ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ | ಕಾಡೆಮ್ಮೆ, ಹಂದಿಗಳ ಹಾವಳಿ: ಬೆಳೆ ರಕ್ಷಣೆಗೆ ರೈತರ ಹರಸಾಹಸ

ಮಂಜುನಾಥ ಎನ್‌ ಬಳ್ಳಾರಿ
Published 21 ನವೆಂಬರ್ 2023, 4:43 IST
Last Updated 21 ನವೆಂಬರ್ 2023, 4:43 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದ ಸುತ್ತ ಮುತ್ತಲಿನ ಜಮೀನುಗಳಿಗೆ ಕಾಡೆಮ್ಮೆ ಹಾಗೂ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು ಬೆಳೆ ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

ಮಳೆ ಕೊರತೆಯಿಂದ ಹತ್ತಿ, ತೊಗರಿ, ಮೆಣಸಿನಕಾಯಿ ಮತ್ತು ಜೋಳ ಸೇರಿದಂತೆ ಬಹುತೇಕ ಬೆಳೆಗಳು ನಿರೀಕ್ಷಿತ ಬೆಳವಣಿಗೆಯಾಗಿಲ್ಲ ಮತ್ತು ಹೆಚ್ಚಾಗಿ ಕಾಡುತ್ತಿರುವ ರೋಗಭಾಧೆಯಿಂದ ಬೆಳೆ ರಕ್ಷಣೆಗೆ ರೈತರು ಕಷ್ಟಪಡುತ್ತಿದ್ದಾರೆ. ಇದೀಗ ಹಿಂಡು ಹಿಂಡಾಗಿ ಜಮೀನುಗಳಿಗೆ ದಾಳಿ ಇಡುತ್ತಿರುವ ಕಾಡಮ್ಮೆ ಹಾಗೂ ಹಂದಿ ಹಿಂಡುಗಳು ಬೆಳೆಗಳನ್ನು ತುಳಿದು, ತಿಂದು ಹಾಳು ಮಾಡುತ್ತಿದ್ದು ರೈತರ ನಿದ್ದೆಗೆಡಿಸಿವೆ.

ʼಹಗಲು ರಾತ್ರಿ ಎನ್ನದೆ ಜಮೀನುಗಳಿಗೆ ನುಗ್ಗುತ್ತಿರುವ ಕಾಡೆಮ್ಮೆಗಳೂ ಬೆಳೆಗಳನ್ನು ತುಳಿದು ಕಡಿದು ಹಾಳು ಮಾಡುತ್ತಿವೆ. ನಿಯಂತ್ರಣಕ್ಕೆ ಮುಂದಾದ ರೈತರ ಮೇಲೂ ದಾಳಿ ಮಾಡುತ್ತಿವೆ. ಹೀಗಾಗಿ ಮಳೆ ಕೊರತೆಯ ನಡುವೆ ಅಳಿದುಳಿದ ಬೆಳೆಗಳ ರಕ್ಷಣೆಗೂ ಸಮಸ್ಯೆ ಎದುರಿಸುವಂತಾಗಿದೆʼ ಎಂದು ರೈತರು ಅಳಲು ತೋಡಿಕೊಂಡರು.

ʼಅಂದಾಜು 8 ಎಕರೆ ಜಮೀನಿನಲ್ಲಿ ತೊಗರಿ ಮತ್ತು ಜೋಳ ಬೆಳೆದಿದ್ದು ರೋಗಬಾಧೆ ನಿಯಂತ್ರಣಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಈಗ ಕಾಡೆಮ್ಮೆ, ಕಾಡು ಹಂದಿ ಹಾಗೂ ಇತರೆ ಪ್ರಾಣಿಗಳು ಬೆಳೆಗಳನ್ನು ಹಾಳು ಮಾಡುತ್ತಿವೆ. ಹೀಗಾಗಿ ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಜಮೀನುಗಳಲ್ಲೇ ಇರುವಂತಾಗಿದೆʼ ಎಂದು ರೈತ ಮೌನೇಶ ಹಿರೇಕುರುಬರ ಹೇಳಿದರು.

‘15 ಎಕರೆ ಜಮೀನಿನಲ್ಲಿ ಜೋಳದ ಬೆಳೆ ಇದೆ. ಜಮೀನಿಗೆ ಪ್ರಾಣಿಗಳು ದಾಂಗುಡಿಯಿಟ್ಟ ಪರಿಣಾಮ ಬೆಳೆ ನೆಲಕಚ್ಚಿದೆ. ರಾತ್ರಿ ಒಬ್ಬರೆ ಇದ್ದರೇ ಮನುಷ್ಯರ ಮೇಲೂ ದಾಳಿ ಮಾಡುತ್ತವೆ. ಹೀಗಾಗಿ ರೈತರು ಗುಂಪು ಗುಂಪಾಗಿ ಬೆಂಕಿ ಬೆಳಕಿನಲ್ಲಿ ಇಡೀ ರಾತ್ರಿ ಜಮೀನುಗಳಲ್ಲಿ ಓಡಾಡಬೇಕಿದೆ. ಈ ಕಡೆಯಿಂದ ಓಡಿಸಿದರೆ, ಆ ಕಡೆಯಿಂದ ದಾಳಿ ಮಾಡುವ ಎಮ್ಮೆಗಳನ್ನು ಓಡಿಸಿ ಸುಸ್ತಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಮುಂದಾಗಬೇಕುʼ ಎಂದು ರೈತ ನಾಗರಾಜ ಯಾದವ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT