ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಸಿಐನಿಂದ ರಾಯಚೂರು ಜಿಲ್ಲೆಗೆ ₹3.78 ಕೋಟಿ ನೆರವು

ಅಪೌಷ್ಟಿಕ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕಾಂಶ ಪೂರೈಕೆ ಕಾರ್ಯಕ್ರಮ
Last Updated 18 ಏಪ್ರಿಲ್ 2023, 14:13 IST
ಅಕ್ಷರ ಗಾತ್ರ

ರಾಯಚೂರು: ಮಹತ್ವಾಕಾಂಕ್ಷೆ ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು ಕಂಪೆನಿ ಸಾಮಾಜಿ ಜವಾಬ್ದಾರಿ (ಸಿಎಸ್‌ಆರ್) ಅನುದಾನದಡಿ ಹೆಚ್ಚುವರಿ ಪೌಷ್ಟಿಕಾಂಶದ ನೀಡುವ ಕಾರ್ಯಕ್ರಮ ಯಶಸ್ವಿಗೊಳಿಸುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಜಲನಿರ್ಮಲ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೇಂದ್ರೀಯ ಉಗ್ರಾಣ ನಿಗಮದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಿಎಸ್‌ಆರ್ ಉಪಕ್ರಮಗಳಡಿ ಮಹತ್ವಾಕಾಂಕ್ಷೆ ಜಿಲ್ಲೆ ರಾಯಚೂರಿನ ಅಪೌಷ್ಟಿಕ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕಾಂಶದ ಪೂರೈಕೆಯ ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಚ್ಚುವರಿ ಪೌಷ್ಟಿಕಾಂಶ ಪೂರೈಕೆಗೆ ₹3.78 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಜಿಲ್ಲೆಗೆ ಇಲ್ಲಿಯವರೆಗೂ ಹಲವು ಕಂಪನಿಗಳಿಂದ ಬಿಡುಗಡೆಯಾದ ಅನುದಾನಕ್ಕೆ ಹೋಲಿಸಿದರೆ ಈ ಮೊತ್ತವು ಅತ್ಯಂತ ಹೆಚ್ಚಿನ ಅನುದಾನವಾಗಿದೆ ಎಂದರು.

ಒಂದು ವರ್ಷ ಮುಂಚಿತವಾಗಿ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕಾಂಶ ಪೂರೈಸಲಾಗಿತ್ತು ಮತ್ತು ಈ ಪೌಷ್ಟಿಕಾಂಶದಿಂದ ಮಕ್ಕಳಲ್ಲಿ ಆಗುವ ಪರಿಣಾಮಗಳನು ಆಧರಿಸಿ ಹೆಚ್ಚುವರಿ ಪೌಷ್ಟಿಕಾಂಶದ ಪೂರೈಕೆಗೆ ಸಿಎಸ್‌ಆರ್ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಕೇಂದ್ರೀಯ ಉಗ್ರಾಣ ನಿಗಮವು ಈ ಕಾರ್ಯಕ್ರಮವನ್ನು ಉತ್ತಮ ಕಾರ್ಯಕ್ರಮವೆಂದು ಗಣನೆಗೆ ತೆಗೆದುಕೊಂಡು ಒಂದು ವರ್ಷಗಳ ಕಾಲ ಕಾರ್ಯಕ್ರಮಕ್ಕೆ ಸಹಕರಿಸಿದೆ. ಮಕ್ಕಳಲ್ಲಿ ಆಗುವ ಬದಲಾವಣೆಗಳನ್ನು ನಿರಂತರವಾಗಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗಮನಿಸಲಾಗುತ್ತಿತ್ತು. ಇದೀಗ ಹೆಚ್ಚುವರಿ ಪೌಷ್ಟಿಕಾಂಶ ಕಾರ್ಯಕ್ರಮವು ಯಶಸ್ವಿಯಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 0-6 ವರ್ಷದೊಳಗಿನ ಮಕ್ಕಳಲ್ಲಿ ಸಾಧಾರಣ ಅಪೌಷ್ಟಿಕತೆ ಮತ್ತು ತೀವ್ರ ಅಪೌಷ್ಟಿಕತೆ ಕಂಡುಬಂದಿದ್ದು, ಸರ್ಕಾರದಿಂದ ಪೌಷ್ಟಿಕ ಆಹಾರ ದೊರೆಯುತ್ತಿತ್ತು. ಆದರೆ ಸುಮಾರು 300 ಮಕ್ಕಳಲ್ಲಿ ಹೆಚ್ಚಿನ ಅಪೌಷ್ಟಿಕತೆ ಕಂಡು ಬಂದಿದ್ದರಿಂದ ಹೆಚ್ಚುವರಿ ಪೌಷ್ಟಿಕಾಂಶ ನೀಡಲಾಗುತ್ತಿದೆ ಎಂದರು.

ಕೇಂದ್ರೀಯ ಉಗ್ರಾಣದ ಪ್ರಾದೇಶಿಕ ವ್ಯವಸ್ಥಾಪಕ ವಿಷ್ಣುವರ್ದನ್ ಮಾತನಾಡಿ, ಕೇಂದ್ರೀಯ ಉಗ್ರಾಣ ನಿಗಮವು ಕೇಂದ್ರ ಗ್ರಾಹಕರ ವ್ಯವಹಾರ ಮತ್ತು ನಾಗರೀಕ ಸರಬರಾಜು ನಿಗಮದ ಉದ್ಯಮವಾಗಿದ್ದು, ದೇಶದ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ವೈಜ್ಞಾನಿಕ ಮತ್ತು ಉತ್ತಮವಾದ ಉಗ್ರಾಣವನ್ನು ಒದಗಿಸುವ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಅನುದಾನದ ಲಭ್ಯತೆ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಗಣನೆಗೆ ತೆಗೆದುಕೊಂಡು ಜಿಲ್ಲೆಯಲ್ಲಿರುವ ಕೊರತೆಗಳನ್ನು ನೀಗಿಸಲು ಯೋಜನೆಯನ್ನು ರೂಪಿಸಲಾಯಿತು. ಈ ಯೋಜನೆಯಲ್ಲಿ ಮುಖ್ಯವಾಗಿ ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಪ್ರಥಮ ಹಂತದಲ್ಲಿ ಜಿಲ್ಲೆಯ 116 ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕಾಂಶದ ಪೂರೈಕೆಯನ್ನು ಮಾಡಲಾಯಿತು. ಇದರಲ್ಲಿ 100 ಮಕ್ಕಳಲ್ಲಿ ಅಪೌಷ್ಟಿಕತೆಯಲ್ಲಿ ಸುಧಾರಣೆಯಾಗಿದೆ. ಆದ್ದರಿಂದ ಈ ಹೆಚ್ಚುವರಿ ಪೌಷ್ಟಿಕಾಂಶ ಪೂರೈಕೆ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರೀಯ ಉಗ್ರಾಣ ನಿಗಮದಿಂದ ಅಪೌಷ್ಟಿಕ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕಾಂಶ ಪೂರೈಕೆಗಾಗಿ ಚೆಕ್ ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು..

ಕೇಂದ್ರೀಯ ಉಗ್ರಾಣದ ಪ್ರಾದೇಶಿಕ ವ್ಯವಸ್ಥಾಪಕ ಕೆ.ಕೆ.ಪಂಡಾ, ಪ್ರಧಾನ ವ್ಯವಸ್ಥಾಪಕಿ ಸುನಾಲಿ ಗವಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶರಣಮ್ಮ, ಜಿಲ್ಲಾ ಮಹತ್ವಾಕಾಂಕ್ಷೆ ಜಿಲ್ಲೆಯ ಕಾರ್ಯಕ್ರಮಾಧಿಕಾರಿ ಯೂಸೂಫ್ ಅಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT