ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು: ರಾಜಕಾಲುವೆ ಒತ್ತುವರಿ ತೆರವಿಗೆ ಒತ್ತಾಯ

Published 20 ಮೇ 2024, 14:18 IST
Last Updated 20 ಮೇ 2024, 14:18 IST
ಅಕ್ಷರ ಗಾತ್ರ

ಲಿಂಗಸುಗೂರು: ಸ್ಥಳೀಯ ಪುರಸಭೆ ವ್ಯಾಪ್ತಿಯ ರಾಜಕಾಲುವೆ ವರ್ಷದಿಂದ ವರ್ಷಕ್ಕೆ ಒತ್ತುವರಿ ಆಗುತ್ತಿದ್ದು ಬೃಹತ್‍ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಅಕ್ರಮ ಕಟ್ಟಡಗಳ ಒತ್ತುವರಿ ತೆರವುಗೊಳಿಸಿ ಪ್ರಾಕೃತಿಕ ಸಂಪತ್ತು ರಕ್ಷಣೆ ಮಾಡಲು ಆಡಳಿತ ಮುಂದಾಗಬೇಕು ಎಂದು ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಒತ್ತಾಯಿಸಿದರು.

ಸೋಮವಾರ ಉಪ ವಿಭಾಗಾಧಿಕಾರಿ ಶಿಂಧೆ ಅವಿನಾಶ ಸಂಜೀವನ್‍ ಅವರಿಗೆ ಮನವಿ ಸಲ್ಲಿಸಿ, ರಾಯಚೂರು ರಸ್ತೆ ಬಳಿ ಹರಿಯುವ ರಾಜಕಾಲುವೆ ಪಟ್ಟಣದ ಮಧ್ಯ ಭಾಗದಿಂದ ವಿಜಯಮಹಾಂತೇಶ್ವರ ಮಠದ ವರೆಗೆ ಪ್ರಾಕೃತಿಕವಾಗಿ ಇದ್ದು ಈಗಾಗಲೆ ಕೆಲ ಪ್ರತಿಷ್ಠಿತರು, ಕಾಲುವೆಗುಂಟ ವಾಸಿಸುವ ಅನೇಕರು ಒತ್ತುವರಿ ಮಾಡಿಕೊಂಡು ವಾಣಿಜ್ಯ ಉದ್ದೇಶಿತ ಕಟ್ಟಡ ನಿರ್ಮಿಸಿಕೊಂಡು ಲಕ್ಷಾಂತರ ಬಾಡಿಗೆ ಹಣ ಪಡೆಯುತ್ತಿದ್ದಾರೆ ಎಂದು ಗಮನ ಸೆಳೆದರು.

‘ರಾಜಕಾಲುವೆ ಒತ್ತುವರಿ ಹೆಚ್ಚಾದಂತೆ ಮಳೆ ನೀರು ಇತರೆ ರಸ್ತೆಗಳಿಗೆ, ಮನೆಗಳಿಗೆ ನುಗ್ಗಿ ಅಪಾರ ನಷ್ಟ ಸಂಭವಿಸುತ್ತ ಸಾಗಿದೆ. ಒತ್ತುವರಿ ಕಟ್ಟಡಗಳ ನಿರ್ಮಾಣ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರೂ ಕೂಡ ಪುರಸಭೆ ಆಡಳಿತ ಮಂಡಳಿ ಹೊಂದಾಣಿಕೆ ಮನೋಭಾವ ಶಾಪವಾಗಿ ಪರಿಣಮಿಸಿದೆ. ತಾಲ್ಲೂಕು ಆಡಳಿತ ಮಧ್ಯಪ್ರವೇಶಿಸಿ ಪ್ರಾಕೃತಿಕ ಸಂಪತ್ತು ರಕ್ಷಣೆಗೆ ಮುಂದಾಗಬೇಕು. ಇಲ್ಲದೆ ಹೋದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ಘಟಕ ಅಧ್ಯಕ್ಷ ಶಿವರಾಜ ನಾಯ್ಕ, ಮುಖಂಡರಾದ ವೆಂಕಟೇಶ, ನಿರುಪಾದಿ ಹಿರೇಮಠ, ಚಂದ್ರು ನಾಯಕ, ಬಸವರಾಜ ನಾಯಕ, ಶಿವರಾಜ ಅಲಬನೂರು, ಶಂಕರ್‍ ಚವ್ಹಾಣ, ವಿವೇಕಾನಂದ, ದೇವೇಂದ್ರ ನಾಯಕ, ಚಂದ್ರಕಾಂತ ಭೋವಿ, ಶಿವರಾಜ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT