ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಚಾಮರಾಜ ವೃತ್ತಕ್ಕೆ ಧಕ್ಕೆ: ಆತಂಕ

ಪಾರಿವಾಳಗಳಿಗೆ ಧಾನ್ಯ ಸುರಿಯುವುದರಿಂದ ಮಸುಕಾಗುತ್ತಿರುವ ಸೌಂದರ್ಯ
Published 30 ಮೇ 2024, 5:05 IST
Last Updated 30 ಮೇ 2024, 5:05 IST
ಅಕ್ಷರ ಗಾತ್ರ

ಮೈಸೂರು: ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಎದುರು ನಿತ್ಯ ನೂರಾರು ಮಂದಿ ಪಾರಿವಾಳಗಳಿಗೆ ಧಾನ್ಯ ಚೆಲ್ಲುತ್ತಿದ್ದು, ಅದರಿಂದ ಸಮೀಪದ ಚಾಮರಾಜ ವೃತ್ತದ ಸೌಂದರ್ಯ ಹಾಳಾಗುತ್ತಿದೆ ಎಂಬ ಆಕ್ಷೇಪ ನಗರಪ್ರಿಯರಲ್ಲಿ ವ್ಯಕ್ತವಾಗಿದೆ.

‘ಪಾರಂಪರಿಕ ನಗರಿಯ ಸೌಂದರ್ಯ ಹೆಚ್ಚಿಸುವಲ್ಲಿ ಅರಮನೆ ಜೊತೆಗೆ ಅದರ ಆವರಣದಲ್ಲಿನ ದೇವಾಲಯಗಳು, ಚಾಮರಾಜ, ಕೃಷ್ಣರಾಜ, ಜಯಚಾಮರಾಜೇಂದ್ರ ವೃತ್ತ, ಪಾಲಿಕೆ ಸೇರಿದಂತೆ ವಿವಿಧ ಕಟ್ಟಡಗಳು ಕಾರಣವಾಗಿವೆ. ಪಾರಿವಾಳಗಳು ಕಟ್ಟಡಗಳ ಅಸ್ಥಿರತೆಗೆ ಕಾರಣವಾಗುತ್ತಿವೆ’ ಎನ್ನುತ್ತಾರೆ ಇತಿಹಾಸ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು.

‘ಪಕ್ಷಿಪ್ರಿಯರು ತಮ್ಮ ಪ್ರೀತಿ ವ್ಯಕ್ತಪಡಿಸಲೇಬೇಕೆಂದರೆ ಮನೆಗಳಲ್ಲಿ ಗಿಣಿ, ಲವ್‌ ಬರ್ಡ್ಸ್‌ಗಳನ್ನು ಸಾಕಿಕೊಳ್ಳಲಿ. ಇಲ್ಲವೇ ಗುಬ್ಬಚ್ಚಿ, ಬುಲ್‌ಬುಲ್‌ ಹಕ್ಕಿಗಳಿಗೆ ಗೂಡುಗಳನ್ನು ಮನೆಗಳಲ್ಲಿ ತೂಗುಹಾಕಲಿ. ಆದರೆ, ಧಾನ್ಯವನ್ನು ಚೆಲ್ಲುವುದರಿಂದ ಪಾರಿವಾಳಗಳು ಆಹಾರ ಹುಡುಕುವುದನ್ನೇ ಬಿಟ್ಟಿವೆ. ಅವುಗಳನ್ನು ಸೋಮಾರಿ ಮಾಡಿಬಿಟ್ಟಿದ್ದಾರೆ’ ಎಂದು ‘ಪ್ರಜಾವಾಣಿ’ ಜೊತೆ ಬೇಸರ ವ್ಯಕ್ತಪಡಿಸಿದರು.

‘ಪಾರಿವಾಳಗಳು ಗುಂಪು ಗುಂಪಾಗಿ ಕಟ್ಟಡಗಳಲ್ಲಿ ಕೂತು ಹಿಕ್ಕೆ ಹಾಕುತ್ತಿವೆ. ಹಿಕ್ಕೆಯಲ್ಲಿನ ಯೂರಿಕ್‌ ಆ್ಯಸಿಡ್‌ ಶಕ್ತಿ ಎಷ್ಟಿದೆ ಎಂಬುದು ಗೊತ್ತೆ. ಅದು ರಾಜಸ್ಥಾನದಿಂದ ತರಿಸಲಾದ ಮಾರ್ಬಲ್ಲುಗಳ ಹೊಳಪನ್ನೇ ಮಾಯಮಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಹಿಕ್ಕೆ, ಪುಕ್ಕಗಳ ರಾಶಿಯೇ ಚಾಮರಾಜ ವೃತ್ತದ ಆವರಣದಲ್ಲಿ ಬೀಳುತ್ತಿದೆ. ಶಿವಕುಮಾರ್ ಮೇಯರ್ ಆಗಿದ್ದಾಗ, ಅವರ ಗಮನಕ್ಕೆ ತಂದಿದ್ದೆ. ಒಂದೆರಡು ಬಾರಿ ಸ್ವಚ್ಛಗೊಳಿಸಿದರು. ಆದರೆ, ಧಾನ್ಯ ಸುರಿಯುವವರನ್ನು ನಿಯಂತ್ರಿಸಲಿಲ್ಲ’ ಎಂದರು.

ನೆಟ್‌ ಹಾಕಬೇಕು: ಚಾಮರಾಜ ವೃತ್ತ ಸೇರಿದಂತೆ ಪಾರಿವಾಳಗಳು ಕೂರುವ ಸ್ಥಳಗಳಲ್ಲಿ ‘ನೆಟ್‌’ (ಬಲೆ) ಹಾಕಬೇಕು. ಅಂಬೇಡ್ಕರ್‌ ಪ್ರತಿಮೆ ಇರುವ ಗೋಪುರದಲ್ಲಿ ಪ್ರಯೋಗಾತ್ಮಕವಾಗಿ ಈಗಾಗಲೇ ಅಳವಡಿಸಲಾಗಿದ್ದು, ಸೌಂದರ್ಯಕ್ಕೆ ಧಕ್ಕೆಯಾಗಿಲ್ಲ. ಅಲ್ಲಿ ಪಾರಿವಾಳಗಳು ಗುಂಪುಗೂಡುವುದು ಇಲ್ಲವಾಗಿದೆ. ಅದೇ ರೀತಿ ಚಾಮರಾಜ ವೃತ್ತಕ್ಕೂ ‘ನೆಟ್‌’ ಹಾಕಿದರೆ ಅನುಕೂಲವಾಗಲಿದೆ’ ಎಂದು ರಂಗರಾಜು ತಿಳಿಸಿದರು.

‘10ನೇ ಚಾಮರಾಜ ಒಡೆಯರ್‌ ಅವರ ಪ್ರತಿಮೆ ಹಾಗೂ ಗೋಪುರವನ್ನು 1926ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಸ್ಥಾಪಿಸಿದರು. ಶತಮಾನದ ಇತಿಹಾಸವಿರುವ ಕಟ್ಟಡ, ಸುಂದರವಾದ ಪ್ರತಿಮೆಯು ಶಿಥಿಲವಾಗಲು ಬಿಡಬಾರದು’ ಎಂದು ಒತ್ತಾಯಿಸಿದರು. 

‘ಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆ ಹಾಗೂ  ಆವರಣ ಸಹ ಸಂಪೂರ್ಣ ತ್ಯಾಜ್ಯಗಳಿಂದ ಕಲುಷಿತಗೊಳ್ಳುತ್ತಲಿದೆ. ಎಷ್ಟು ಬಾರಿ ಸ್ವಚ್ಛಗೊಳಿಸಿದರೂ ಮೊದಲ ಹೊಳಪು ಬಾರದು’ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಎಸ್‌. ಕೌಟಿಲ್ಯ ಪ್ರತಿಕ್ರಿಯಿಸಿದರು.

‘ಅರಮನೆಯ ಸುತ್ತ-ಮುತ್ತ ವ್ಯಾಪಾರ ಮಳಿಗೆಗಳು, ದೇವಸ್ಥಾನಗಳ ಸೌಂದರ್ಯವೂ ಹಾಳಾಗುತ್ತಿದೆ. ವಾಹನಗಳ ಸುಗಮ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿವೆ. ಸುಂದರ ಅರಮನೆಯ ಆಯಕಟ್ಟಿನ ಸ್ಥಳಗಳಲ್ಲಿ ಗೂಡು ಕಟ್ಟಿಕೊಂಡಿವೆ. ಜಿಲ್ಲಾಡಳಿತ, ಪಾಲಿಕೆ ಹಾಗೂ ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿ’ ಎಂದು ಕೋರಿದರು.

ಪರಿಸರ ಎಂಜಿನಿಯರ್‌ ಹಾಗೂ ತಜ್ಞರೊಂದಿಗೆ ಭೇಟಿ ನೀಡಲಾಗುವುದು. ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದ್ದು ಅಲ್ಲಿನ ತೀರ್ಮಾನದಂತೆ ಕ್ರಮ ವಹಿಸುವೆ

-ಎನ್‌.ಎನ್‌.ಮಧು ಪಾಲಿಕೆ ಆಯುಕ್ತೆ

ಪಕ್ಷಿಗಳಿಗೆ ಆಹಾರ ಹುಡುಕಿಕೊಳ್ಳುವುದು ಗೊತ್ತಿಲ್ಲವೇ? ಧಾನ್ಯ ಚೆಲ್ಲುವುದನ್ನು ನಿಯಂತ್ರಿಸಬೇಕು. ಸೇವೆ ಮಾಡಬೇಕೆಂದಿದ್ದರೆ ಬಡ ಮಕ್ಕಳಿಗೆ ಪುಸ್ತಕ ಪರಿಕರ ಕೊಡಲಿ

-ಪ್ರೊ.ಎನ್‌.ಎಸ್‌.ರಂಗರಾಜು ಇತಿಹಾಸ ತಜ್ಞ

ಪಾರಂಪರಿಕ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ನಮಗೆ ಗೊತ್ತಿಲ್ಲದೆ ಅವುಗಳ ಅವಸಾನಕ್ಕೆ ಕಾರಣವಾಗುತ್ತಿದ್ದೇವೆ ಎಂಬುದಕ್ಕೆ ಪಾರಿವಾಳಕ್ಕೆ ಧಾನ್ಯ ಹಾಕುವುದೊಂದು ಉದಾಹರಣೆ

-ರಘು ಆರ್‌.ಕೌಟಿಲ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT