ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಗೆಮುಕ್ತ ಮನೆಗೆ ಉಜ್ವಲ ಸಹಕಾರಿ: ಪ್ರೊ. ಎಚ್‌.ಆರ್. ಉಮಾ

ಉಜ್ವಲ ಯೋಜನೆಯಡಿಯಲ್ಲಿ ಸಾಮಾಜಿಕ-ಆರ್ಥಿಕ ವೌಲ್ಯಮಾಪನ’ ಕಾರ್ಯಾಗಾರ
Published 17 ಮಾರ್ಚ್ 2024, 6:47 IST
Last Updated 17 ಮಾರ್ಚ್ 2024, 6:47 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಿಂದಾಗಿ ಕೋಟ್ಯಂತರ ಮನೆಗಳು ಹೊಗೆ ಮುಕ್ತವಾಗಿದ್ದು, ಇದನ್ನು ಇನ್ನಷ್ಟು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮಂಡ್ಯ ವಿಶ್ವವಿದ್ಯಾಲಯದ ಸರ್‌ ಎಂ.ವಿ. ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ. ಎಚ್‌.ಆರ್. ಉಮಾ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನಳ ಸಭಾಂಗಣದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ನವದೆಹಲಿಯ ಐಸಿಎಸ್‌ಎಸ್‌ಆರ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಗ್ರಾಮೀಣ ಕರ್ನಾಟಕದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಸಾಮಾಜಿಕ-ಆರ್ಥಿಕ ವೌಲ್ಯಮಾಪನ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಿ.ವಿ.ನರಸಿಂಹರಾವ್ ಕಾಲದಲ್ಲಿ ಪೆಟ್ರೋಲಿಯಂ ಕಂಪನಿಗಳ ಖಾಸಗೀಕರಣವಾದ್ದರಿಂದ, ಹೆಚ್ಚು ಕಂಪನಿಗಳು ಸಿಲಿಂಡರ್‌ ವಿತರಣೆಗೆ ಆಸಕ್ತಿ ತೋರಿ ಜನರಿಗೆ ಸುಲಭವಾಗಿ ಸಿಲಿಂಡರ್ ಸಿಗುವಂತಾಯಿತು. ರಾಜೀವ್ ಗಾಂಧಿ ಸಮಯದಲ್ಲಿ ಹಳ್ಳಿಗಳಿಗೂ ಸಿಲಿಂಡರ್ ತಲುಪಿತು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಮೊದಲಿಗೆ 2016ರಲ್ಲಿ ಉತ್ತರಪ್ರದೇಶದಲ್ಲಿ ಉಜ್ವಲ್ ಯೋಜನೆ ಜಾರಿಗೊಳಿಸಿತು. ಈ ಯೋಜನೆ ಮೂಲಕ ಒಟ್ಟಾರೆ 10 ಕೋಟಿ ಜನರಿಗೆ ಅನಿಲ ಸಂಪರ್ಕ ನೀಡುವ ಉದ್ದೇಶ ಸಾಕಾರಗೊಂಡಿದೆ. ಮನೆಗಳಲ್ಲಿ ಹೊಗೆಯ ವಾತಾವರಣ ತಪ್ಪಿದೆ. ಆದಾಗ್ಯೂ ಗ್ರಾಮೀಣ ಭಾಗಗಳಲ್ಲಿ ಅಡುಗೆ ಸಿಲಿಂಡರ್‌ಗಳನ್ನು ವಾಣಿಜ್ಯ ಉಪಯೋಗಕ್ಕೆ ನೀಡಲಾಗುತ್ತಿದೆ ಎಂಬ ದೂರುಗಳಿವೆ. ಈ ಯೋಜನೆಯ ಸಮರ್ಪಕ ಬಳಕೆ ಆಗಬೇಕಿದೆ ಎಂದು ಸಲಹೆ ನೀಡಿದರು.

ಐಸಿಎಸ್‌ಎಸ್‌ಎಸ್‌ ಸಂಶೋಧನಾ ನಿರ್ದೇಶಕಿ ಆರ್.ಎಚ್. ಪವಿತ್ರಾ ಸಿದ್ಧಪಡಿಸಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಉದ್ದೇಶ, ಗ್ರಾಮೀಣ ಮಹಿಳೆಯರಿಗೆ ಅರಿವು, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಮತ್ತು ಅನುಷ್ಠಾನಗೊಳಿಸುವಲ್ಲಿ ಇರುವ ಅಡೆತಡೆಗಳು ಹಾಗೂ ಅದರ ಯಶಸ್ವಿ ಕಾರ್ಯಾಚರಣೆಗೆ ಶಿಫಾರಸುಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಆಹಾರ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಕೆ. ರಾಮೇಶ್ವರಪ್ಪ ಮಾತನಾಡಿದರು. ವಿ.ವಿ. ಕುಲಪತಿ ಪ್ರೊ. ಶರಣಪ್ಪ ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವರಾದ ಪ್ರೊ. ಎಚ್.ವಿಶ್ವನಾಥ್, ಕೆಎಲ್‌ಎನ್ ಮೂರ್ತಿ, ಪ್ರಾಧ್ಯಾಪಕ ಎಂ.ರಾಮನಾಥಂ ನಾಯ್ಡು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಎಸ್. ರಮಾನಂದ, ಆರ್‌.ಎಚ್. ಪವಿತ್ರಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT