ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್, ಬಿಜೆಪಿ ನೇರ ಸ್ಪರ್ಧೆ

ಘಟಾನುಘಟಿಗಳಿಲ್ಲದ ಸಾಮಾನ್ಯ ಸ್ಪರ್ಧೆ
Last Updated 6 ಫೆಬ್ರುವರಿ 2016, 10:14 IST
ಅಕ್ಷರ ಗಾತ್ರ

ನಂಜನಗೂಡು: ನಂಜನಗೂಡು ವಿಧಾನಸಭಾ ಕ್ಷೇತ್ರ ಎಂದರೆ ದಿವಂಗತ ಎಂ. ಮಹದೇವು ಹಾಗೂ ಈಗಿನ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಅವರ ನಡುವಣ ಜಿದ್ದಾಜಿದ್ದಿಯ ಕ್ಷೇತ್ರವೆಂದೇ ಪ್ರಸಿದ್ಧ. ಆದರೆ, ಮಹದೇವು ನಿಧನರಾಗಿದ್ದು, ಪ್ರಸಾದ್‌ ಅನಾರೋಗ್ಯಪೀಡಿತರಾಗಿರುವ ಕಾರಣ ಇಲ್ಲಿ ಈಗ ಚುನಾವಣೆಯ ರಂಗೇ ಇಲ್ಲದಂತಾಗಿದೆ!

ಈಗಿನ ಪರಿಸ್ಥಿತಿಯನ್ನು ಗಮನಿಸಿರುವ ಸಾಮಾನ್ಯ ಮತದಾರರು, ಇವರಿಬ್ಬರೂ ಘಟಾನುಘಟಿಗಳಿಲ್ಲದ ಸಾಮಾನ್ಯ ಚುನಾವಣೆ ಇದು ಎಂದೇ ವ್ಯಾಖ್ಯಾನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ 5 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿವೆ. ಈ ಬಾರಿಯ ಚುನಾವಣೆಯಲ್ಲಿ ಹೆಗ್ಗಡಹಳ್ಳಿ ಕ್ಷೇತ್ರ ಹೊಸದಾಗಿ ಸೇರ್ಪಡೆಯಾಗಿದ್ದು ಕುತೂಹಲ ಮೂಡಿಸಿದೆ. ಕಳೆದ ಬಾರಿ, ವರುಣಾ ವಿಧಾನಸಭಾ ಕ್ಷೇತ್ರದಲ್ಲಿದ್ದ ಹದಿನಾರು ಕ್ಷೇತ್ರವನ್ನು ಕೈಬಿಟ್ಟು, ಹೊಸದಾಗಿ ತಾಂಡವಪುರ ಕ್ಷೇತ್ರವನ್ನು ಸೃಷ್ಟಿಸಲಾಗಿದೆ. ಜತೆಗೆ, ಹೊಸದಾಗಿ ಸೃಷ್ಟಿಸಲಾಗಿರುವ ಹೆಗ್ಗಡಹಳ್ಳಿ ಕ್ಷೇತ್ರವು ಪರಿಶಿಷ್ಟ ಜಾತಿ ಪುರುಷರಿಗೆ ಮೀಸಲಿಡಲಾಗಿದೆ.

ಲಿಂಗಾಯತ, ಉಪ್ಪಾರ ನಿರ್ಣಾಯಕ: ಈ ಕ್ಷೇತ್ರದಲ್ಲಿನ ಹೆಗ್ಗಡಹಳ್ಳಿ, ದೇಬೂರು, ದೇವಿರಮ್ಮನಹಳ್ಳಿ, ಶಿರಮಳ್ಳಿ, ಹಗಿನವಾಳು ಕ್ಷೇತ್ರಗಳು ಸೇರಿದ್ದು ಒಟ್ಟು 28 ಸಾವಿರ ಮತದಾರರಿದ್ದಾರೆ. ಅದರಲ್ಲಿ 8 ಸಾವಿರ ಲಿಂಗಾಯತರು, 7 ಸಾವಿರ ಪರಿಶಿಷ್ಟ ಜಾತಿ, 5 ಸಾವಿರ ಉಪ್ಪಾರ, 1,758 ಕುರುಬ ಮತದಾರರು ಇದ್ದಾರೆ. ಇಲ್ಲಿ ತುರುಸಿನ ಪೈಪೋಟಿ ಏರ್ಪಟ್ಟರೆ ಲಿಂಗಾಯತ ಹಾಗೂ ಉಪ್ಪಾರ ಜನಾಂಗ ದವರು ನಿರ್ಣಾಯಕರಾಗಲಿದ್ದಾರೆ.

ಕಳಲೆ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಕುಡ್ಲಾಪುರ, ಸಿಂಧುವಳ್ಳಿ, ಕಸುವಿನ ಹಳ್ಳಿ, ನವಿಲೂರು ಸೇರುತ್ತವೆ. ಪರಿಶಿಷ್ಟ ಜಾತಿ ಹಾಗೂ ಲಿಂಗಾಯತ ಜನಾಂಗದ ಮತಗಳು ನಿರ್ಣಾಯಕವಾಗಲಿವೆ ಎನ್ನಲಾಗಿದೆ.

ಹುರಾ ಕ್ಷೇತ್ರ: ಕ್ಷೇತ್ರದಲ್ಲಿ 25 ಸಾವಿರ ಮತದಾರರಿದ್ದು, ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಈ ಕ್ಷೇತ್ರಕ್ಕೆ ಹುರಾ, ಹಲ್ಲರೆ, ಹಾಡ್ಯ, ದೇವರಾಯ ಶೆಟ್ಟಿಪುರ, ಹೆಡಿಯಾಲ ಸೇರುತ್ತವೆ. 9 ಸಾವಿರ ಪರಿಶಿಷ್ಟ ಜಾತಿ, 8 ಸಾವಿರ ಲಿಂಗಾಯತರು, 3 ಸಾವಿರ ಪರಿಶಿಷ್ಟ ಪಂಗಡದ ಮತಗಳಿವೆ. ಲಿಂಗಾಯತ, ಕುರುಬ ಹಾಗೂ ಮುಸ್ಲಿಮರ ಮತಗಳು ನಿರ್ಣಾಯಕ ಎನ್ನಲಾಗಿದೆ.

ಹುಲ್ಲಹಳ್ಳಿ ಸಾಮಾನ್ಯ ಮಹಿಳೆ ಕ್ಷೇತ್ರವಾಗಿದ್ದು, ಕುರಿಹುಂಡಿ, ಹರದನ ಹಳ್ಳಿ, ನಲ್ಲತಾಳಪುರ, ದುಗ್ಗಹಳ್ಳಿ, ಹುಲ್ಲಹಳ್ಳಿಯ ಮತದಾರರು ಸೇರುತ್ತಾರೆ. ಬದನವಾಳು ಕ್ಷೇತ್ರವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, 28 ಸಾವಿರ ಮತದಾರರಿದ್ದಾರೆ. 7 ಸಾವಿರ ಲಿಂಗಾಯತ, 7 ಸಾವಿರ ಪರಿಶಿಷ್ಟ ಜಾತಿ, 4 ಸಾವಿರ ಪರಿಶಿಷ್ಟ ಪಂಗಡ, 5 ಸಾವಿರ ಉಪ್ಪಾರ ಮತದಾರರಿದ್ದಾರೆ. ಉಪ್ಪಾರ ರಿಗೆ ಟಿಕೆಟ್‌ ಸಿಕ್ಕರೆ ಲಿಂಗಾಯತ ಮತ್ತು ಪರಿಶಿಷ್ಟ ಜಾತಿ ಮತದಾರರು ನಿರ್ಣಾಯಕರಾಗುತ್ತಾರೆ.

ದೊಡ್ಡ ಕವಲಂದೆ ಕ್ಷೇತ್ರವು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ದೊಡ್ಡಕವಲಂದೆ, ನೇರಳೆ, ದೇವ ನೂರು, ಕೋಣನೂರು, ದಾಸನೂರು ಸೇರಲಿವೆ. ಒಟ್ಟು 28 ಸಾವಿರ ಮತ ದಾರರು ಇದ್ದು, ಪರಿಶಿಷ್ಟ ಜಾತಿ ಹಾಗೂ ಮುಸ್ಲಿಮರು ನಿರ್ಣಾಯಕರಾಗಲಿದ್ದಾರೆ.

ಹೆಗ್ಗಡಹಳ್ಳಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ನಿಂದಶಿರಮಳ್ಳ ಮಹದೇವಸ್ವಾಮಿ, ಮಹದೇವು, ಬಿಜೆಪಿಯಿಂದ ಡಾ.ಶಿವರಾಮ್ ಹಾಗೂ ಜಯದೇವ್ ಬಣದ ದಯಾನಂದ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಜೆಡಿಎಸ್‌ನಿಂದ ಹಗಿನವಾಳು ಬಸವಣ್ಣ ಸ್ಪರ್ಧಿಸುತ್ತಿದ್ದಾರೆ.

ಕಳಲೆ ಕ್ಷೇತ್ರದಿಂದ ಕಾಂಗ್ರೆಸ್‌ ಮುಖಂಡ ಕುಂಬರಳ್ಳಿ ಸುಬ್ಬಣ್ಣ ಅವರ ಪತ್ನಿ ತೀವ್ರ ಸ್ಪರ್ಧೆ ಒಡ್ಡಲಿದ್ದಾರೆ. ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕರಂಗನಾಯ್ಕ ಅವರ ಸಂಬಂಧಿ ಲಕ್ಷ್ಮೀ ಹಾಗೂ ಲತಾ ಮಹೇಶ್ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಹುರಾ ಕ್ಷೇತ್ರದಿಂದ ಪುಷ್ಪಾ ನಾಗೇಶ್ ರಾಜ್, ಬಿಜೆಪಿಯಿಂದ ಪ್ರೇಮಾ ರಾಜಪ್ಪ ಸ್ಪರ್ಧೆಯಲ್ಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT