ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಮುನಿದ ರೈತರು: ದಣಿದ ಪೊಲೀಸರು

Published 15 ಆಗಸ್ಟ್ 2023, 5:41 IST
Last Updated 15 ಆಗಸ್ಟ್ 2023, 5:41 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಮೈಸೂರು: ‘ಸರ್ಕಾರ ಪ್ರತಿ ಟನ್‌ ಕಬ್ಬಿಗೆ ಹೆಚ್ಚುವರಿಯಾಗಿ ನಿಗದಿ ಮಾಡಿರುವ ₹150ನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆಯು ನೀಡದೆ ರೈತರಿಗೆ ವಂಚಿಸುತ್ತಿದೆ’ ಎಂದು ಆರೋಪಿಸಿ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದರು.

ಸೋಮವಾರ ಮಧ್ಯಾಹ್ನ ನಗರದ ಲಲಿತ ಮಹಲ್ ಪ್ಯಾಲೇಸ್ ಎದುರಿನ ಮೈದಾನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಗೇಟಿನ ಬಳಿ ರೈತರನ್ನು ತಡೆದರು.

ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ನಾವು ರೈತರು ನಕ್ಸಲೇಟ್‌, ಉಗ್ರಗಾಮಿಗಳಲ್ಲ ನಮ್ಮನ್ನು ಒಳಗೆ ಬಿಡಬೇಕು’ ಎಂದು ಮನವಿ ಮಾಡಿದರು. ಪೊಲೀಸರು ಒಪ್ಪದಿದ್ದಾಗ ಪೊಲೀಸರು, ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬಾಕಿ ಹಣ ಕೊಡಿಸುವಂತೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದೆವು. ಜಿಲ್ಲಾ ಉಸ್ತುವಾರಿ ಸಚಿವರು ಹಣ ಪಾವತಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂತೆಗೆದುಕೊಂಡಿದ್ದೇವೆ.
ಕುರುಬೂರು ಶಾಂತಕುಮಾರ್‌, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ

ಈ ವೇಳೆ ರೈತ ಮಹಿಳೆ ಸೇರಿದಂತೆ ಮೂರ್ನಾಲ್ಕು ರೈತರು ಜಿಲ್ಲಾಧಿಕಾರಿ ಕಚೇರಿಯ ಗೇಟಿನ ಮೇಲೆ ಹತ್ತಿ ಒಳ ಪ್ರವೇಶಿಸಲು ಯತ್ನಿಸಿದರು. ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆದು ಗೇಟಿನ ಮೇಲೆ ಹತ್ತಲು ಯತ್ನಿಸಿದ ರೈತರನ್ನು ವಶಕ್ಕೆ ಪಡೆದರು. ತಳ್ಳಾಟದಲ್ಲಿ ಹಳ್ಳಿಕಟ್ಟೆ ಮಹದೇವಪ್ಪ ಎಂಬ ರೈತರ ಕಾಲಿಗೆ ಪೆಟ್ಟಾಗಿ ಅವರು ಕಿರುಚಾಡತೊಡಗಿದರು. ಪೊಲೀಸ್ ವಾಹನ ಮುಂದೆ ಹೋಗದಂತೆ ರಸ್ತೆಗೆ ಅಡ್ಡಲಾಗಿ ರೈತರು ಮಲಗಿದರು.

ಗಾಯಾಳು ರೈತರನ್ನು ಪೊಲೀಸ್ ವಾಹನ ಮೂಲಕ ಆಸ್ಪತ್ರೆಗೆ ಕರೆದೊಯ್ದರು. ರೈತರು ಮೈಸೂರು– ಬನ್ನೂರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಿ, ಅಲ್ಲೇ ಊಟ ಮಾಡಿದ್ದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರ ನಿಯೋಗ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆಯುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೆ ತೆರಳಿ ಮಾತುಕತೆ ನಡೆಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಾರ್ಯಾಧ್ಯಕ್ಷ ಹಳ್ಳಿಕರಂಡಿ ಭಾಗ್ಯರಾಜ್, ಕಿರುಗಸೂರು ಶಂಕರ್, ಮೂಕಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ ಇದ್ದರು

ಆತ್ಮಹತ್ಯೆಗೆ ಯತ್ನ

ಪೊಲೀಸರು ಹಾಗೂ ರೈತರ ನಡುವೆ ಸಂಘರ್ಷ ನಡೆಯುತ್ತಿದ್ದಾಗ ದೊಡ್ಡ ಕಾಟೂರು ಗ್ರಾಮದ ಮಹದೇವಸ್ವಾಮಿ ಎಂಬ ರೈತ ಪೊಲೀಸರ ಬಳಿ ಇದ್ದ ಹಗ್ಗವನ್ನು ಎಳೆದುಕೊಂಡು ತನ್ನ ಕತ್ತಿಗೆ ಕುಣಿಕೆ ಬಿಗಿದು ಆತ್ಮಹತ್ಯೆಗೂ ಯತ್ನಿಸಿದ ಘಟನೆ ನಡೆಯಿತು. ತಕ್ಷಣ ಪೊಲೀಸರು ಆತನಿಂದ ಹಗ್ಗ ಕಸಿದುಕೊಂಡರು.

ಭರವಸೆ ಬಳಿಕ ಪ್ರತಿಭಟನೆ ವಾಪಾಸ್ಸು

ಪ್ರತಿಭಟನೆಯ ತೀವ್ರತೆ ಹೆಚ್ಚುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕಬ್ಬು ಅಭಿವೃದ್ಧಿ ಆಯುಕ್ತರು ರೈತ ಮುಖಂಡರೊಂದಿಗೆ ಸಭೆ ನಡೆಸಿ ‘ಬೆಂಗಳೂರಿನಲ್ಲಿ ಸಭೆ ನಡೆಸಿ ಕಬ್ಬು ಬೆಳೆಗಾರರಿಗೆ ದೊರೆಯಬೇಕಾದ ಹಣ ಪಾವತಿಸುತ್ತೇವೆ’ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ವಾಪಸ್ಸು ಪಡೆಯಲಾಯಿತು.

ರೈತ ಆತ್ಮಹತ್ಯೆಗೆ ಯತ್ನಿಸಿದಾಗ ಅಧಿಕಾರಿಗಳು ತಡೆಯುತ್ತಿರುವುದು
ರೈತ ಆತ್ಮಹತ್ಯೆಗೆ ಯತ್ನಿಸಿದಾಗ ಅಧಿಕಾರಿಗಳು ತಡೆಯುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT