ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎತ್ತುಗಳು ರೈತನ ಬದುಕಿನ ಭಾಗ: ಕೆ.ವಿರೂಪಾಕ್ಷಪ್ಪ

ಜಾನುವಾರುಗಳ ವಿವಿಧ ಸ್ಪರ್ಧೆಗಳಿಗೆ ಚಾಲನೆ
Published 3 ಜುಲೈ 2024, 14:20 IST
Last Updated 3 ಜುಲೈ 2024, 14:20 IST
ಅಕ್ಷರ ಗಾತ್ರ

ಸಿಂಧನೂರು: ‘ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳು ರೈತನ ಬದುಕಿನ ಭಾಗವಾಗಿದ್ದು, ಅವುಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಕಾರಹುಣ್ಣಿಮೆ. ಈ ಉದ್ದೇಶದಿಂದ ರೈತರು ವಿಶೇಷವಾಗಿ ಕಾರಹುಣ್ಣಿಮೆ ಆಚರಿಸುತ್ತಾರೆ’ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

ನಗರದ ಕುಷ್ಟಗಿ ರಸ್ತೆ ಮಾರ್ಗದಲ್ಲಿರುವ ಜಾನುವಾರಗಳ ಹಳೆ ಸಂತೆ ಮಾರುಕಟ್ಟೆ ಆವರಣದಲ್ಲಿ ತಾಲ್ಲೂಕು ರೈತ ಕ್ಷೇಮಾಭಿವೃದ್ಧಿ ಕಾರಹುಣ್ಣಿಮೆ ಸಾಂಸ್ಕೃತಿಕ ಕ್ರೀಡಾ ಉತ್ಸವ ಟ್ರಸ್ಟ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಯೋಗದಲ್ಲಿ ಬುಧವಾರ ಕಾರಹುಣ್ಣಿಮೆ ಪ್ರಯುಕ್ತ ಏರ್ಪಡಿಸಿದ್ದ ಜಾನುವಾರುಗಳಿಗೆ ವಿವಿಧ ಸ್ಪರ್ಧೆ ಹಾಗೂ ಯುವಕರಿಗೆ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದು ಒಕ್ಕಲತನ ಸಂಕಷ್ಟದ ಪರಿಸ್ಥಿತಿಗೆ ಬಂದು ನಿಂತಿದೆ. ನಮ್ಮೆಲ್ಲರ ಮನೆಗಳಲ್ಲಿ ಎತ್ತುಗಳು ಇಲ್ಲದಂತಾಗಿದ್ದು, ಯಂತ್ರಗಳ ಬಳಕೆ ಹೆಚ್ಚಾಗಿದೆ. ಅವುಗಳನ್ನು ಸಾಕಲು ಆಳುಗಳ ಸಿಗುತ್ತಿಲ್ಲ. ಬಲವಾದ ಎತ್ತುಗಳನ್ನು ಆರೈಕೆ ಮಾಡಿ ಸ್ಪರ್ಧೆಗೆ ತಯಾರು ಮಾಡಲು ದೊಡ್ಡ ರೈತರಿಂದಲೇ ಸಾಧ್ಯ ಎಂದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ರೈತರ ಬದುಕು ಹಸನುಗೊಳಿಸುವಲ್ಲಿ ಎತ್ತುಗಳ ಪಾತ್ರ ದೊಡ್ಡದಿದೆ. ಕೃಷಿ ಸಂಪತ್ತು ಹೆಚ್ಚಿಸಲು ಹೆಗಲು ಕೊಟ್ಟು ದುಡಿಯುವ ಎತ್ತುಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಒಕ್ಕಲತನ ನಿಲ್ಲಬಾರದು. ರೈತರ ಏಳ್ಗೆಗೆ ಯೋಜನೆಗಳು ರೂಪುಗೊಳ್ಳಬೇಕು. ಕಳೆದ ನಾಲ್ಕು ವರ್ಷಗಳಿಂದ ಎಪಿಎಂಸಿ ಹಾಗೂ ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕಾರಹುಣ್ಣಿಮೆ ಆಚರಿಸುತ್ತಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಸಂಗ್ರಾಣಿ ಕಲ್ಲು, ಗುಂಡು ಎತ್ತುವ ಸ್ಪರ್ಧೆ ಜೊತೆಗೆ ಮಹಿಳಾ ರೈತರಿಗೆ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದು ಹೇಳಿದರು.

ಕಾರಹುಣ್ಣಿಮೆ ಹಬ್ಬದ ಹಿನ್ನೆಲೆಯಲ್ಲಿ ಕೈಗೊಳ್ಳುವ ಸ್ಪರ್ಧೆಗಳು ಆರೋಗ್ಯಕರವಾಗಿವೆ. ಸೋಲು-ಗೆಲುವು ನೋಡದೆ ತಮ್ಮ ಎತ್ತುಗಳನ್ನು ಸ್ಪರ್ಧಿಗಿಳಿಸುವ ಮೂಲಕ ರೈತರು ಸಂಭ್ರಮಿಸಬೇಕು ಎಂದರು.

ಟ್ರಸ್ಟ್ ಕಾರ್ಯದರ್ಶಿ ವೀರೇಶ ಯಡಿಯೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಚನ್ನನಗೌಡ ಮೇಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಎಪಿಎಂಸಿ ಕಾರ್ಯದರ್ಶಿ ಎಂ.ರವಿಚಂದ್ರ, ಟಿಎಪಿಸಿಎಂಎಸ್ ನಿರ್ದೇಶಕ ಸಂಜಯ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಖಾಜಿಮಲಿಕ್ ವಕೀಲ, ಜೆಡಿಎಸ್ ಮುಖಂಡ ಅಭಿಷೇಕ ನಾಡಗೌಡ ಹಾಜರಿದ್ದರು.


ಜೋಡೆತ್ತುಗಳಿಂದ ಕಲ್ಲು ಎಳೆಯುವ ಸ್ಪರ್ಧೆ ಆಕರ್ಷಕ

ನಗರದ ಜಾನುವಾರಗಳ ಹಳೆ ಸಂತೆ ಮಾರುಕಟ್ಟೆ ಆವರಣದಲ್ಲಿ 2.1 ಟನ್ ತೂಕದ ಕಲ್ಲನ್ನು ಜೋಡೆತ್ತುಗಳಿಂದ ಎಳೆಯುವ ಸ್ಪರ್ಧೆಯು ಅತ್ಯಂತ ಆಕರ್ಷಕವಾಗಿತ್ತು.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 12 ಜೋಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಜೋಡೆತ್ತುಗಳು ಕಲ್ಲನ್ನು ಎಳೆಯುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ರೈತರು, ಸಾರ್ವಜನಿಕರು, ಯುವಕರು ಸೀಳ್ಳೆ, ಕೇಕೆ ಹಾಕಿ, ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿ ಸಂಭ್ರಮಿಸಿದರು.

ಈ ಸ್ಪರ್ಧೆಯಲ್ಲಿ ರವಿಗೌಡ ಬಸವರಾಜಪ್ಪ ಮಾರಪಳ್ಳಿ ಎತ್ತುಗಳಿಗೆ ಪ್ರಥಮ ಬಹುಮಾನ ₹ 40 ಸಾವಿರ,  ದ್ವಿತೀಯ ಬಹುಮಾನ ₹30 ಸಾವಿರ, ಶರಣಪ್ಪ ಕಲ್ಲೂರು ಎತ್ತುಗಳಿಗೆ ತೃತೀಯ ಬಹುಮಾನ ₹20 ಸಾವಿರ, ಅಯ್ಯಾಳೆಪ್ಪ ಮಂಜಲಾಪುರ ಎತ್ತುಗಳಿಗೆ ನಾಲ್ಕನೇ ಬಹುಮಾನ ₹10 ಸಾವಿರ ನೀಡಿ ಸನ್ಮಾನಿಸಲಾಯಿತು.

ಸಿಂಧನೂರಿನಲ್ಲಿ ಬುಧವಾರ ಕಾರಹುಣ್ಣಿಮೆ ಪ್ರಯುಕ್ತ ಏರ್ಪಡಿಸಿದ್ದ ಜಾನುವಾರುಗಳಿಗೆ ವಿವಿಧ ಸ್ಪರ್ಧೆಗೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಚಾಲನೆ ನೀಡಿದರು
ಸಿಂಧನೂರಿನಲ್ಲಿ ಬುಧವಾರ ಕಾರಹುಣ್ಣಿಮೆ ಪ್ರಯುಕ್ತ ಏರ್ಪಡಿಸಿದ್ದ ಜಾನುವಾರುಗಳಿಗೆ ವಿವಿಧ ಸ್ಪರ್ಧೆಗೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಚಾಲನೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT