ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಪುರಸ್ಕಾರ ಗ್ರಾಮಕ್ಕೆ ‘ಕೋಮು’ ಕಂಟಕ

ಬಂಗಾಲಿ, ತಮಿಳು, ತೆಲುಗು ಭಾಷಿಕ ಸದಸ್ಯರೇ ಅಧಿಕ
Published 8 ಆಗಸ್ಟ್ 2023, 19:52 IST
Last Updated 8 ಆಗಸ್ಟ್ 2023, 19:52 IST
ಅಕ್ಷರ ಗಾತ್ರ

ರಾಯಚೂರು: ಉತ್ತಮ ಕಾರ್ಯಗಳಿಂದಾಗಿಯೇ ಎರಡು ಬಾರಿ ‘ಗಾಂಧಿ ಪುರಸ್ಕಾರ’ ಪಡೆದ ಸಿಂಧನೂರು ತಾಲ್ಲೂಕಿನ ಆರ್‌.ಎಚ್‌. ಕ್ಯಾಂಪ್‌–1 (ಪುನರ್ವಸತಿ ಕೇಂದ್ರ) ಗ್ರಾಮ ಪಂಚಾಯಿತಿ ಇದೀಗ ‘ಕೋಮು ರಾಜಕೀಯ’ದಿಂದಾಗಿ ರಾಜ್ಯ ಅಷ್ಟೇ ಅಲ್ಲ ನೆರೆಯ ರಾಜ್ಯಗಳಲ್ಲೂ ಸದ್ದು ಮಾಡಿದೆ.

ಬಾಂಗ್ಲಾದೇಶದಲ್ಲಿ ಹಿಂದೂ–ಮುಸ್ಲಿಮರ ನಡುವಿನ ಕೋಮು ಸಂಘರ್ಷದಿಂದಾಗಿ ಬದುಕಿನ ಆಸೆ ಕಳೆದುಕೊಂಡಿದ್ದವರಿಗೆ ಕೇಂದ್ರ ಸರ್ಕಾರ ಇಲ್ಲಿ ಪುನರ್ವಸತಿ ಕಲ್ಪಿಸಿತ್ತು. ಆ ಪುನರ್ವಸತಿ ಕೇಂದ್ರವೇ ಇಂದು ಆರ್‌.ಎಚ್‌.ಕ್ಯಾಂಪ್‌–1 ಆಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಳು ಗ್ರಾಮಗಳಿವೆ. 

ಮುಸ್ಲಿಂ ಸದಸ್ಯರೊಬ್ಬರು ಪಂಚಾಯಿತಿ ಅಧ್ಯಕ್ಷರಾದ ಒಂದೇ ಕಾರಣಕ್ಕೆ ಬಿಜೆಪಿ ಹಾಗೂ ಜೆಡಿಎಸ್‌ ಬೆಂಬಲಿತ 15 ಸದಸ್ಯರು ರಾಜೀನಾಮೆ ನೀಡಿದ್ದಾರೆ. ಇದು ಬಂಗಾಲಿ ಪುನರ್ವಸತಿ ಕೇಂದ್ರಗಳ ಜನರ ನೆಮ್ಮದಿಯನ್ನೇ ಹಾಳು ಮಾಡಿದೆ. ಕೋಮುದಳ್ಳುರಿಯಿಂದಾಗಿಯೇ ಬಾಂಗ್ಲಾದೇಶ ತೊರೆದು ಇಲ್ಲಿಗೆ ಬಂದು ನೆಲೆಸಿದರೂ ದ್ವೇಷ ಶಮನಗೊಳ್ಳದಿರುವುದು ಆತಂಕಕ್ಕೆ ಮುಖ್ಯ ಕಾರಣವಾಗಿದೆ.

38 ಸಂಖ್ಯಾಬಲದ ಆರ್‌.ಎಚ್‌. ಕ್ಯಾಂಪ್‌–1 ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಬೆಂಬಲಿತ 19, ಬಿಜೆಪಿ, ಜೆಡಿಎಸ್‌ ಬೆಂಬಲಿತ 15 ಹಾಗೂ ನಾಲ್ವರು ಸ್ವತಂತ್ರ ಸದಸ್ಯರು ಇದ್ದಾರೆ. ಆಗಸ್ಟ್‌ 2ರಂದು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು.

ಕಾಂಗ್ರೆಸ್‌, ಬಿಜೆಪಿ ಬೆಂಬಲಿತರಲ್ಲಿ ತಲಾ ಒಬ್ಬರು ಹಾಗೂ ಸ್ವತಂತ್ರವಾಗಿ ಒಬ್ಬರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ 19 ಮತಗಳೊಂದಿಗೆ ಆಯ್ಕೆಯಾಗಿದ್ದರು. ಒಂದು ಮತ ತಿರಸ್ಕೃತಗೊಂಡಿತ್ತು. ಪಕ್ಷೇತರ ಅಭ್ಯರ್ಥಿಗೆ ಒಂದೇ ಮತ ಬಂದಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿ 17 ಮತಗಳನ್ನು ಪಡೆದಿದ್ದರು. ಮತದಾನದವರೆಗೂ ಸುಮ್ಮನಿದ್ದ ಬಿಜೆಪಿ–ಜೆಡಿಎಸ್‌ ಬೆಂಬಲಿತ ಸದಸ್ಯರು ಮುಸ್ಲಿಂ ವ್ಯಕ್ತಿ ಗೆದ್ದ ನಂತರ ತಕಾರರು ಎತ್ತಿದ್ದಾರೆ.

ಜುಲೈನಲ್ಲಿ ಕ್ಯಾಂಪ್‌ನಲ್ಲಿ ನಡೆದ ಹಿಂದೂ–ಮುಸ್ಲಿಮರ ನಡುವಿನ ಗಲಾಟೆ ವಿಷಯವನ್ನೇ ರಾಜಕೀಯಕ್ಕೆ ಬಳಸಿಕೊಂಡು 15 ಸದಸ್ಯರು ಇದೀಗ ರಾಜೀನಾಮೆ ಸಲ್ಲಿಸಿದ್ದಾರೆ. ‘ಅಧ್ಯಕ್ಷರು ಮುಸ್ಲಿಮರು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇವೆ’ ಎಂದು ಬಹಿರಂಗವಾಗಿಯೇ ಹೇಳಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ವಿವಾದ ಸೃಷ್ಟಿಸಲು ರಾಜೀನಾಮೆ:

ನಿಯಮಾವಳಿ ಪ್ರಕಾರ ಸದಸ್ಯರು ಅಧ್ಯಕ್ಷರಿಗೆ ನೇರವಾಗಿ ರಾಜೀನಾಮೆ ಸಲ್ಲಿಸಬೇಕು. ಆದರೆ, ಪಿಡಿಒ ಕಚೇರಿಯಲ್ಲಿದ್ದಾಗಲೇ ರಾಜೀನಾಮೆ ಪತ್ರಗಳನ್ನು ಕಚೇರಿಯ ಇನ್‌ವರ್ಡ್‌ನಲ್ಲಿ ಕೊಟ್ಟಿದ್ದಾರೆ. ಪಂಚಾಯಿತಿ ಅಧ್ಯಕ್ಷರಿಗೆ ಸಾಮಾನ್ಯ ಸಭೆ ಕರೆದು ರಾಜೀನಾಮೆ ಸ್ವೀಕರಿಸುವ ಅಧಿಕಾರ ಇದೆ.

‘ಕಾನೂನು ಬದ್ಧವಾಗಿಯೇ ನಡೆದುಕೊಳ್ಳಬೇಕಿದ್ದರೆ ಸದಸ್ಯರು ನನಗೆ ರಾಜೀನಾಮೆ ಪತ್ರ ಸಲ್ಲಿಸಬಹುದಿತ್ತು. ಆದರೆ, ಸದಸ್ಯರು ಟಪಾಲು ಬರುವ ಇನ್‌ವರ್ಡ್‌ನಲ್ಲಿ ಕೊಟ್ಟಿದ್ದಾರೆ. ರಾಜೀನಾಮೆ ಪತ್ರ ವಾಪಸ್‌ ಪಡೆಯಲು ಅಧ್ಯಕ್ಷರಿಗೇ ಮನವಿ ಕೊಡಬೇಕಾಗುತ್ತದೆ. ರಾಜೀನಾಮೆ ಕೊಟ್ಟು 15 ದಿನ ಕಳೆದರೂ ಸುಮ್ಮನೆ ಕುಳಿತರೆ ಸ್ವೀಕೃತ ಎಂದೇ ಭಾವಿಸಬೇಕಾಗುತ್ತದೆ’ ಎಂದು ಲಿಂಗಸುಗೂರು ಉಪ ವಿಭಾಗಾಧಿಕಾರಿ ಅವಿನಾಶ ಶಿಂದೆ ಹೇಳಿದ್ದಾರೆ.

‘15 ಸದಸ್ಯರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಪತ್ರಗಳು ಪಂಚಾಯಿತಿಯಲ್ಲಿದ್ದು, ಸದಸ್ಯರ ಮನವೊಲಿಸುವ ಪ್ರಯತ್ನ ನಡೆದಿದೆ. 15 ದಿನ ಕಾದು ಅವುಗಳನ್ನು ಉಪ ವಿಭಾಗಾಧಿಕಾರಿ ಅವರಿಗೆ ಒಪ್ಪಿಸುತ್ತೇವೆ. ಮುಂದಿನ ನಿರ್ಧಾರ ಚುನಾವಣಾ ಅಧಿಕಾರಿಗಳಿಗೆ ಬಿಟ್ಟಿದ್ದು’ ಎಂದು ಪಂಚಾಯಿತಿ ಅಧ್ಯಕ್ಷ ರೆಹಮತ್ ಪಾಷಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

‘ಪಂಚಾಯಿತಿ ಸದಸ್ಯರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ ದಿನದಿಂದ 15 ದಿನ ಕಾಯುತ್ತೇವೆ. ಈ ಅವಧಿಯಲ್ಲಿ ರಾಜೀನಾಮೆ ವಾಪಸ್‌ ಪಡೆದಿರುವ ಕುರಿತು ಲಿಖಿತ ಪತ್ರ ಕೊಟ್ಟರೆ ಸದಸ್ಯತ್ವ ಮುಂದುವರಿಯಲಿದೆ. ಇಲ್ಲದಿದ್ದರೆ ನಂತರ ತೆರವಾದ ಸ್ಥಾನಗಳಿಗೆ ಹೊಸದಾಗಿ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸುತ್ತೇವೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ತಿಳಿಸಿದ್ದಾರೆ.

ಸದಸ್ಯರು ತರಾಟೆಗೆ: ರಾಜೀನಾಮೆ ಸಲ್ಲಿಸಿದ ಸದಸ್ಯರ ವಿರುದ್ಧ ಗ್ರಾಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ‘ನೀವು ರಾಜೀನಾಮೆ ಸಲ್ಲಿಸುವುದೇ ಆಗಿದ್ದರೆ ಚುನಾವಣೆಗೆ ಸ್ಪರ್ಧಿಸಿದ್ದು ಏಕೆ?’ ಎಂದು ಪಂಚಾಯಿತಿಗೆ ಆಯ್ಕೆಯಾಗಿರುವ ಸದಸ್ಯರು, ಮಹಿಳಾ ಸದಸ್ಯರು ಹಾಗೂ ಅವರ ಗಂಡಂದಿರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಂಧನೂರು ತಾಲ್ಲೂಕಿನ ಆರ್‌.ಎಚ್‌. ಕ್ಯಾಂಪ್‌–1 ಪಂಚಾಯಿತಿ ಅಧ್ಯಕ್ಷ ರೆಹಮತ್ ಪಾಷಾ ಸದಸ್ಯರೊಂದಿಗೆ ಸಮಾಲೋಜನೆಯಲ್ಲಿ ತೊಡಗಿದ್ದಾರೆ
ಸಿಂಧನೂರು ತಾಲ್ಲೂಕಿನ ಆರ್‌.ಎಚ್‌. ಕ್ಯಾಂಪ್‌–1 ಪಂಚಾಯಿತಿ ಅಧ್ಯಕ್ಷ ರೆಹಮತ್ ಪಾಷಾ ಸದಸ್ಯರೊಂದಿಗೆ ಸಮಾಲೋಜನೆಯಲ್ಲಿ ತೊಡಗಿದ್ದಾರೆ
Quote - ‘ಮೊದಲ ಬಾರಿಗೆ ಅಧ್ಯಕ್ಷನಾಗಿದ್ದೇನೆ. ನನಗೆ ಗ್ರಾಮದ ಜನರ ಬೆಂಬಲ ಇದೆ. ಆದರೆ ಕೆಲವು ಕಿಡಿಗೇಡಿಗಳು ಕೋಮುಬಣ್ಣ ಹಚ್ಚಿ ಜನರ ಮನಸ್ಸು ಕೆಡಿಸುವ ಕೆಲಸ ಮಾಡುತ್ತಿದ್ದಾರೆ.
– ರೆಹಮತ್‌ ಪಾಷಾ ಅಧ್ಯಕ್ಷ ಆರ್‌.ಎಚ್‌. ಕ್ಯಾಂಪ್‌–1 ಗ್ರಾ.ಪಂ.

ಒಬ್ಬರೇ ಮುಸ್ಲಿಂ ಸದಸ್ಯ

ಒಟ್ಟು 38 ಸದಸ್ಯರಲ್ಲಿ 20 ಬಂಗಾಲಿ 5 ತಮಿಳು 8 ಕನ್ನಡ 4 ತೆಲುಗು ಹಾಗೂ ಒಬ್ಬರು ಮಾತ್ರ ಉರ್ದು ಭಾಷಿಕರಿದ್ದಾರೆ. ಇವರೆಲ್ಲರೂ 50 ವರ್ಷಗಳ ಹಿಂದೆ ಹೊರಗಿನಿಂದ ಬಂದು ನೆಲೆಸಿದ್ದಾರೆ. ಸಿಂಧನೂರಿನ ಮೂಲದವರೇ ಆಗಿರುವ ರೆಹಮತ್‌ ಪಾಷಾ ಅವರಿಗೆ ಕನ್ನಡ ಓದುಬರಹ ಬರುತ್ತದೆ. ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿಯೇ ಮತದಾರರು ಆಯ್ಕೆ ಮಾಡಿದ್ದಾರೆ. ಪ್ರಾರಂಭದಲ್ಲಿ ಎಲ್ಲ ಬಂಗಾಲಿ ಸದಸ್ಯರು ಇವರನ್ನೇ ಬೆಂಬಲಿಸಿದ್ದರು. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತ ನಂತರ ರಾಜಕೀಯ ವಾತಾವರಣ ಕಲುಷಿತಗೊಂಡಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ. ‘ಕಾಂಗ್ರೆಸ್‌ ಚುನಾಯಿತ ಸದಸ್ಯರ ಸಭೆಯಲ್ಲಿ ಬಂಗಾಲಿ ಸಮುದಾಯದವರೇ ಅಧಿಕ ಇರುವ ಕಾರಣ ಬಂಗಾಲಿಯವರು ಸದಸ್ಯರಾಗುವುದು ಒಳಿತು ಎಂದು ನಾನೇ ಸಲಹೆ ನೀಡಿದ್ದೆ. ಆದರೆ ಬಂಗಾಲಿಗಳು ನನ್ಮ ಮೇಲೆ ವಿಶ್ವಾಸ ಇಟ್ಟು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ಮನವಿ ಮಾಡಿ ಆಯ್ಕೆಯನ್ನೂ ಮಾಡಿದರು’ ಎಂದು ರೆಹಮತ್‌ ಪಾಷಾ ಪ್ರತಿಕ್ರಿಯಿಸಿದ್ದಾರೆ.

ಜಾತಿ ರಾಜಕಾರಣ ಮಾಡಿದ್ದರೆ ತಪ್ಪು

‘ಬಿಜೆಪಿ ಬೆಂಬಲಿತನಾಗಿ ನಾನು ಸ್ಪರ್ಧಿಸಿದ್ದೆ. 19 ಜನ ನನಗೆ ಆತ್ಮೀಯವಾಗಿದ್ದರೂ 17 ಜನ ಮಾತ್ರ ನನ್ನ ಪರವಾಗಿ ಮತ ಚಲಾಯಿಸಿದ್ದರು. ನಾನು ಆಸ್ಪತ್ರೆಗೆ ದಾಖಲಾಗಿದ್ದ ಅವಧಿಯಲ್ಲಿ 15 ಜನ ರಾಜೀನಾಮೆ ಸಲ್ಲಿಸಿದ್ದು ಕಾರಣ ತಿಳಿದಿಲ್ಲ. ನಾನು ರಾಜೀನಾಮೆ ಕೊಟ್ಟಿಲ್ಲ’ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡ ಸದಸ್ಯ ಪ್ರದೀಪ ದಾಸರ್ ತಿಳಿಸಿದರು. ‘ಪಂಚಾಯಿತಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಮುಸ್ಲಿಮರು ಅಧ್ಯಕ್ಷರಾಗಿಲ್ಲ. ಮುಸ್ಲಿಂ ಎಂಬ ಕಾರಣಕ್ಕೆ ಹೊಸ ಅಧ್ಯಕ್ಷರ ಆಯ್ಕೆಯನ್ನು ವಿರೋಧಿಸಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುತ್ತೇನೆ. ರಾಜೀನಾಮೆ ನೀಡಿದ 15 ಜನರನ್ನು ಕರೆಸಿ ಈಗಾಗಲೇ ತಾಲ್ಲೂಕು ಪಂಚಾಯಿತಿ ಇಒ ಮಾತನಾಡಿದ್ದಾರೆ. ಅಭಿವೃದ್ಧಿಗೆ ಆದ್ಯತೆ ಕೊಟ್ಟು ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದ್ದಾರೆ. ರಾಜೀನಾಮೆ ಹಿಂದಕ್ಕೆ ಪಡೆಯುವ ವಿಚಾರ ಸದಸ್ಯರಿಗೆ ಬಿಟ್ಟಿದ್ದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT