ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ದಲಿತರು ಪ್ರವೇಶಿಸಿದ್ದಕ್ಕೆ ಹೊಸ ದೇವಾಲಯ ನಿರ್ಮಾಣ– ಆರೋಪ

Published 8 ಜನವರಿ 2024, 13:53 IST
Last Updated 8 ಜನವರಿ 2024, 13:53 IST
ಅಕ್ಷರ ಗಾತ್ರ

ಮೈಸೂರು: ‘ತಾಲ್ಲೂಕಿನ‌ ಕೆಂಚಲಗೂಡು ಗ್ರಾಮದಲ್ಲಿ ಲಕ್ಷ್ಮಿನಾರಾಯಣಸ್ವಾಮಿ ದೇವಾಲಯಕ್ಕೆ ದಲಿತರು ಪ್ರವೇಶಿಸಿದರೆಂಬ ಕಾರಣದಿಂದ, ಹೊಸ ದೇವಾಲಯವನ್ನು ನಿರ್ಮಿಸಿ ಮತ್ತೆ ಅಸ್ಪೃಶ್ಯತೆಯನ್ನು ಆಚರಿಸಲಾಗುತ್ತಿದೆ’ ಎಂದು ದಲಿತ ಮುಖಂಡ ಪುರುಷೋತ್ತಮ್‌ ಆರೋಪಿಸಿದರು.

‘ಅ.27ರಂದು ಮುಜರಾಯಿ ಇಲಾಖೆಗೆ ದೂರು ನೀಡಿದ ಬಳಿಕ, ಡಿ.2ರಂದು ದೇವಾಲಯ ಪ್ರವೇಶಕ್ಕೆ ಅವಕಾಶ ದೊರೆತಿತ್ತು. ಅದರ ಮಾರನೇ ದಿನವೇ ಉಳಿದ ಗ್ರಾಮಸ್ಥರೆಲ್ಲ ಪಂಚಾಯಿತಿ ಸೇರಿ, ದೇವಾಲಯ ಪ್ರವೇಶಿಸಿದವರನ್ನು ಬಹಿಷ್ಕರಿಸಿದರು. ದೇವಾಲಯಕ್ಕೆ ಮೈಲಿಗೆ ಆಯಿತೆಂದು, ಸರ್ಕಾರಿ ಜಾಗದಲ್ಲಿ ಒಂದೇ ತಿಂಗಳಲ್ಲಿ ಹೊಸ ದೇವಸ್ಥಾನ ನಿರ್ಮಿಸಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ದೇವಸ್ಥಾನದಲ್ಲಿ ನಡೆಯುತ್ತಿದ್ದ ಸಂಕ್ರಾಂತಿ ಹಬ್ಬದ ಉತ್ಸವವನ್ನು ನೂತನ ದೇವಸ್ಥಾನದಲ್ಲಿ ಮಾಡಲು ಅಸ್ಪೃಶ್ಯತೆ ಆಚರಿಸುವವರಿಂದ ಅನುಮತಿಗೆ ಅರ್ಜಿ ಸಲ್ಲಿಸಲಾಗಿದೆ. ದಲಿತರನ್ನು ದೂರವಿಡಲು ಈ ಪ್ರಯತ್ನ ನಡೆದಿದ್ದು, ಅನುಮತಿ ನೀಡುವ ಮುನ್ನ ಸಭೆ ನಡೆಸಿ, ಆಯೋಜಕರಲ್ಲಿ ನೆಲದ ಕಾನೂನಿನ ಅರಿವು ಮಾಡಿಸಬೇಕು. ಅಸ್ಪೃಶ್ಯತೆ ಆಚರಣೆಯಾಗದಂತೆ ಅಧಿಕಾರಿಗಳು ಮುಂದೆ ನಿಂತು ಉತ್ಸವ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಗ್ರಾಮದಲ್ಲಿ ಅರಸು, ನಾಯಕ ಹಾಗೂ ದಲಿತ ಸಮುದಾಯದವರು ವಾಸವಿದ್ದಾರೆ. ಮುಜರಾಯಿ ಇಲಾಖೆಯ 3 ದೇವಸ್ಥಾನಗಳಿದ್ದು, ಅನಾದಿ ಕಾಲದಿಂದಲೂ ದಲಿತರಿಗೆ ಪ್ರವೇಶ ನಿರಾಕರಿಸಲಾಗಿದೆ. ಅನೇಕರು ಈ ಅಸ್ಪೃಶ್ಯತೆಯನ್ನು ಮೌನದಿಂದ ಒಪ್ಪಿಕೊಂಡಿದ್ದು, ಪ್ರಶ್ನಿಸುವವರನ್ನು ಬಹಿಷ್ಕರಿಸಲಾಗುತ್ತಿದೆ. ಅಧಿಕಾರಿಗಳೂ ದೂರುಗಳಿಗೆ ಸ್ಪಂದಿಸುತ್ತಿಲ್ಲ. ಕಾನೂನುಬಾಹಿರ, ದಬ್ಬಾಳಿಕೆಯ ಉತ್ಸವಕ್ಕೆ ಅನುಮತಿ ನೀಡಿದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.‌‌

ಸುದ್ದಿಗೋಷ್ಠಿಯಲ್ಲಿ ಕೆಂಚಲಗೂಡು ಗ್ರಾಮಸ್ಥರಾದ ಮುದ್ದುರಾಜು, ಜೆ.ಸ್ವಾಮಿ, ಚಲುವರಾಜು, ಮಹದೇವಮ್ಮ, ವಿಜಯನಗರದ ವಿಜಯ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT