ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Voice Day: ಧ್ವನಿ ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ

Published 16 ಏಪ್ರಿಲ್ 2024, 6:07 IST
Last Updated 16 ಏಪ್ರಿಲ್ 2024, 6:07 IST
ಅಕ್ಷರ ಗಾತ್ರ

ಮೈಸೂರು: ಧ್ವನಿಗೆ ಆದ್ಯತೆ ನೀಡುವ ವೃತ್ತಿಪರರೂ ಸೇರಿದಂತೆ, ಅನೇಕ ಧ್ವನಿ ಸಂಬಂಧಿತ ಸಮಸ್ಯೆಗಳನ್ನು ಹೊತ್ತು ಆರೋಗ್ಯ ಕೇಂದ್ರಗಳತ್ತ ಬರುವವರು ಹೆಚ್ಚಾಗುತ್ತಿದ್ದಾರೆ.

ಧ್ವನಿಯೆಂಬುದು ಮನುಷ್ಯನ ವ್ಯಕ್ತಿತ್ವವನ್ನೇ ತಿಳಿಸುವ, ಆತನ ಆರೋಗ್ಯ, ಮನಃಸ್ಥಿತಿಯನ್ನು ಪ್ರದರ್ಶಿಸುವ ಗುರುತು ಕೂಡ ಹೌದು. ಧ್ವನಿಯ ಪ್ರಾಮುಖ್ಯತೆ ಮತ್ತು ಆರೋಗ್ಯದ ಮಹತ್ವ ಸಾರುವುದು ಈ ದಿನದ ಉದ್ದೇಶ. ‘ಪ್ರತಿಧ್ವನಿಸಿ, ಶಿಕ್ಷಣ ನೀಡಿ, ಆಚರಿಸಿ’ ಎಂಬ ಥೀಮ್‌ನೊಂದಿಗೆ ಈ ಬಾರಿ ಆಚರಣೆ ನಡೆಯುತ್ತಿದೆ.

ಮೈಸೂರಿನಲ್ಲಿನ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ (ಆಯಿಷ್‌) ಹಾಗೂ ಜೆಎಸ್ಎಸ್‌ ವಾಕ್‌ ಮತ್ತು ಶ್ರವಣ ಸಂಸ್ಥೆಗಳು ಧ್ವನಿ ಆರೋಗ್ಯಕ್ಕೆಂದು ವಿಶೇಷ ಕ್ಲಿನಿಕ್‌ಗಳನ್ನು ಹೊಂದಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿವೆ.  ಆಯಿಷ್‌ ಸಂಸ್ಥೆಯ ಧ್ವನಿ ಸಂರಕ್ಷಣ ಘಟಕಕ್ಕೆ ಪ್ರತಿ ತಿಂಗಳೂ 20ರಿಂದ 25 ಪ್ರಕರಣಗಳು ದಾಖಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಸಂಖ್ಯೆ ಹೆಚ್ಚುತ್ತಿದೆ.

‘ಮಕ್ಕಳು, ಹಿರಿಯರೆನ್ನದೇ ಎಲ್ಲ ವಯೋಮಾನದವರನ್ನು ಧ್ವನಿ ಸಮಸ್ಯೆ ಕಾಡುತ್ತದೆ. ಮಕ್ಕಳಲ್ಲಿ ಜೋರಾಗಿ ಕಿರುಚುವುದು, ಅರಿವಿಲ್ಲದೆ ಅಗತ್ಯಕ್ಕೂ ಮೀರಿ ಧ್ವನಿಯನ್ನು ಬಳಸುವುದರಿಂದ ಹಾಗೂ ವೃತ್ತಿಪರ ಹಾಡುಗಾರರು, ಶಿಕ್ಷಕರು, ವಕೀಲರು, ಬೀದಿ ಬದಿ ವ್ಯಾಪಾರಿಗಳು ತಮ್ಮ ಕೆಲಸದ ಕಾರಣ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದರ ನಡುವೆ ವಿವಿಧ ಕಾಯಿಲೆಗಳಿಂದಲೂ ಸಮಸ್ಯೆ ಉದ್ಭವಿಸುತ್ತದೆ’ ಎಂದು ಆಯಿಷ್‌ ಸಂಸ್ಥೆ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಧ್ವನಿತಂತುಗಳ ರಕ್ಷಿಸಿ: ‘ಧ್ವನಿ ರಕ್ಷಣೆಯಲ್ಲಿ ಗಂಟಲಲ್ಲಿರುವ ಧ್ವನಿತಂತುಗಳ ಆರೋಗ್ಯ ಕಾಪಾಡುವುದು ಅತ್ಯಗತ್ಯ. ಒಟ್ಟಾರೆ ಬಳಕೆ, ಆಹಾರ ಪದ್ಧತಿ, ದುಶ್ಚಟಗಳಿಂದ ಸಮಸ್ಯೆ ಉಂಟಾಗುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು. ಸರಿಯಾದ ಕ್ರಮದಲ್ಲಿ ಧ್ವನಿ ಬಳಸದಿರುವುದು, ಮಾನಸಿಕ ಸಮಸ್ಯೆ, ಆಘಾತಗಳೂ ಕೂಡ ಸಮಸ್ಯೆಗೆ ಕಾರಣವಾಗುತ್ತದೆ’ ಎಂದರು.

‘ಘಟಕಕ್ಕೆ ಬರುವ ರೋಗಿಗಳಲ್ಲಿ ಶೇ 80ರಷ್ಟು ವೃತ್ತಿಪರರು ಅಂದರೆ ನಟರು, ಗಾಯಕರು ಬರುತ್ತಾರೆ. ಉಳಿದಂತೆ ಸಾಮನ್ಯ ಜನರು, ಗೃಹಿಣಿಯರು, ವಿದ್ಯಾರ್ಥಿಗಳೂ ಬರುತ್ತಾರೆ. ಒತ್ತಡದ, ಅಹಿತಕರ ಜೀವನಶೈಲಿ ಇಂದು ಧ್ವನಿ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ’ ಎಂದು ತಿಳಿಸಿದರು.

ಇತಿಹಾಸ: 1999ರಲ್ಲಿ ಬ್ರೆಜಿಲಿಯನ್ ಧ್ವನಿ ಆರೈಕೆ ವೃತ್ತಿಪರರ ಗುಂಪು ಬ್ರೆಜಿಲಿಯನ್ ಧ್ವನಿ ದಿನವನ್ನು ಆಚರಿಸುವ ಮೂಲಕ ದಿನಾಚರಣೆಗೆ ಮುನ್ನುಡಿ ಬರೆಯಿತು. ಇಂದು ಹಲವು ದೇಶಗಳು ಆಚರಿಸುತ್ತಿವೆ. ವರ್ಷವೂ ಒಂದೊಂದು ಥೀಮ್‌ನಲ್ಲಿ ನಡೆಯುತ್ತದೆ.

ಡಾ.ಆರ್‌.ಸುಮಾ
ಡಾ.ಆರ್‌.ಸುಮಾ
ಡಾ.ಎಂ. ಪುಷ್ಪಾವತಿ
ಡಾ.ಎಂ. ಪುಷ್ಪಾವತಿ

Highlights - ನಗರದಲ್ಲಿ ಪ್ರತಿ ತಿಂಗಳೂ 30ರಿಂದ 50 ಪ್ರಕರಣ ಜೆಎಸ್ಎಸ್‌ ಸಂಸ್ಥೆಯಲ್ಲಿ ಇಂದು, ನಾಳೆ ಉಚಿತ ತಪಾಸಣೆ

Quote - ವಾರದಲ್ಲಿ 4– 5 ಪ್ರಕರಣಗಳು ಸಂಸ್ಥೆಯ ಧ್ವನಿ ಕ್ಲಿನಿಕ್‌ನಲ್ಲಿ ದಾಖಲಾಗುತ್ತಿವೆ. ಆರೋಗ್ಯಕರ ಜೀವನ ಶೈಲಿಯಿಂದ ಸಮಸ್ಯೆ ಸುಧಾರಣೆ ಸಾಧ್ಯ ಡಾ.ಆರ್‌.ಸುಮಾ ಪ್ರಾಂಶುಪಾಲೆ ಜೆಎಸ್ಎಸ್‌ ವಾಕ್‌ ಮತ್ತು ಶ್ರವಣ ಸಂಸ್ಥೆ

Quote - ಧ್ವನಿ ರಕ್ಷಣೆ ಕುರಿತು ಜನರು ಜಾಗೃತರಾಗಿರಬೇಕು. ಮಕ್ಕಳಲ್ಲೂ ಈ ಬಗ್ಗೆ ಅರಿವು ಬೆಳೆಸಲು ಪೋಷಕರು ಪ್ರಯತ್ನಿಸಬೇಕು ಡಾ.ಎಂ.ಪುಷ್ಪಾವತಿ ನಿರ್ದೇಶಕಿ ಆಯಿಷ್‌

Cut-off box - ಧ್ವನಿ ಆರೋಗ್ಯ ರಕ್ಷಣೆಗೆ ಸಲಹೆ *ಆಗಿದ್ದಾಂಗೆ ನೀರು ಕುಡಿಯುವುದು *ಧೂಮಪಾನ ಮದ್ಯಪಾನದಿಂದ ದೂರವಿರುವುದು *ಜೋರಾಗಿ ಕಿರುಚದಿರುವುದು ದೀರ್ಘ ಮಾತಿನ ಬಳಿಕ ವಿಶ್ರಾಂತಿ *ಉತ್ತಮ ಆಹಾರ ಪದ್ಧತಿ ಪಾಲನೆ *ಅಲರ್ಜಿ ವಸ್ತುಗಳಿಂದ ದೂರ *ಸಮಸ್ಯೆ ಎದುರಾಗ ತಜ್ಞರ ಸಂಪರ್ಕ

Cut-off box - ಧ್ವನಿ ತಪಾಸಣೆ ಹೇಗೆ ‘ಧ್ವನಿ ತಪಾಸಣೆಯಲ್ಲಿ ಸಮಸ್ಯೆಗಳನ್ನು ಗುರುತಿಸಲು ಅಕೌಸ್ಟಿಕ್‌ ಅನಾಲಿಸಿಸ್‌ಗೆ ರೋಗಿಗಳನ್ನು ಒಳಪಡಿಸಲಾಗುತ್ತದೆ. ಅವರ ಧ್ವನಿಯ ಉತ್ಪನ್ನವನ್ನು ಸಮಗ್ರವಾಗಿ ಗಮನಿಸಲಾಗುತ್ತದೆ.ಧ್ವನಿ ಫ್ರಿಕ್ವೆನ್ಸಿ ಗಮನಿಸಿ ಅಲ್ಲಿನ ಸಮಸ್ಯೆಗಳನ್ನು ಗುರುತಿಸಿ ಅಗತ್ಯವಿದ್ದರೆ ಇಎನ್‌ಟಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಆಯಿಷ್‌ ಸಂಸ್ಥೆ ಧ್ವನಿ ಸಂರಕ್ಷಣಾ ಘಟಕದ ಮುಖ್ಯಸ್ಥೆ ಡಾ.ಯಶೋಧಾ ತಿಳಿಸಿದರು. ‘ಹೆಣ್ಣಿನ ಧ್ವನಿ ತಂತು ಫ್ರಿಕ್ವೆನ್ಸಿ 200 ಮತ್ತು ಗಂಡಿನಲ್ಲಿ 100ರ ಸಂಖ್ಯೆಯಲ್ಲಿರುತ್ತದೆ. ಮಕ್ಕಳಾದರೆ 250ರಿಂದ 300 ಇರುತ್ತದೆ. ಇಲ್ಲಿ ಉಂಟಾಗುವ ಏರಿಳಿತಗಳು ಮುಖ್ಯ ಪಾತ್ರವಹಿಸುತ್ತದೆ. ಇತರ ಧ್ವನಿ ತಂತು ಸಮಸ್ಯೆಗಳನ್ನೂ ಗಮನಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT