ಶುಕ್ರವಾರವೇ ಪಾಲಿಕೆ ಕಚೇರಿ ಖಾಲಿ ಖಾಲಿ..!

7
ಎರಡನೇ ಶನಿವಾರ–ಭಾನುವಾರದ ಸರ್ಕಾರಿ ರಜೆ

ಶುಕ್ರವಾರವೇ ಪಾಲಿಕೆ ಕಚೇರಿ ಖಾಲಿ ಖಾಲಿ..!

Published:
Updated:

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಆಡಳಿತದಲ್ಲಿ ಬಿಗಿಯಿಲ್ಲ. ಹೇಳುವವರು, ಕೇಳುವವರು ಯಾರೂ ಇಲ್ಲ. ಅಧಿಕಾರಿಗಳು ನಡೆದಿದ್ದೇ ಹಾದಿ ಎಂಬ ಸಾರ್ವಜನಿಕರ ಆರೋಪಕ್ಕೆ ಪಾಲಿಕೆ ಕಚೇರಿ ಶುಕ್ರವಾರ ಮತ್ತೊಮ್ಮೆ ಸಾಕ್ಷಿಯಾಯಿತು.

‘ಶುಕ್ರವಾರ ಬೆಳಗಿನ ಅವಧಿಯೂ ಕೆಲ ಅಧಿಕಾರಿಗಳಷ್ಟೇ ಹಾಜರಿದ್ದರೇ; ಮಧ್ಯಾಹ್ನದ ಬಳಿಕ ಬಹುತೇಕ ಅಧಿಕಾರಿಗಳು ಗೈರಾಗಿದ್ದರು. ಯಾರನ್ನೂ ಕೇಳಿದರೂ ಸಮರ್ಪಕವಾಗಿ ಉತ್ತರ ನೀಡಲಿಲ್ಲ. ರಜೆಯ ಮೇಲೆ ತೆರಳಿದ್ದಾರೋ ? ಅನಧಿಕೃತವಾಗಿ ಹೊರ ಹೋಗಿದ್ದಾರೋ ? ಎಂಬುದಕ್ಕೆ ಯಾರೂ ಉತ್ತರ ನೀಡಲಿಲ್ಲ’ ಎಂದು ಪಾಲಿಕೆ ಕಚೇರಿಗೆ ಕಾರ್ಯ ನಿಮಿತ್ತ ಭೇಟಿ ನೀಡಿದ್ದ ವರ್ತಕ ವಿಜಯಜೋಶಿ ‘ಪ್ರಜಾವಾಣಿ’ ಬಳಿ ದೂರಿದರು.

‘ಶುಕ್ರವಾರ ಮಧ್ಯಾಹ್ನದ ಬಳಿಕ ಪಾಲಿಕೆ ಕಚೇರಿಗೆ ಭೇಟಿ ನೀಡಿದ್ದೆ. ಈ ಸಂದರ್ಭ ವಯೋವೃದ್ಧರು ಸೇರಿದಂತೆ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಜನರ ತಂಡವೇ ಪಾಲಿಕೆ ಕಚೇರಿಯಲ್ಲಿ ಬೀಡು ಬಿಟ್ಟಿತ್ತು. ಕರ ತುಂಬಲು ಹಲವರು ಬಂದಿದ್ದರು. ಆದರೆ ಸಂಬಂಧಿಸಿದ ಅಧಿಕಾರಿಗಳೇ ಇಲ್ಲದಿದ್ದುದರಿಂದ ಹಿಡಿಶಾಪ ಹಾಕಿಕೊಂಡು ಮರಳಿದರು. ವಿಜಯಪುರ ಪಾಲಿಕೆ ಇನ್ಯಾವಾಗ ಉದ್ಧಾರ ಆಗಲಿದೆ ಎಂದು ಗೊಣಗಿದವರೇ ಹೆಚ್ಚಿದ್ದರು’ ಎಂದು ಜೋಶಿ ತಿಳಿಸಿದರು.

ಪಾಲಿಕೆಯ ಅಧಿಕಾರಿಗಳ ಸಾಮೂಹಿಕ ಗೈರಿನ ಬಗ್ಗೆ ಕೆಲವರು ಫೇಸ್‌ಬುಕ್‌ ಲೈವ್‌ ಮಾಡಿ ಪ್ರಸಾರ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇದರ ಜತೆಗೆ ಅಧಿಕಾರಿಗಳ ಗೈರಿನ ವಿಡಿಯೋ ಕ್ಲಿಪ್ಪಿಂಗ್‌ ಸಾಮಾಜಿಕ ಜಾಲತಾಣದಲ್ಲಿ ಈ ಭಾಗದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ದೂರು ನೀಡುವೆ:  ‘ತುರ್ತು ಸಭೆ ಆಯೋಜನೆಗೆ ಸಂಬಂಧಿಸಿದಂತೆ ಕೌನ್ಸಿಲ್‌ ಸೆಕ್ರೆಟರಿ ಭೇಟಿಗಾಗಿ, ಶುಕ್ರವಾರ ಮಧ್ಯಾಹ್ನ ನಾನೂ ಹಾಗೂ ಮೇಯರ್‌ ಶ್ರೀದೇವಿ ಲೋಂಗಾವಿ ಪಾಲಿಕೆ ಕಚೇರಿಗೆ ಭೇಟಿ ನೀಡಿದ್ದೆವು. ಆದರೆ ಆ ಸಂದರ್ಭ ಸೆಕ್ರೆಟರಿ ಕಚೇರಿಯಲ್ಲಿರಲಿಲ್ಲ. ಫೋನಚ್ಚಿ ಕೇಳಿದರೇ ಊರಿಗೆ ಹೋಗುತ್ತಿರುವುದಾಗಿ ತಿಳಿಸಿದರು.

ಇದರ ಬಳಿಕ ಪಾಲಿಕೆಯ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿದಾಗ ಅಧಿಕಾರಿಗಳ ಗೈರು ಗೋಚರಿಸಿತು. ಎಷ್ಟು ಮಂದಿ ಗೈರಾಗಿದ್ದಾರೆ, ಹಾಜರಾಗಿದ್ದಾರೆ, ಸಹಿ ಹಾಕಿ ಹೋದವರು ಎಷ್ಟು ಎಂಬ ಮಾಹಿತಿಯಿಲ್ಲ. ಈ ಬಗ್ಗೆ ಸೋಮವಾರ ಜಿಲ್ಲಾಧಿಕಾರಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಲು ಒತ್ತಾಯಿಸುತ್ತೇವೆ’ ಎಂದು ಉಪ ಮೇಯರ್‌ ಗೋಪಾಲ ಘಟಕಾಂಬಳೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !