ಮಕ್ಕಳ ಸಂಖ್ಯೆಗನುಗುಣವಾಗಿ ಕೊಠಡಿ ನಿರ್ಮಿಸಿ

7
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ್ ಅವರಿಂದ ಅಧಿಕಾರಿಗಳಗೆ ಸೂಚನೆ

ಮಕ್ಕಳ ಸಂಖ್ಯೆಗನುಗುಣವಾಗಿ ಕೊಠಡಿ ನಿರ್ಮಿಸಿ

Published:
Updated:
Deccan Herald

ರಾಯಚೂರು: ಜಿಲ್ಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಶಾಲಾ ಕೊಠಡಿಗಳನ್ನು ನಿರ್ಮಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಚೆಗೆ ಕಲ್ಮಲಾ ಹೋಬಳಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲಾ ಕೊಠಡಿಗಳ ಕೊರತೆ ಇರುವುದು ಕಂಡುಬಂತು. ಈ ಕೊರತೆಯನ್ನು ಬೇಗನೆ ಪರಿಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಲೆಗಳಲ್ಲಿ ಬಿಸಿಯೂಟ ಯೋಜನೆಯಡಿಯಲ್ಲಿ ಪ್ರತ್ಯೇಕ ಅಡುಗೆ ಕೋಣೆ ನಿರ್ಮಿಸಿಕೊಳ್ಳಬೇಕು. ಬಿಸಿಯೂಟ ಗುಣಮಟ್ಟದ ಆಹಾರವನ್ನು ಪೂರೈಸಬೇಕೆಂದು ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ನಂದನೂರು ಮಾತನಾಡಿ, ಜಿಲ್ಲೆಯಲ್ಲಿ 406 ಪ್ರಾಥಮಿಕ ಶಾಲೆಗಳು, 69 ಪ್ರೌಢಶಾಲೆಗಳು ಶಿಥಿಲ ವ್ಯವಸ್ಥೆಯಲ್ಲಿವೆ, ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಮಾಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮಾತನಾಡಿ, ರಾಯಚೂರು, ಮಾನ್ವಿ ಮತ್ತು ದೇವದುರ್ಗ ತಾಲ್ಲೂಕುಗಳಲ್ಲಿ ಬಿಸಿಯೂಟದ ಗುಣಮಟ್ಟದ ಕುರಿತು ಹೆಚ್ಚಾಗಿ ದೂರಗಳು ಕೇಳಿ ಬರುತ್ತಿದ್ದು, ಇಲಾಖೆ ಅಧಿಕಾರಿಗಳು ಈ ಕುರಿತು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದರು.

ತುಂಗಾಭದ್ರ ಜಲಾಶಯದಿಂದ ಎರಡು ಲಕ್ಷ ಕ್ಯುಸೆಕ್ ಹಾಗೂ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1 .೮೦ ಲಕ್ಷ ಕ್ಯೂಸೆಕ್ ನೀರನ್ನು ಬಿಟ್ಟಿದ್ದು, ಜಲಾಶಯದಿಂದ ೨.೫೦ ಕ್ಯೂಸೆಕ್ ನೀರನ್ನು ಬಿಟ್ಟಲಿ ಮಾತ್ರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಲಿದೆ. ಯಾವುದಕ್ಕು ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ದವಾಗಿದೆ. ಲಿಂಗಸುಗೂರು ತಾಲ್ಲೂಕಿನ ಯರಗೋಳದೊಡ್ಡಿ, ಮೇಧಾರದೊಡ್ಡಿ, ಓಂಕಾರದೊಡ್ಡಿ ಗ್ರಾಮಗಳು ಪ್ರವಾಹಕ್ಕೆ ತುತ್ತಾಗಲಿದ್ದು, ಅಲ್ಲಿರುವ ಸುಮಾರು 60 ಕುಟುಂಬಗಳ 105 ಜನರೊಂದಿಗೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.50 ದಶ ಲಕ್ಷ ಹೇಕ್ಟರ್ ಬಿತ್ತನೆ ಗುರಿ ಹೊಂದಲಾಗಿತ್ತು, ಅದರಲ್ಲಿ 1.59 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಜೂನ್ ತಿಂಗಳನಲ್ಲಿ ಸುರಿದ ಮಳೆ ನಂತರ ಮಳೆ ಬಾರದೆ ಇರುವುದರಿಂದ 1.1 ಲಕ್ಷ ಹೆಕ್ಟೇರ್‌ ಸಂಪೂರ್ಣ ಬೆಳೆ ಹಾನಿಯಾಗಿದೆ. ಈ ಕುರಿತು ಸ್ಥಳ ಪರಿಶೀಲನೆ ಮಾಡಲಾಗಿದ್ದು, ಬಿತ್ತಲಾಗಿರುವ ಹತ್ತಿ, ತೊಗರಿ, ಸಜ್ಜೆ ಬೆಳೆಗಳು ಸಂಪೂರ್ಣ ನಾಶವಾಗಿವೆ ಎಂದು ಹೇಳಿದರು.

ಪ್ರಸಕ್ತ ವರ್ಷ ಫಸಲ್ ಭೀಮಾ ವಿಮೆ ಯೋಜನೆಯಲ್ಲಿ 71,500 ರೈತರು ಫಲಾನುಭವಿಗಳಾಗಿದ್ದು ಬೆಳೆ ನಾಶವಾಗಿರುವ 1.1 ಲಕ್ಷ ಹೆಕ್ಟೇರ್ ಪ್ರದೇಶದ ಶೇ 90 ರಷ್ಟು ರೈತರು ವಿಮೆಯ ಸೌಲಭ್ಯವನ್ನು ಪಡೆಯಲಿದ್ದಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಪ್ರೋಬೆಷನರಿ ಐಎಎಸ್ ಅಧಿಕಾರಿ ನವೀನ್ ಭಟ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮೊಹ್ಮದ್ ಯೂಸುಫ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !