ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಹುಲಿ ಸೆರೆ: ಗ್ರಾಮಸ್ಥರ ನಿಟ್ಟುಸಿರು

ಜಯಪುರ ಹೋಬಳಿಯ ಚಿಕ್ಕನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಇರಿಸಿದ್ದ ಬೋನು
Published 16 ಫೆಬ್ರುವರಿ 2024, 5:31 IST
Last Updated 16 ಫೆಬ್ರುವರಿ 2024, 5:31 IST
ಅಕ್ಷರ ಗಾತ್ರ

ಮೈಸೂರು: ತಾಲ್ಲೂಕಿನ ಜಯಪುರ ಹೋಬಳಿಯ ಚಿಕ್ಕನಹಳ್ಳಿ ಮೀಸಲು ಅರಣ್ಯದ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ ಮೂಡಿಸಿದ್ದ ಹುಲಿಯು ಗುರುವಾರ ಮುಂಜಾನೆ ಬೋನಿನಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

‘ಅರಣ್ಯದಲ್ಲಿ ನೂತನವಾಗಿ ವಿನ್ಯಾಸಗೊಳಿಸಿ ಅಳವಡಿಸಲಾಗಿದ್ದ ‘ವಾಕ್‌ಥ್ರೂ’ ಬೋನಿನೊಳಗೆ 5 ವರ್ಷದ ಗಂಡು ಹುಲಿಯು ಸೆರೆಯಾಗಿದ್ದು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಗಳಂತೆ ರೇಡಿಯೊ ಕಾಲರ್‌ ಹಾಕಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬಿಡಲು ಕ್ರಮವಹಿಸಲಾಗಿದೆ’ ಎಂದು ಡಿಸಿಎಫ್‌ ಕೆ.ಎನ್‌.ಬಸವರಾಜು ತಿಳಿಸಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರಿದ್ದ ‘ಟಿ–23’ ಹೆಸರಿನ ಈ ಗಂಡು ಹುಲಿಯು ಹೊಸ ಆವಾಸ ಸ್ಥಾನ ಹುಡುಕುತ್ತಾ ಚಿಕ್ಕನಹಳ್ಳಿ ಮೀಸಲು ಪ್ರದೇಶದಲ್ಲಿ ನೆಲೆಗೊಂಡಿತ್ತು. 2023ರ ಅಕ್ಟೋಬರ್‌ನಿಂದಲೂ ಜಯಪುರ ಹೋಬಳಿಯ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. 

ಮಾರ್ಬಳ್ಳಿ, ಗುಜ್ಜೇಗೌಡನಪುರ, ಅರಸಿನಕೆರೆ, ಚಿಕ್ಕಕಾನ್ಯ, ದೊಡ್ಡಕಾನ್ಯ, ಬೆಟ್ಟದಬೀಡು, ಕಣಿಯನಹುಂಡಿ, ಮಾವಿನಹಳ್ಳಿ, ಜಯಪುರ, ದೂರ, ಗುಂಚನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಜಮೀನು, ತೋಟಗಳಲ್ಲಿ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿತ್ತು.

ನಾಗರಹೊಳೆ, ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶಗಳಂಥ ದಟ್ಟ ಅರಣ್ಯಗಳಿಂದ ದೂರವಿರುವ, ಮೈಸೂರು ನಗರಕ್ಕೆ ಕೇವಲ 22 ಕಿ.ಮೀ ದೂರವಿರುವ ಚಿಕ್ಕನಹಳ್ಳಿ ಮೀಸಲು ಅರಣ್ಯ ‍ಪ್ರದೇಶದಲ್ಲಿ ಹುಲಿಯು ನೆಲೆ ಕಂಡುಕೊಂಡಿತ್ತು.

ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆ: ಚಿಕ್ಕನಹಳ್ಳಿ ಮೀಸಲು ಅರಣ್ಯ ಪ್ರದೇಶದ ಹಲವೆಡೆ ಅರಣ್ಯ ಇಲಾಖೆಯು ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಹುಲಿಯ ದೃಶ್ಯಗಳು ಸೆರೆಯಾಗಿದ್ದವು. ಅದರ ನೆರವಿನೊಂದಿಗೆ ಚಿರತೆ ಕಾರ್ಯಪಡೆ, ಆನೆ ಕಾರ್ಯಪಡೆ, ಎಸ್‌ಟಿಪಿಎಫ್‌ ಸಿಬ್ಬಂದಿ ಜೊತೆಗೆ ಟ್ರ್ಯಾಪ್‌, ನೆಟ್‌ವರ್ಕ್‌, ಐಆರ್‌ ಕ್ಯಾಮೆರಾಗಳು, ರಕ್ಷಣಾ ಸಲಕರಣೆಗಳನ್ನು ಬಳಸಿ 2023ರ ನ.29ರಿಂದಲೇ ಕಾರ್ಯಾಚರಣೆಯನ್ನು ಇಲಾಖೆಯು ಆರಂಭಿಸಿತ್ತು.

ಚಿಕ್ಕನಹಳ್ಳಿ ಅರಣ್ಯದಲ್ಲಿ ಬಲಿ ಪ್ರಾಣಿಗಳ ಸಂಖ್ಯೆ ಕಡಿಮೆ ಇರುವುದರಿಂದ ಹುಲಿಯು ಚಿಕ್ಕ ಪ್ರಾಣಿಗಳನ್ನೇ ಆಹಾರಕ್ಕೆ ನೆಚ್ಚಿಕೊಂಡಿತ್ತು ಎನ್ನಲಾಗಿದೆ. ಕಾಡುಹಂದಿ, ಜಿಂಕೆ, ಮೊಲ, ನವಿಲನ್ನು ಬೇಟೆಯಾಡುತ್ತಿತ್ತು. ಅರಣ್ಯದಂಚಿನಲ್ಲಿ ಜಾನುವಾರು ಬೇಟೆಗೂ ಯತ್ನಿಸಿತ್ತು.

ಕಾರ್ಯಾಚರಣೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಡಿಸಿಎಫ್‌ ಕೆ.ಎನ್‌.ಬಸವರಾಜ, ಎಸಿಎಫ್ ಲಕ್ಷ್ಮಿಕಾಂತ್, ಆರ್‌ಎಫ್‌ಒ ಕೆ.ಸುರೇಂದ್ರ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

5 ವರ್ಷದ ಗಂಡು ಹುಲಿ
5 ವರ್ಷದ ಗಂಡು ಹುಲಿ
ವಾಕ್‌ಥ್ರೂ ಬೋನು
ವಾಕ್‌ಥ್ರೂ ಬೋನು

2023ರ ನ.29ರಿಂದ ಕಾರ್ಯಾಚರಣೆ ಚಿರತೆ, ಆನೆ ಕಾರ್ಯಪಡೆ ಸಿಬ್ಬಂದಿ ಭಾಗಿ ಕ್ಯಾಮೆರಾ ಟ್ರ್ಯಾಪ್‌ ಆಧರಿಸಿ ‘ವಾಕ್‌ಥ್ರೂ’ ಬೋನು ಅಳವಡಿಕೆ

ಹೊಸ ಮಾದರಿಯ ಬೋನು ಅರಣ್ಯ ಇಲಾಖೆಯು ಹುಲಿ ಸೆರೆಗೆ ಇದೇ ಮೊದಲ ಬಾರಿ ವಾಕ್‌ಥ್ರೂ ಬೋನನ್ನು ವಿನ್ಯಾಸಗೊಳಿಸಿತ್ತು. 32 ಅಡಿ ಉದ್ದ 10 ಅಡಿ ಅಗಲ ಹಾಗೂ 10 ಅಡಿ ಎತ್ತರದ ಬೋನಿಗೆ ಎರಡು ಕಡೆ ಬಾಗಿಲುಗಳಿದ್ದು ಬೋನಿನ ಒಳಗೆ ಕುರಿ ಮೇಕೆಯನ್ನು ಕಟ್ಟಲಾಗಿರುತ್ತದೆ. ಒಳಗೆ ಹೊಕ್ಕರೆ ಒಂದೇ ಬಾರಿಗೆ ಎರಡೂ ಬಾಗಿಲುಗಳು ಮುಚ್ಚುವುದು ಈ ಬೋನಿನ ವಿಶೇಷ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT