುವೆ ಉಳಿವಿಗೆ ಹೋರಾಟ ನಡೆಸಲಿದ್ದಾರೆ’ ಎಂದರು. ಅದಕ್ಕೆ ಎಸ್‌ಬಿಎಂ ಬಡಾವಣೆಯ ಜಯರಾಂ ಹಾಗೂ ಶ್ರೀಪತಿ ದನಿಗೂಡಿಸಿದರು.

ಗ್ರಾಹಕ ಪರಿಷತ್‌ ಕಾರ್ಯಾಧ್ಯಕ್ಷೆ ಶೋಭಾನಾ, ಸರಸ್ವತಿಪುರಂ ನಿವಾಸಿ ವಿಶ್ವನಾಥ್‌, ರೈಲ್ವೆ ಬಡಾವಣೆ ನಿವಾಸಿ ಡಾ.ಗಂಗಾಧರ ಗೌಡ, ಶ್ರೀಮತಿ ಕರುಂಬಯ್ಯ ಇದ್ದರು.

ಸಭೆಯ ನಿರ್ಣಯಗಳು

  • ಕುಕ್ಕರಹಳ್ಳಿ ಕೆರೆಯಲ್ಲಿ ಜನಜಾಗೃತಿ ನಡೆಸುವುದು

  • ನಾಲೆಯಿರುವ ಜಾಗದಲ್ಲಿ ನಾಲೆ ಹಬ್ಬ ಆಚರಣೆ

  • ಮಹಾರಾಜಕಾಲುವೆ ಮಧ್ಯೆ ಇಳಿದು ರಕ್ಷಣೆಗೆ ಒತ್ತಾಯಿಸಿ ಪ್ರತಿಭಟನೆ

  • ವಿದ್ಯಾರ್ಥಿಗಳು ನಾಗರಿಕರಲ್ಲಿ ಜಾಗೃತಿ ಹಾಗೂ ಕಾರ್ಯಾಗಾರ

  • ಪ್ರತಿ ಶನಿವಾರ ಜನರೊಂದಿಗೆ ಸಭೆ ಸಂವಾದ ವಿಚಾರ ಸಂಕಿರಣ ನಡೆಸುವುದು

  • ನಾಲೆ ಉಳಿವಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಲೋಕಾಯುಕ್ತ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದು

ಕಾಲುವೆ ಕೆರೆ ಮೇಲೆ ಕಟ್ಟಲಾಗಿದ್ದ ಸಾವಿರಾರು ಕೋಟಿ ಮೌಲ್ಯದ ಬಹುಮಹಡಿ ಕಟ್ಟಡಗಳನ್ನು ದೆಹಲಿ ಕೊಚ್ಚಿಯಲ್ಲಿ ಕೆಡವಲಾಗಿದೆ. ಅದೇ ಸ್ಪೂರ್ತಿಯಾಗಬೇಕು.
ಭಾಮಿ ವಿ. ಶೆಣೈ, ಮೈಸೂರು ಗ್ರಾಹಕ ಪರಿಷತ್ತು
ಪ್ರತಿ ಬಡಾವಣೆಯ ನಿವಾಸಿಗಳು ಪೂರ್ಣಯ್ಯ ನಾಲೆ ಹಬ್ಬ ಆಚರಿಸಲಿದ್ದಾರೆ. ಪರಂಪರೆಯನ್ನು ಉಳಿಸಲು ತೀರ್ಮಾನಿಸಿದ್ದಾರೆ.
ಯು.ಎನ್‌.ರವಿಕುಮಾರ್, ಪರಿಸರ ತಜ್ಞ
ನಾಲೆ ಹಾದುಹೋಗಿರುವೆಡೆ ಆಗಿರುವ ಒತ್ತುವರಿ ಬಗ್ಗೆ ಬಡಾವಣೆಗಳ ನಿವಾಸಿಗಳಿಗೂ ಗೊತ್ತಿದೆ. ಅವರೂ ಹೋರಾಟ ನಡೆಸಲಿದ್ದಾರೆ
ಹರೀಶ್‌, ರೈಲ್ವೆ ಬಡಾವಣೆ ನಿವಾಸಿ
ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಸೇರಿದಂತೆ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ನಾಲೆ ಒತ್ತುವರಿ ತೆರವುಗೊಳಿಸಬೇಕು.
ಶ್ರೀಪತಿ, ಎಸ್‌ಬಿಎಂ ಬಡಾವಣೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT