ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರೂಣ ಹತ್ಯೆ ತಡೆಗೆ ಜಾಗೃತಿ ಅಗತ್ಯ: ಡಾ.ವಿವೇಕ್‌ ದೊರೈ

ಕಾರ್ಯಾಗಾರದಲ್ಲಿ ಡಾ.ವಿವೇಕ್‌ ದೊರೈ ಹೇಳಿಕೆ
Published 2 ಮಾರ್ಚ್ 2024, 16:22 IST
Last Updated 2 ಮಾರ್ಚ್ 2024, 16:22 IST
ಅಕ್ಷರ ಗಾತ್ರ

ಮೈಸೂರು: ‘ಭ್ರೂಣ ಹತ್ಯೆ ತಡೆಗೆ ಸಮಾಜದ ಎಲ್ಲರಲ್ಲೂ ಜಾಗೃತಿ ಅಗತ್ಯ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಉಪ ನಿರ್ದೇಶಕ ಡಾ.ವಿವೇಕ್‌ ದೊರೈ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ‘ಗರ್ಭಧಾರಣೆ ಪೂರ್ವ ಹಾಗೂ ಪ್ರಸವಪೂರ್ವ ಪತ್ತೆ ತಂತ್ರಜ್ಞಾನ (ಲಿಂಗ ಆಯ್ಕೆ ನಿಷೇಧ) ತಿದ್ದುಪಡಿ ಕಾಯ್ದೆ’ ಕುರಿತು ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಮೈಸೂರು ವಿಭಾಗ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

‘ಭ್ರೂಣ ಹತ್ಯೆಯು ಕೊಲೆ ಮಾಡಿದ್ದಕ್ಕೆ ಸಮನಾದ ಅಪರಾಧವಾಗಿದೆ’ ಎಂದರು.

‘ದೇಶದಲ್ಲಿ ಮೊದಲಿಗೆ ಮಹಾರಾಷ್ಟ್ರದಲ್ಲಿ 1988ರಲ್ಲಿ ಪಿಎನ್‌ಡಿಟಿ ಕಾಯ್ದೆ ಜಾರಿಗೆ ಬಂದಿತು. ನಂತರ 1994ರಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಜಾರಿಗೊಳಿಸಿತು. ಆದರೆ, ಪರಿಣಾಮಕಾರಿಯಾಗಿ ಅನುಷ್ಠಾನ ಆಗಿರಲಿಲ್ಲ. ಇದರ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾದ ಬಳಿಕ 2001ರಲ್ಲಿ ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಪರಿಣಾಮವಾಗಿ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಯಿತು’ ಎಂದು ತಿಳಿಸಿದರು.

‘ಕಾಯ್ದೆ ಜಾರಿಯಲ್ಲಿದ್ದರೂ ದೇಶದಲ್ಲಿ ಇಂದಿಗೂ ಹೆಣ್ಣುಭ್ರೂಣ ಹತ್ಯೆ ಪ್ರಮಾಣ ಕಡಿಮೆಯಾಗಿಲ್ಲ. ಅಂಕಿ–ಅಂಶಗಳ ಪ್ರಕಾರ 2001ರಿಂದ 4.6 ಲಕ್ಷ ಹೆಣ್ಣು ಭ್ರೂಣಹತ್ಯೆ ಮಾಡಲಾಗಿದೆ. ಇದು ದೇಶದ ಜನಸಂಖ್ಯೆಯ ಶೇ 5ಕ್ಕಿಂತಲೂ ಹೆಚ್ಚಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಇದೇ ರೀತಿಯಾಗಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಾ ಹೋದರೆ ಮುಂದಿನ ದಿನಗಳಲ್ಲಿ ಗಂಡು ಮಕ್ಕಳ ಸಂತತಿಯೇ ಹೆಚ್ಚಾಗಿ, ಹೆಣ್ಣು ಮಕ್ಕಳೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದು ತಿಳಿಸಿದರು. ಲಿಂಗಾನುಪಾತ ಹಾಗೂ ಅದರಿಂದ ಉಂಟಾಗುವ ಸಮಸ್ಯೆಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು.

ಡಿಎಚ್‌ಒ ಡಾ.ಪಿ.ಸಿ. ಕುಮಾರಸ್ವಾಮಿ, ಮೈಸೂರು, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಚಿಕ್ಕಮಗಳೂರು, ಉಡುಪಿ, ಮಂಗಳೂರು ಜಿಲ್ಲೆಯ ಡಿಎಚ್‌ಒಗಳು, ಟಿಎಚ್‌ಒಗಳು ಹಾಗೂ ವಿಷಯ ನಿರ್ವಾಹಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT